ಕ್ರಿಮಿನಲ್ ಮೂತ್ರಪಿಂಡ ಅಥವಾ ಹೃದಯ ಎಂಬುದು ಇಲ್ಲ: ಕೇರಳ ಹೈಕೋರ್ಟ್ ಹೀಗೆ ಹೇಳಿದ್ದೇಕೆ?

ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್ ಮಾತ್ರವೇ ಅಲ್ಲದೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಸಹ ಜಾತಿ, ಮತ, ಧರ್ಮ ಅಥವಾ ಕ್ರಿಮಿನಲ್ ಹಿನ್ನೆಲೆ ಲೆಕ್ಕಿಸದೆ ಅಗತ್ಯವಿರುವವರಿಗೆ ತಮ್ಮ ಅಂಗಾಂಗ ದಾನ ಮಾಡಲಿ ಎಂದು ನ್ಯಾಯಾಲಯ ಹೇಳಿದೆ.
Justice PV Kunhikrishnan, Kerala High Court
Justice PV Kunhikrishnan, Kerala High Court

ಅಂಗಾಂಗ ದಾನದ ವಿಚಾರಕ್ಕೆ ಬಂದಾಗ ವ್ಯಕ್ತಿಯ ಕ್ರಿಮಿನಲ್‌ ಪೂರ್ವಾಪರಗಳು ಮಾನದಂಡವಾಗಿರಬಾರದು ಮತ್ತು ಕ್ರಿಮಿನಲ್‌ ಹಿನ್ನೆಲೆ ಇರುವ ವ್ಯಕ್ತಿಗಳ ವಿರುದ್ಧ ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯಿದೆ- 1994 ಮತ್ತು ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಗಳು-2014 ಅಂತಹ ಯಾವುದೇ ತಾರತಮ್ಯ ಎಸಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ.

ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ಅಗತ್ಯವಿದ್ದ ರೋಗಿಗೆ ಮೂತ್ರಪಿಂಡ ದಾನ ಮಾಡಲು ಅವಕಾಶ ನೀಡದ ಎರ್ನಾಕುಲಂ ಜಿಲ್ಲಾ ಮಾನವ ಅಂಗಗಳ ಕಸಿ ಪರವಾನಗಿ ಸಮಿತಿಯ ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿತು. ಸಮಿತಿಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ನ್ಯಾ. ಪಿ ವಿ ಕುನ್ಹಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ತ್ವರಿತವಾಗಿ ಮನವಿ ಪರಿಶೀಲಿಸುವಂತೆ ಸಮಿತಿಗೆ ಸೂಚಿಸಿತು.

"ಕ್ರಿಮಿನಲ್ ಮೂತ್ರಪಿಂಡ ಅಥವಾ ಕ್ರಿಮಿನಲ್ ಯಕೃತ್ತು ಇಲ್ಲವೇ ಕ್ರಿಮಿನಲ್ ಹೃದಯ ಎಂಬ ಯಾವುದೇ ಅಂಗಾಂಗಳು ಮಾನವ ದೇಹದಲ್ಲಿಲ್ಲ! ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಯ ಅಂಗ ಮತ್ತು ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಯ ಅಂಗಾಂಗಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಮ್ಮೆಲ್ಲರ ಒಳಗೆ ಮಾನವ ರಕ್ತ ಹರಿಯುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ಕ್ರಿಮಿನಲ್ ಮೂತ್ರಪಿಂಡ ಅಥವಾ ಕ್ರಿಮಿನಲ್ ಯಕೃತ್ತು ಇಲ್ಲವೇ ಕ್ರಿಮಿನಲ್ ಹೃದಯ ಎಂಬ ಯಾವುದೇ ಅಂಗಾಂಗಳು ಮಾನವ ದೇಹದಲ್ಲಿಲ್ಲ

ನ್ಯಾಯಮೂರ್ತಿ ಪಿವಿ ಕುಂಹಿಕೃಷ್ಣನ್

"ಒಬ್ಬ ಮನುಷ್ಯ ಸಾವಿನ ಹಾಸಿಗೆಯಲ್ಲಿದ್ದಾನೆ ಮತ್ತು ಅವನ ಸ್ನೇಹಿತ ತನ್ನ ಅಂಗವನ್ನು ದಾನ ಮಾಡಲು ಮುಂದೆ ಬರುತ್ತಿದ್ದಾನೆ. ಕಾಯಿದೆ 1994 ಮತ್ತು ನಿಯಮ 2014ರ ಪ್ರಕಾರ ಯಾವುದೇ ನಿಷೇಧ ಇಲ್ಲದಿದ್ದರೂ ದಾನಿಯು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಗಮನಿಸಿ ಸಮಿತಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ಅರ್ಜಿ ತಿರಸ್ಕರಿಸುತ್ತದೆ. ಸಮಿತಿಯು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ "ಎಂದು ನ್ಯಾಯಾಲಯ ಹೇಳಿದೆ. ಹೆಚ್ಚು ನಾಗರಿಕರು ಅಂಗಾಂಗ ದಾನ ಮಾಡಲು ಪ್ರೇರೇಪಿಸುವಂತೆ ಸಮಿತಿಯ ನಿರ್ಧಾರಗಳು ಇರಬೇಕು ಎಂದು ನ್ಯಾಯಾಲಯ ತಿಳಿಹೇಳಿತು.

