ನ್ಯಾಯಾಂಗಕ್ಕೆ ಯಾವುದೇ ಪ್ರಕರಣ ದೊಡ್ಡದೂ ಅಲ್ಲ ಚಿಕ್ಕದೂ ಅಲ್ಲ: ಕಾನೂನು ಸಚಿವರ ಹೇಳಿಕೆಗೆ ಸಿಜೆಐ ಪ್ರತಿಕ್ರಿಯೆ

ಜನರು ತಮ್ಮ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಕಾರಣಕ್ಕೆ ನ್ಯಾಯಾಲಯಗಳ ಮೇಲೆ ನಂಬಿಕೆ ಇಟ್ಟಿರುತ್ತಾರೆ ಎಂದು ಸಿಜೆಐ ಒತ್ತಿ ಹೇಳಿದರು.
Justice DY Chandrachud
Justice DY Chandrachud
Published on

ಜಿಲ್ಲಾ ನ್ಯಾಯಾಲಯ, ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ಗಳ ಮುಂದೆ ಬರುವ ಪ್ರತಿಯೊಂದು ಪ್ರಕರಣವೂ ನ್ಯಾಯಾಲಯಕ್ಕೆ ಮುಖ್ಯ. ನ್ಯಾಯಾಧೀಶರು ಅವುಗಳನ್ನು ಭಿನ್ನವಾಗಿ ಕಾಣುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

ಬಾಂಬೆ ವಕೀಲರ ಸಂಘ ಮುಂಬೈನಲ್ಲಿ ಶನಿವಾರ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡುತ್ತಿದ್ದರು.

ತಮ್ಮ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸುವ ಕಾರಣಕ್ಕೆ ಜನರು ನ್ಯಾಯಾಲಯಗಳ ಮೇಲೆ ನಂಬಿಕೆ ಇಟ್ಟಿರುತ್ತಾರೆ ಎಂದು ಸಿಜೆಐ ಒತ್ತಿಹೇಳಿದರು. “ಜಿಲ್ಲಾ ನ್ಯಾಯಾಂಗ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಇರಲಿ ಯಾವುದೇ ಪ್ರಕರಣ ನ್ಯಾಯಾಲಯಗಳಿಗೆ ದೊಡ್ಡದೂ ಅಲ್ಲ ಚಿಕ್ಕದೂ ಅಲ್ಲ. ಏಕೆಂದರೆ ನಮ್ಮ ಮೇಲೆ ಜನರ ವಿಶ್ವಾಸ, ಸ್ವಾತಂತ್ರ್ಯದ ರಕ್ಷಣೆಯ ಹೊಣೆ ಹಾಗೂ ಕಾನೂನಿನ ಸೂಕ್ತ ಪ್ರಕ್ರಿಯೆಯ ನಿರ್ವಹಣೆಯ ಜವಾಬ್ದಾರಿ ಇದೆ” ಎಂದು ಅವರು ಹೇಳಿದರು.

Also Read
ಸುಪ್ರೀಂ ಕೋರ್ಟ್ ರೀತಿಯ ಸಾಂವಿಧಾನಿಕ ನ್ಯಾಯಾಲಯ ಜಾಮೀನು ಅರ್ಜಿ, ನಿಷ್ಪ್ರಯೋಜಕ ಪಿಐಎಲ್ ಆಲಿಸಬಾರದು: ಸಚಿವ ರಿಜಿಜು

ವಿದ್ಯುತ್‌ ಕಳ್ಳತನ ಆರೋಪ ಹೊತ್ತ ವ್ಯಕ್ತಿಯೊಬ್ಬರ ವಿರುದ್ಧ ಹೂಡಲಾಗಿದ್ದ ಒಂಬತ್ತು ಬೇರೆ ಬೇರೆ ಪ್ರಕರಣಗಳಲ್ಲಿ ಶಿಕ್ಷೆಯ ಅವಧಿಯನ್ನು ಒಟ್ಟಿಗೆ ನೀಡುವ ಬದಲು ಒಂದರ ನಂತರ ಒಂದರಂತೆ  ವಿಧಿಸಿದ್ದ ಪ್ರಕರಣವನ್ನು ಅವರು ಇಲ್ಲಿ ಪ್ರಸ್ತಾಪಿಸಿದರು. ನಿನ್ನೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸಲು ಅನುವು ಮಾಡಿಕೊಟ್ಟಿತ್ತು.

