
ಚಲನಚಿತ್ರ ಸಂಘವೊಂದಲ್ಲಿ ಸಿನಿಮಾ ಶೀರ್ಷಿಕೆ ನೋಂದಾಯಿಸದ ಮಾತ್ರಕ್ಕೆ ಹಕ್ಕುಸ್ವಾಮ್ಯ ಕಾಯಿದೆಯಡಿ ರಕ್ಷಣೆ ದೊರೆಯುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸೋಮವಾರ ತೀರ್ಪು ನೀಡಿದ್ದು 1993ರ ಹಿಂದಿ ಚಲನಚಿತ್ರ ಲೂಟೆರೆ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಮಧ್ಯಂತರ ಹಕ್ಕುಸ್ವಾಮ್ಯ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿತು [ದರ್ಶನ್‌ಸಬರ್‌ವಾಲ್ ಅವರ ಪುತ್ರ ಸುನಿಲ್ ಮತ್ತು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ತನ್ನ ಚಿತ್ರದ್ದೇ ಶೀರ್ಷಿಕೆ ಇರಿಸಿಕೊಂಡು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ (ಈಗ ಜಿಯೋಹಾಟ್‌ಸ್ಟಾರ್) ವೆಬ್ ಸರಣಿ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಅರ್ಜಿ ಕೋರಿತ್ತು.
ಸೆಪ್ಟೆಂಬರ್ 2010ರಲ್ಲಿ ವೆಸ್ಟರ್ನ್ ಇಂಡಿಯಾ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನಿಂದ (ಪ್ರತಿವಾದಿ ಸಂಖ್ಯೆ 4) 'ಲೂಟೆರೆ' ಶೀರ್ಷಿಕೆಯ ನೋಂದಣಿಯನ್ನು ಪಡೆದುಕೊಂಡಿದ್ದೇನೆ ಎಂದು ಅರ್ಜಿದಾರ ಸುನಿಲ್ ದರ್ಶನ್ ಸಬರ್‌ವಾಲ್ ವಾದಿಸಿದ್ದರು. ಸ್ಟಾರ್ ಇಂಡಿಯಾ ಹಾಗೂ ಇನ್ನಿತರರು ಅದೇ ಶೀರ್ಷಿಕೆ ಬಳಸದಂತೆ ತಡೆಯಲು ಈ ನೋಂದಣಿ ನನಗೆ ಅವಕಾಶವಿತ್ತಿದೆ ಎಂದು ಅವರು ಪ್ರತಿಪಾದಿಸಿದ್ದರು.
ಆದರೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ನ್ಯಾ. ಸಂದೀಪ್ ಮಾರ್ನೆ ಅವರು ಹಾಗೆ ನೋಂದಣಿ ಮಾಡಿಕೊಳ್ಳುವುದು ಸಂಘದ ಸದಸ್ಯರಲ್ಲದ ಮೂರನೇ ವ್ಯಕ್ತಿಗಳ ವಿರುದ್ಧ ಶಾಸನಬದ್ಧ ಹಕ್ಕುಗಳನ್ನು ಅರ್ಜಿದಾರರಿಗೆ ಒದಗಿಸುವುದಿಲ್ಲ ಎಂದು ಹೇಳಿತು.
ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು
ಕೃತಿಸ್ವಾಮ್ಯ ಕಾಯಿದೆಯಡಿ ಸಿನಿಮಾದ ಶೀರ್ಷಿಕೆಯಷ್ಟೇ ಕೃತಿ ಅಥವಾ ರಚನೆ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಅರ್ಜಿದಾರರ ಪರವಾಗಿ ಶಾಸನಬದ್ಧ ಹಕ್ಕು ಸೃಷ್ಟಿಯಾಗುವುದಿಲ್ಲ.
ಚಲನಚಿತ್ರ ಶೀರ್ಷಿಕೆಗಳು ಹಕ್ಕುಸ್ವಾಮ್ಯಕ್ಕೆ ಒಳಪಡುವುದಿಲ್ಲವಾದ್ದರಿಂದ ವಾದಿ 'ಮೇಲ್ನೋಟಕ್ಕೆ ಪ್ರಕರಣ' ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.
ಚಿತ್ರ ಶೀರ್ಷಿಕೆಗಷ್ಟೇ ಹಕ್ಕುಸ್ವಾಮ್ಯ ನೀಡಬಾರದು ಎಂಬುದು ಈಗಾಗಲೇ ಇತ್ಯರ್ಥಗೊಂಡಿರುವ ಕಾನೂನು. ಹೀಗಾಗಿ ಅರ್ಜಿದಾರರಿಗೆ ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಯಾವುದೇ ಹಕ್ಕು ಪಡೆಯಲು ಸಾಧ್ಯವಿಲ್ಲ.
ಸಂಘಗಳ ಸದಸ್ಯರ ನಡುವಿನ ಆಂತರಿಕ ನೋಂದಣಿಗಳು ಕಾನೂನು ಮಾನ್ಯತೆ ಹೊಂದಿರದ ಸಂಪೂರ್ಣ ಖಾಸಗಿ ವ್ಯವಸ್ಥೆಗಳಾಗಿದ್ದು ಅಂತಹ ವ್ಯವಸ್ಥೆಗಳನ್ನು ಸಂಘದ ಸದಸ್ಯರ ನಡುವೆ ಮಾತ್ರ ಜಾರಿಗೊಳಿಸಬಹುದು.
ಮೊಕದ್ದಮೆ ಹೂಡುವಲ್ಲಿ ವಾದಿ ವಿಳಂಬ ಧೋರಣೆ ತಳೆದಿದ್ದು ವೆಬ್ ಸರಣಿ ಈಗಾಗಲೇ ಬಿಡುಗಡೆಯಾಗಿ ಸಕ್ರಿಯವಾಗಿ ಪ್ರಸಾರವಾಗುತ್ತಿದ್ದು ತಾತ್ಕಾಲಿಕ ತಡೆಯಾಜ್ಞೆ ಪರಿಹಾರ ನೀಡಿದರೆ ಅದು ನಿಷ್ಪ್ರಯೋಜಕವಾಗುತ್ತದೆ.
[ತೀರ್ಪಿನ ಪ್ರತಿ]