
ಯಾವುದೇ ಜಾತಿಯವರು ದೇವಾಲಯದ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಮತ್ತು ಜಾತಿ ಅಸ್ಮಿತೆ ಆಧರಿಸಿ ದೇವಾಲಯದ ಆಡಳಿತ ನಡೆಸುವುದು ಸಂವಿಧಾನದ ಅಡಿಯಲ್ಲಿ ಸಂರಕ್ಷಿತ ಧಾರ್ಮಿಕ ಆಚರಣೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಸಿ ಗಣೇಶನ್ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರ ನಡುವಣ ಪ್ರಕರಣ].
ಜಾತಿ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಸಾಮಾಜಿಕ ಗುಂಪುಗಳು ಸಾಂಪ್ರದಾಯಿಕ ಪೂಜಾ ಪದ್ಧತಿ ಮುಂದುವರಿಸಲು ಅರ್ಹರಾಗಿರಬಹುದಾದರೂ ಒಂದು ಜಾತಿ ಎಂಬುದು ಖುದ್ದು ಸಂರಕ್ಷಿತ 'ಧಾರ್ಮಿಕ ಪಂಗಡ'ವಲ್ಲ ಎಂದು ನ್ಯಾಯಮೂರ್ತಿ ಭರತ್ ಚಕ್ರವರ್ತಿ ವಿವರಿಸಿದರು.
"ಜಾತಿ ತಾರತಮ್ಯದಲ್ಲಿ ನಂಬಿಕೆಯುಳ್ಳವರು 'ಧಾರ್ಮಿಕ ಪಂಗಡ'ದ ಸೋಗಿನಲ್ಲಿ ತಮ್ಮ ದ್ವೇಷ ಮತ್ತು ಅಸಮಾನತೆಯನ್ನು ಮರೆಮಾಚಿ, ಇಂತಹ ವಿಭಜಕ ಪ್ರವೃತ್ತಿಯನ್ನು ಪೋಷಿಸಲು ಮತ್ತು ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸಲು ಫಲವತ್ತಾದ ನೆಲವಾಗಿ ದೇವಾಲಯಗಳನ್ನು ಕಾಣುತ್ತಾರೆ. ಅನೇಕ ಸಾರ್ವಜನಿಕ ದೇವಾಲಯಗಳನ್ನು ನಿರ್ದಿಷ್ಟ 'ಜಾತಿ'ಗೆ ಸೇರಿದವು ಎಂದು ಹಣೆಪಟ್ಟಿ ಹಚ್ಚಲಾಗುತ್ತಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳು ಅಗತ್ಯ ಧಾರ್ಮಿಕ ಆಚರಣೆಗಳು ಮತ್ತು ಧಾರ್ಮಿಕ ಪಂಗಡಗಳ ಹಕ್ಕುಗಳನ್ನು ಮಾತ್ರ ರಕ್ಷಿಸುತ್ತವೆ. ಯಾವುದೇ ಜಾತಿ ದೇವಾಲಯದ ಮಾಲೀಕತ್ವ ಪಡೆಯಲು ಸಾಧ್ಯವಿಲ್ಲ. ಜಾತಿ ಅಸ್ಮಿತೆ ಆಧಾರದ ಮೇಲೆ ದೇವಾಲಯದ ಆಡಳಿತ ನಡೆಸುವುದು ಧಾರ್ಮಿಕ ಆಚರಣೆಯಲ್ಲ. ಈ ಪ್ರಕರಣ ಇನ್ನು ಮುಂದೆ ಈವರೆಗೆ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣ ಎನಿಸುವುದಿಲ್ಲ" ಎಂದು ಅದು ಹೇಳಿತು.
ಜಾತಿ ಅಸ್ಮಿತೆ ಆಧಾರದ ಮೇಲೆ ದೇವಾಲಯದ ಆಡಳಿತ ನಡೆಸುವುದು ಧಾರ್ಮಿಕ ಆಚರಣೆಯಲ್ಲ.
ಮದ್ರಾಸ್ ಹೈಕೋರ್ಟ್
ಅರುಳ್ಮಿಗು ಪೊಂಕಾಳಿಯಮ್ಮನ್ ದೇವಸ್ಥಾನದ ಆಡಳಿತವನ್ನು ಅರಿಳ್ಮಿಗು ಮಾರಿಯಮ್ಮನ್, ಅಂಗಲಮ್ಮನ್ ಪೆರುಮಾಲ್ ದೇವಾಲಯಗಳ ಗುಂಪಿನಿಂದ ಬೇರ್ಪಡಿಸುವ ಶಿಫಾರಸನ್ನು ಅನುಮೋದಿಸುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನಿರ್ದೇಶಿಸುವ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಈ ವಿಚಾರ ತಿಳಿಸಿತು.
ಉಳಿದ ಮೂರು ದೇವಾಲಯಗಳನ್ನು ಬೇರೆ ಬೇರೆಜಾತಿಗಳ ವ್ಯಕ್ತಿಗಳು ನಿರ್ವಹಣೆ ಮಾಡುತ್ತಿದ್ದರೆ ಪೊಂಕಾಳಿಯಮ್ಮನ್ ದೇವಾಲಯನ್ನು ಮೊದಲಿನಿಂದಲೂತಮ್ಮ ಜಾತಿಯವರು ಮಾತ್ರ ನಿರ್ವಹಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದರು.
ಆದಾಗ್ಯೂ, ಅರ್ಜಿದಾರರ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅಂತಹ ಹಕ್ಕುಗಳು ಜಾತಿ ವಿಭಜನೆಗಳನ್ನು ಶಾಶ್ವತಗೊಳಿಸುತ್ತವೆ ಮತ್ತು ಜಾತಿರಹಿತ ಸಮಾಜ ನಿರ್ಮಾಣವಾಗಬೇಕೆಂಬ ಸಾಂವಿಧಾನಿಕ ಗುರಿಗೆ ವಿರುದ್ಧವಾಗಿ ಹೆಜ್ಜೆ ಇರಿಸುತ್ತವೆ ಎಂದಿತು.
"ದೇವಾಲಯ ಎಂಬುದು ಸಾರ್ವಜನಿಕ ದೇವಾಲಯ ಎನಿಸಿಕೊಳ್ಳಲಿದ್ದು, ಎಲ್ಲಾ ಭಕ್ತರು ಪೂಜಿಸಬಹುದು, ನಿರ್ವಹಿಸಬಹುದು ಮತ್ತು ಆಡಳಿತ ನಡೆಸಬಹುದು" ಎಂದು ನ್ಯಾಯಾಲಯ ತಿಳಿಸಿತು.
ಜಾತಿಯು ಒಂದು ಸಾಮಾಜಿಕ ಪಿಡುಗು ಮತ್ತು ಜಾತಿಯನ್ನು ಶಾಶ್ವತಗೊಳಿಸುವ ಯಾವುದೇ ಕ್ರಮವನ್ನು ಯಾವುದೇ ನ್ಯಾಯಾಲಯ ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದಿರುವ ಈ ಹಿಂದಿನ ತೀರ್ಪುಗಳನ್ನು ನ್ಯಾ. ಚಕ್ರವರ್ತಿ ಉಲ್ಲೇಖಿಸಿದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]