“ನಾವು ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ಕೆಲಸ ಮಾಡಿ ಪರಿಹಾರ ನೀಡದೆ ಹೋದರೆ ನಾವೇಕೆ ಇಲ್ಲಿರಬೇಕು? ಸುಪ್ರೀಂ ಕೋರ್ಟ್‌ ಏನು ಮಾಡಿದೆಯೋ ಅದು ಸಂವಿಧಾನದ 136ನೇ ವಿಧಿಯ ಉಲ್ಲಂಘನೆಯಲ್ಲ. ಅರ್ಜಿದಾರರ ಅಂತಹ ಅಳಲು ಆಲಿಸಲೆಂದೇ ಸುಪ್ರೀಂ ಕೋರ್ಟ್‌ ಇದೆ. ಆ ರೀತಿಯ ಪ್ರಕರಣಗಳ ಪರಿಹಾರಕ್ಕಾಗಿ ನಾವು ಸತತ ಶ್ರಮಿಸುತ್ತೇವೆ” ಎಂದು ಅವರು ಹೇಳಿದರು.

“ನಾವು ಆ ಪ್ರಕರಣದಲ್ಲಿ ನಿನ್ನೆ ಮಧ್ಯಪ್ರವೇಶಿಸಬೇಕಾಯಿತು. ಶಿಕ್ಷೆಯನ್ನು ಕಠಿಣಗೊಳಿಸುವ ಬದಲು ನಾಗರಿಕರ ಸ್ವಾತಂತ್ರ್ಯದ ಕಾವಲುಗಾರರು ಎಂದು ರಾಷ್ಟ್ರದ ಜನ ನಮ್ಮ ಮೇಲಿಟ್ಟಿರುವ ನಂಬಿಕೆಯಂತೆ ನಡೆದೆವು” ಎಂದರು.

ಗಮನಾರ್ಹ ಸಂಗತಿ ಎಂದರೆ, ಬುಧವಾರ ಸಂಸತ್‌ ಕಲಾಪದ ವೇಳೆ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಸುಪ್ರೀಂ ಕೋರ್ಟ್‌ ರೀತಿಯ ಸಾಂವಿಧಾನಿಕ ನ್ಯಾಯಾಲಯ ಜಾಮೀನು ಅರ್ಜಿಗಳನ್ನು, ನಿಷ್ಪ್ರಯೋಜಕ ಪಿಐಎಲ್‌ಗಳನ್ನು ಆಲಿಸಬಾರದು ಎಂದು ಅಭಿಪ್ರಾಯಪಟ್ಟಿದ್ದರು.

“ಸರ್ವೋಚ್ಚ ನ್ಯಾಯಾಲಯ ಜಾಮೀನು ಅರ್ಜಿಗಳು ಹಾಗೂ ಎಲ್ಲಾ ನಿಷ್ಪ್ರಯೋಜಕ ಪಿಐಎಲ್‌ಗಳನ್ನು ಆಲಿಸಲು ಪ್ರಾರಂಭಿಸಿದರೆ, ಖಂಡಿತವಾಗಿಯೂ ಅದು ದೊಡ್ಡಮಟ್ಟದಲ್ಲಿ ಸಾಂವಿಧಾನಿಕ ನ್ಯಾಯಾಲಯವೆಂದು ಪರಿಗಣಿಸಲಾಗಿರುವ ಗೌರವಾನ್ವಿತ ನ್ಯಾಯಾಲಯದ ಮೇಲೆ ಹೆಚ್ಚಿನ ಹೊರೆ ಹೊರಿಸುತ್ತದೆ” ಎಂದಿದ್ದರು.

Kannada Bar & Bench
kannada.barandbench.com