ಮೆಗಾ ಯೋಜನೆಯಾದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ಗಾಗಿ 23 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿರುವ ಸುಮಾರು 330ಕ್ಕೂ ಹೆಚ್ಚು ಎಕರೆ ಭೂಮಿಗೆ ಸಂಬಂಧಿಸಿದಂತೆ ಇದುವರೆಗೂ ಪರಿಹಾರ ಪಾವತಿಸಿಲ್ಲ ಎಂದು ಈಚೆಗೆ ಕರ್ನಾಟಕ ಕೈಗಾರಿಕಾಭಿವೃದ್ಧಿ ಪ್ರದೇಶ ಮಂಡಳಿಯ (ಕೆಐಎಡಿಬಿ) ಭೂಸ್ವಾಧೀನ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ಗೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ಹಲವು ಮೂಲ ಭೂಮಾಲೀಕರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
"1998-2009ರಲ್ಲಿ ಹೊರಡಿಸಿರುವ ಭೂಸ್ವಾಧೀನ ಆದೇಶಕ್ಕೆ 23 ವರ್ಷಗಳು ತುಂಬಿದ್ದು, ಇದುವರೆಗೂ ವಿಶೇಷ ಭೂಸ್ವಾಧೀನ ಅಧಿಕಾರಿಯು ಪರಿಹಾರ ಆದೇಶ ಮಾಡಿಲ್ಲ. ರೈತರಿಗೆ ತಮ್ಮ ಕೃಷಿ ಭೂಮಿಯ ಉಳುಮೆ ನಿರಾಕರಿಸಿರುವುದು ಮತ್ತು ಅವರು ಜೀವನೋಪಾಯ ಕಳೆದುಕೊಂಡಿರುವುದನ್ನು ಪರಿಗಣಿಸಿ, ವಿಭಾಗೀಯ ಪೀಠ ಮಾಡಿರುವ ಆದೇಶವನ್ನು ಅನುಪಾಲಿಸದೇ ಈ ನ್ಯಾಯಾಲಯಕ್ಕೆ ಬೇರೆ ಆಯ್ಕೆಗಳಿಲ್ಲ. ಅಲ್ಲದೇ, ಭೂಸ್ವಾಧೀನ ಆದೇಶ ವಜಾವು ಭೂಮಾಲೀಕರಿಗೆ ಅನುಕೂಲವಾಗುವುದನ್ನು ಖಾತರಿಪಡಿಸಲಿದೆ” ಎಂದೂ ನ್ಯಾಯಾಲಯ ಹೇಳಿದೆ.
“ಆಕ್ಷೇಪಾರ್ಹವಾದ ಭೂಮಿಯು ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಷರ್ ಕಾರಿಡಾರ್ ಯೋಜನೆಯ ಭಾಗವಾಗಿಲ್ಲ. ಈ ಭೂಮಿಯ ಯಾವುದೇ ಭಾಗವನ್ನು ಎಕ್ಸ್‌ಪ್ರೆಸ್ ದಾರಿ, ವಿವಿಧ ಕಡೆ ಸಾಗುವ ರಸ್ತೆ ನಿರ್ಮಾಣ, ಟೋಲ್ ಪ್ಲಾಜಾ, ವರ್ತುಲ ರಸ್ತೆ ಅಥವಾ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದು, ಇದಕ್ಕೆ ಕೆಐಎಡಿಬಿಯು ಯಾವುದೇ ಆಕ್ಷೇಪ ಮಾಡಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಎಚ್ ಎನ್ ಶಶಿಧರ್ ಅವರು ಹೈಕೋರ್ಟ್‌ನ ವಿಭಾಗೀಯ ಪೀಠವು ಎಂ ಶಕುಂತಲಮ್ಮ ಪ್ರಕರಣದಲ್ಲಿ ಕೆಐಎಡಿಬಿ ವಾದವನ್ನು ತಿರಸ್ಕರಿಸಿತ್ತು. ಕೆ ಎಚ್ ಶಿವಣ್ಣ ಪ್ರಕರಣದಲ್ಲಿ ಪರಿಹಾರ ಮಂಜೂರು ಆದೇಶ ಮಾಡಲು 9 ವರ್ಷ ತೆಗೆದುಕೊಂಡಿದ್ದು, ಇಡೀ ಪ್ರಕ್ರಿಯೆ ಸಮಸ್ಯಾತ್ಮಕವಾಗಿದೆ ಎಂದು ಕೆಐಎಡಿಬಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ್ದನ್ನು ವಿಭಾಗೀಯ ಪೀಠವು ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಆದೇಶವನ್ನು ಕೆಐಎಡಿಬಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದನ್ನು ವಜಾಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು 11 ವರ್ಷವಾದರೂ ಪರಿಹಾರ ಆದೇಶ ಮಾಡದಿರುವುದರಿಂದ 2008-09ರ ಭೂಸ್ವಾಧೀನ ಅಧಿಸೂಚನೆಯನ್ನು ವಜಾ ಮಾಡಬೇಕಿದೆ ಎಂದಿತ್ತು. ಇದು ಸಹ ನೈಸ್ ಲಾಭಕ್ಕಾಗಿ ಎಂದು ಹೇಳಿತ್ತು. ಇದನ್ನು ಪೂರ್ವನಿದರ್ಶನವಾಗಿ ಪರಿಗಣಿಸಿ, ಹೈಕೋರ್ಟ್ ಈ ಆದೇಶ ಮಾಡಿದೆ.
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರವು ಸುಮಾರು 6,999 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಇದರಲ್ಲಿ 111 ಕಿ ಮೀ ಎಕ್ಸ್‌ಪ್ರೆಸ್ ದಾರಿ, ಟೋಲ್ ಪ್ಲಾಜಾಗೆ 4528 ಎಕರೆ, 41 ಕಿ ಮೀ ವರ್ತುಲ ರಸ್ತೆ ನಿರ್ಮಾಣಕ್ಕೆ 2193 ಎಕರೆ, 9.8 ಕಿ ಮೀ ಸಂಪರ್ಕ ರಸ್ತೆ ನಿರ್ಮಾಣಕ್ಕೆ 278 ಎಕರೆ ಎಂದು ಗುರುತಿಸಲಾಗಿತ್ತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಡಿಎಲ್‌ಎನ್ ರಾವ್, ಆರ್‌ವಿಎಸ್ ನಾಯ್ಕ್, ಮಧ್ಯಪ್ರವೇಶಿಕೆದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಸೇರಿ ಹಲವು ವಕೀಲರು ವಾದಿಸಿದ್ದರು.