"ಪರವಾನಗಿ ಸಮಿತಿಯ ನಿರ್ಧಾರಗಳು ಜನರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಪ್ರೇರೇಪಿಸಬೇಕು. ಭಾರತದಲ್ಲಿ ಅಂಗಾಂಗ ದಾನದ ಸರಾಸರಿ ಹೆಚ್ಚಿಸಲು ಜಾಗೃತಿ ಅಗತ್ಯ. ಕೆಲವು ಪಾಶ್ಚಾತ್ಯ ದೇಶಗಳಿಗೆ ಈ ಪ್ರಮಾಣ ಒಂದು ದಶಲಕ್ಷ ಜನಸಂಖ್ಯೆಗೆ 36ರಷ್ಟಿದೆ. ಭಾರತದಲ್ಲಿ ಈ ಪ್ರಮಾಣ ಬಹಳ ಕಡಿಮೆ ಇದ್ದು ಅದು 0.3/ದಶಲಕ್ಷದಷ್ಟು ಇದೆ. ಅಮೆರಿಕದಲ್ಲಿ ಇದು ಸುಮಾರು 26/ದಶಲಕ್ಷದಷ್ಟಿದೆ. ಆದ್ದರಿಂದ ಅಂಗಾಂಗ ದಾನಕ್ಕೆ ಎಲ್ಲಾ ನೆಲೆಯಿಂದ ಪ್ರೇರಣೆ ಮತ್ತು ಸ್ಫೂರ್ತಿ ಅಗತ್ಯವಾಗಿದೆ ಎಂದು ತೀರ್ಪು ಹೇಳಿದೆ.

ಅಂಗಾಂಗ ದಾನಕ್ಕೆ ಎಲ್ಲಾ ನೆಲೆಯಿಂದ ಪ್ರೇರಣೆ ಮತ್ತು ಸ್ಫೂರ್ತಿ ಅಗತ್ಯ

ಕೇರಳ ಹೈಕೋರ್ಟ್

ಗಂಭೀರವಾದ ಮೂತ್ರಪಿಂಡ ವೈಫಲ್ಯ ಎದುರಿಸುತ್ತಿರುವ ವ್ಯಕ್ತಿಯ ಕುಟುಂಬ ಸದಸ್ಯರು ಸೂಕ್ತ ದಾನಿಗಳಾಗಿಲ್ಲ ಎಂದು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಮೂತ್ರಪಿಂಡ ದಾನ ಮಾಡಲು ಸ್ವಯಂಪ್ರೇರಿತರಾಗಿರುವ ತನ್ನ ಸ್ನೇಹಿತರಿಗೆ ಅನುಮತಿ ನೀಡಲು ನಿರಾಕರಿಸಿದ ಸಮಿತಿಯ ನಿರ್ಧಾರವನ್ನು ರದ್ದುಗೊಳಿಸಲು ಅರ್ಜಿದಾರರು ವಕೀಲ ಮೊಹಮ್ಮದ್ ಇಕ್ಬಾಲ್ ಅವರ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

"1994 ರ ಕಾಯಿದೆ ಕೋಮು ಸೌಹಾರ್ದತೆ ಮತ್ತು ಜಾತ್ಯತೀತತೆಯ ಕಲ್ಪನೆಗೆ ದಾರಿ ಮಾಡಿಕೊಡಲಿ. ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್‌ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ತಮ್ಮ ಜಾತಿ, ಮತ, ಧರ್ಮ ಅಥವಾ ಕ್ರಿಮಿನಲ್ ಹಿನ್ನೆಲೆ ಲೆಕ್ಕಿಸದೆ ಅಗತ್ಯವಿರುವವರಿಗೆ ತಮ್ಮ ಅಂಗಾಂಗ ದಾನ ಮಾಡಲಿ. ಆ ದಿನ ನಮ್ಮ ಸಂವಿಧಾನ ರೂಪೊಗೊಂಡವರು ಕಂಡ ಕನಸು ನನಸಾಗಲಿದೆ” ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೆ, ಸಭೆ ಕರೆಯುವಲ್ಲಿ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಿತಿ ವಿಳಂಬ ಧೋರಣೆ ಅನುಸರಿಸದಂತೆ ಕೆಲ ನಿರ್ದೇಶನಗಳನ್ನು ನ್ಯಾಯಾಲಯ ನೀಡಿತು.

Kannada Bar & Bench
kannada.barandbench.com