ವಿವಾದಿತ ಅಯೋಧ್ಯ ಭೂಮಿಯು ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ವರ್ಷದೊಳಗೆ ಲಖನೌನ ವಿಶೇಷ ಸಿಬಿಐ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರುಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಹಲವು ನಾಯಕರನ್ನು ದೋಷಮುಕ್ತಗೊಳಿಸಿದೆ.
1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯು ಹಲವು ದಶಕಗಳ ರಾಜಕೀಯ ಸಂಕಥನವಾಗಿದ್ದು, ಸುಪ್ರೀಂ ಕೋರ್ಟ್ ನುಡಿಗಳು ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಜಾತ್ಯತೀತವಾದ ಕೊಂಡಿಗೆ ಶಾಕ್ ನೀಡಿತ್ತು.
ನಿರೀಕ್ಷೆಯಂತೆ ಮಸೀದಿ ಧ್ವಂಸಕ್ಕೂ ಮುನ್ನ ವ್ಯವಸ್ಥಿತ ಪಿತೂರಿ ನಡೆದಿತ್ತು ಎಂಬುದನ್ನು ಸಾಬೀತುಪಡಿಸಲು ಕೇದ್ರೀಯ ತನಿಖಾ ದಳವು (ಸಿಬಿಐ) ಅಗತ್ಯ ಸಾಕ್ಷಿ ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿಶೇಷ ಸಿಬಿಐ ನ್ಯಾಯಾಲಯವು ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ದೊಂಬಿ), 153A (ಧರ್ಮದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು), 153-B (ದೇಶದ ಐಕ್ಯತೆಗೆ ಭಂಗ ತರುವುದು), 295 (ಪೂಜಾ ಸ್ಥಳಕ್ಕೆ ಹಾನಿ), 295-A (ಧಾರ್ಮಿಕ ಭಾವನೆಗಳನ್ನು ಕೆರಳಿಸಲು ದುರುದ್ದೇಶಪೂರ್ವಕವಾಗಿ ಯತ್ನಿಸುವುದು), 505 (ಸಾರ್ವಜನಿಕವಾಗಿ ಕಿಡಗೇಡಿ ಹೇಳಿಕೆ ನೀಡುವುದು), 149 (ಕಾನೂನುಬಾಹಿರವಾಗಿ ಗುಂಪುಗೂಡುವುದು) 120B (ಕ್ರಿಮಿನಲ್ ಪಿತೂರಿ) ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು.
ಮಸೀದಿಯನ್ನು ಧ್ವಂಸಗೊಳಿಸಲು ಪಿತೂರಿ ಅಥವಾ ಪ್ರಚೋದನೆ ನೀಡಲಾಗಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಒಳಗೊಂಡ ದಾಖಲೆ ಇಲ್ಲ ಎಂದು 2,000 ಪುಟಗಳ ಹಿಂದಿಯಲ್ಲಿ ಬರೆಯಲಾಗಿರುವ ತೀರ್ಪಿನಲ್ಲಿ ಹೇಳಲಾಗಿದೆ.
ಮಸೀದಿಗೆ ಹಾನಿ ಮಾಡಿದ್ದಾಗ ವರದಿ ಮಾಡಿದ್ದ ಪತ್ರಿಕೆಗಳ ತುಣುಕುಗಳನ್ನು ಸಲ್ಲಿಸಿದ್ದ ಸಿಬಿಐ ದಾಖಲೆಗಳನ್ನು ತಳ್ಳಿಹಾಕಿರುವ ನ್ಯಾಯಾಲಯವು ಪತ್ರಿಕೆಗಳ ಮೂಲ ತುಣುಕುಗಳನ್ನು ನೀಡಲಾಗಿಲ್ಲ ಎಂದಿದೆ. ಮಸೀದಿ ಧ್ವಂಸ ಮಾಡಿದ್ದಾಗ ತೆಗೆದ ಚಿತ್ರಗಳನ್ನು, ನೆಗೆಟಿವ್ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ನ್ಯಾಯಾಲವು ಸಾಕ್ಷಿಗಳನ್ನಾಗಿ ಪರಿಗಣಿಸಲು ತಿರಸ್ಕರಿಸಿದೆ. ಪತ್ರಿಕಾ ವರದಿ, ಚಿತ್ರಗಳ ಜೊತೆಗೆ ಸಿಬಿಐ ಸಲ್ಲಿಸಿದ್ದ ವಿಡಿಯೊ ಟೇಪ್‌ಗಳನ್ನು ಒಪ್ಪದ ಸಿಬಿಐ ನ್ಯಾಯಾಲಯವು ವಿಡಿಯೋ ಕ್ಯಾಸೆಟ್ ಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿಲ್ಲ ಮತ್ತು ವಿಡಿಯೋ ಸ್ಪಷ್ಟವಾಗಿಲ್ಲ ಎಂದು ತಳ್ಳಿಹಾಕಿದೆ.
ಅನ್ಯ ಸಮುದಾಯದ ಸ್ಫೂರ್ತಿಗೆ ಧಕ್ಕೆಯುಂಟು ಮಾಡುವ ಅಥವಾ ದೇಶದ ಏಕತೆ ಮತ್ತು ಸಮಗ್ರತೆಗೆ ಚ್ಯುತಿಯುಂಟು ಮಾಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರ ಎಲ್ಲಾ ರಕ್ಷಣಾ ವ್ಯವಸ್ಥೆ ಮಾಡಿದ್ದು, ನಾಯಕರುಗಳು ಎಲ್ಲಾ ಪ್ರಯತ್ನ ಮಾಡಿದರೂ ಬಾಬರಿ ಮಸೀದಿಯನ್ನು ದೊಂಬಿ ಎದ್ದಿದ್ದ ಗುಂಪು ನಾಶಪಡಿಸಿತು. ರೌಡಿಗಳನ್ನು ಒಳಗೊಂಡ ಕರಸೇವಕರ ಕೂಟವು ಮಸೀದಿ ನಾಶಪಡಿಸಬಹುದು ಎಂಬ ಮುಂದಾಲೋಚನೆ ಆರೋಪಿತರಿಗೆ ಇರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ನಿರ್ದೋಷಿಗಳು ಎಂದು ನ್ಯಾಯಾಲಯ ಘೋಷಿಸಿದೆ.
ನ್ಯಾಯಾಲಯದ ತೀರ್ಪು ಐತಿಹಾಸಿಕವಾಗಿದ್ದು, ಡಿಸೆಂಬರ್ 6ರಂದು ನಡೆದಿದ್ದ ಮಸೀದಿ ಧ್ವಂಸದ ಹಿಂದೆ ಯಾವುದೇ ತೆರನಾದ ಪಿತೂರಿ ಇರಲಿಲ್ಲ ಎಂದು ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ.
ಎಲ್ ಕೆ ಅಡ್ವಾಣಿ ಅವರೂ ತೀರ್ಪನ್ನು ಸ್ವಾಗತಿಸಿದ್ದಾರೆ.