

ಪ್ರಸಕ್ತ ಸಾಲಿನ ಕಾನೂನು ಶಾಲೆಯ ಪ್ರವೇಶಾತಿಗೆ ಸಿಎಲ್ಎಟಿ ಕೈಬಿಟ್ಟು ತನ್ನದೇ ಆದ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿಸಿರುವ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ನಿರ್ಧಾರವನ್ನು ಜಾರ್ಖಂಡ್ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.
ಪ್ರವೇಶಾತಿಗಾಗಿ ಆನ್ ಲೈನ್ ಮೂಲಕ ಸೆಪ್ಟೆಂಬರ್ 12ರಂದು ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ, 2020 (ಎನ್‌ಎಲ್‌ಎಟಿ) ನಡೆಸುವುದಾಗಿ ಗುರುವಾರ ಎನ್ಎಲ್ಎಸ್ಐಯು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಸೆಪ್ಟೆಂಬರ್ 28ರಂದು ಸಿಎಲ್ಎಟಿ ಪರೀಕ್ಷೆ ನಿಗದಿಗೊಂಡಿದ್ದು, ಆ ಪ್ರವೇಶ ಪರೀಕ್ಷೆಯನ್ನು ತನ್ನ ಪ್ರವೇಶಾತಿಗೆ ಪರಿಗಣಿಸುವುದಿಲ್ಲ ಎಂದು ಎನ್‌ಎಲ್‌ಎಸ್‌ಐಯು ಸ್ಪಷ್ಟಪಡಿಸಿದೆ.
ಎನ್ಎಲ್ಎಸ್ಐಯು ನಿರ್ಧಾರವು ಸ್ವೇಚ್ಛೆಯಿಂದ ಕೂಡಿದ್ದು, ಅಕ್ರಮವಾಗಿದೆ. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಬೈ-ಲಾ ಹಾಗೂ ಸುಪ್ರೀಂ ಕೋರ್ಟ್ ನ ಹಿಂದಿನ ಆದೇಶಗಳ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿಯಲ್ಲಿ ಮಾಡಿರುವ ಪ್ರಮುಖ ಆರೋಪಗಳು ಹೀಗಿವೆ:ಆ
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಸಿಎಲ್‌ಎಟಿ ಮಹಾಒಕ್ಕೂಟದ ಶಾಶ್ವತ ಸದಸ್ಯನಾಗಿದ್ದುಕೊಂಡೇ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ನಡೆಸಲು ಮುಂದಾಗಿರುವ ಎನ್‌ಎಲ್‌ಎಸ್‌ಐಯು ನಡೆ ಸ್ವೇಚ್ಛೆಯಿಂದ ಕೂಡಿದುದಾಗಿದೆ.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಿಂದ (ಸಿಎಲ್‌ಎಟಿ) ಹೊರಬರುವ ಎನ್‌ಎಲ್‌ಎಸ್‌ಐಯು ನಿರ್ಧಾರವು, ನ್ಯಾಯಬದ್ಧವಾಗಿ ಪರೀಕ್ಷೆಗಳನ್ನು ಪಡೆಯುವಂತಹ ಅರ್ಜಿದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
ಇದಾಗಲೇ ಘೋಷಿತವಾಗಿರುವ ಪ್ರವೇಶ ಪರೀಕ್ಷೆಗಿಂತ 10 ದಿನ ಮುಂಚಿತವಾಗಿ ಹೊಸ ಪರೀಕ್ಷೆಯ ದಿನಾಂಕ ಹಾಗೂ ಪರೀಕ್ಷಾ ವಿಧಾನದ ಬಗ್ಗೆ ಘೋಷಿಸಿದುರುವುದು ಅಕ್ರಮವೂ, ಸ್ವೇಚ್ಛೆಯಿಂದ ಕೂಡಿರುವಂಥದ್ದಾಗಿದೆ
ಎನ್‌ಎಲ್‌ಎಸ್‌ಐಯುನ ನಡೆಯು ನ್ಯಾಯಯುತ ಮತ್ತು ಕ್ರಮಬದ್ಧ ಪರೀಕ್ಷೆಗಳನ್ನು ನಡೆಸುವ ಸಂಬಂಧ ಸುಪ್ರೀಂಕೋರ್ಟ್ ನ ಪೂರ್ವ ನಿದರ್ಶನಗಳಿಗೆ ವಿರುದ್ಧವಾಗಿದೆ.