Justices Aniruddha Bose and Sudhanshu Dhulia and Supreme Court
Justices Aniruddha Bose and Sudhanshu Dhulia and Supreme Court

[ಕೋರೆಗಾಂವ್‌ ಪ್ರಕರಣ] ಹಿಂಸಾ ಸಾಹಿತ್ಯ ಹೊಂದಿದ್ದರೆ ಅದು ಯುಎಪಿಎ ಅಡಿ ಉಗ್ರ ಚಟುವಟಿಕೆಯಾಗದು: ಜಾಮೀನು ವೇಳೆ ಸುಪ್ರೀಂ

ಗೊನ್ಸಾಲ್ವೆಸ್ ಮತ್ತು ಫೆರೇರಾ ಯುಎಪಿಎ ಅಡಿಯಲ್ಲಿ ಜಾಮೀನು ನೀಡಬಾರದಂತಹ ಕಟ್ಟುನಿಟ್ಟಿನ ನಿಯಮಾವಳಿಗೊಳಪಡುವ ಉಗ್ರ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದ ನ್ಯಾಯಾಲಯ.

ಹಿಂಸೆ ಕುರಿತ ಸಾಹಿತ್ಯ ಹೊಂದಿದ್ದ ಮಾತ್ರಕ್ಕೆ ಅದು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ  (ಯುಎಪಿಎ) ಅಡಿ ಭಯೋತ್ಪಾದಕ ಚಟುವಟಿಕೆಯಾಗದು ಎಂದು ಶುಕ್ರವಾರ ತಿಳಿಸಿರುವ ಸುಪ್ರೀಂ ಕೋರ್ಟ್‌ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು, ಸಾಮಾಜಿಕ ಹೋರಾಟಗಾರರಾದ ವರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್‌ ಫೆರೇರಾ ಅವರಿಗೆ ಜಾಮೀನು ನೀಡಿದೆ [ವೆರ್ನಾನ್‌ ಮತ್ತ ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಗಮನಾರ್ಹವಾಗಿ ಗೊನ್ಸಾಲ್ವೆಸ್ ಮತ್ತು ಫೆರೇರಾ ಯುಎಪಿಎ ಸೆಕ್ಷನ್ 43 ಡಿ (5) ಅಡಿಯಲ್ಲಿ ಜಾಮೀನು ನೀಡಬಾರದಂತಹ ಕಟ್ಟುನಿಟ್ಟಿನ ನಿಯಮಾವಳಿಗೊಳಪಡುವ ಉಗ್ರ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿದೆ.

ಮೇಲ್ಮನವಿದಾರರು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದರು ಇಲ್ಲವೇ 1967ರ ಕಾಯಿದೆಯ ಸೆಕ್ಷನ್ 43 ಡಿ (5)ರ ನಿಯಮಾವಳಿ ಅನ್ವಯವಾಗುವಂತಹ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತೀರ್ಪಿನ ಪ್ರಮುಖಾಂಶಗಳು

  • ಕ್ರಿಮಿನಲ್ ಬಲದ ಮೂಲಕ ಸಾರ್ವಜನಿಕ ಹುದ್ದೆಯಲ್ಲಿರುವವರ ಮೇಲೆ ದಾಳಿ ಮಾಡುವಂತಹ ಚಟುವಟಿಕೆಗಳಲ್ಲಿ ಈ ಇಬ್ಬರು ತೊಡಗಿದ್ದರು ಎಂದು ಮೇಲ್ನೋಟಕ್ಕೆ ಹೇಳುವಂತಹ ಯಾವುದೇ ಆಧಾರ ಇಲ್ಲ.

  • ಮೇಲ್ಮನವಿದಾರರ ವಿರುದ್ಧ ಭಯೋತ್ಪಾದಕ ಕೃತ್ಯ ಎಸಗಿರುವ ಅಥವಾ ಸಂಚು ರೂಪಿಸಿದ ಆರೋಪ ನಿಜವೆಂದು ನಂಬುವಂತಹ ಮೇಲ್ನೋಟದ ಯಾವುದೇ ಸಮಂಜಸವಾದ ಆಧಾರಗಳಿಲ್ಲ.

  • ಸಾಕ್ಷಿಗಳ ಹೇಳಿಕೆಗಳು. ಮೇಲ್ಮನವಿದಾರರ ಭಯೋತ್ಪಾದಕ ಕೃತ್ಯವನ್ನು ಉಲ್ಲೇಖಿಸುವುದಿಲ್ಲ.

  • ಸಾಕ್ಷ್ಯವಾಗಿ ಸಲ್ಲಿಸಿರುವ ಪತ್ರಗಳನ್ನು ಮೇಲ್ಮನವಿದಾರರಿಂದ ವಶಪಡಿಸಿಕೊಂಡಿಲ್ಲ. ಅವುಗಳಲ್ಲಿ ಮೂರನೇ ವ್ಯಕ್ತಿಗಳಾಗಿ ಮಾತ್ರ ಅವರ ಪ್ರಸ್ತಾಪವಿದೆ. ಆದ್ದರಿಂದ ಇಂತಹ ಪತ್ರಗಳು ದುರ್ಬಲ ಮೌಲ್ಯಗಳಿಂದ ಕೂಡಿವೆ.

ಪುಣೆಯ ಭೀಮಾ ಕೋರೆಗಾಂವ್ ಕದನ ಸ್ಮಾರಕ ಸ್ಥಳದಲ್ಲಿ 2017ರಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ  ಹೋರಾಟಗಾರರಾದ ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ ಸೇರಿದಂತೆ 14 ಮಂದಿ ಕಾರಣ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿಸಿತ್ತು. ಅವರ ಪ್ರಚೋದನಕಾರಿ ಭಾಷಣಗಳಿಂದಾಗಿ ಕೋರೆಗಾಂವ್-ಭೀಮಾ ಕದನದ ಇನ್ನೂರನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದಿದ್ದ ಕಾರ್ಯಕ್ರಮದ ವೇಳೆ ಮರಾಠ ಮತ್ತು ದಲಿತ ಸಮುದಾಯದ ನಡುವೆ ಘರ್ಷಣೆ ಸಂಭವಿಸಿತ್ತು ಎಂಬ ದೂರುಗಳು ಕೇಳಿಬಂದಿದ್ದವು.  

ತೆಲುಗು ಕವಿ ವರವರರಾವ್‌, ವಕೀಲೆ ಸುಧಾ ಭಾರದ್ವಾಜ್‌ ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾ, ಚಿಂತಕ ಆನಂದ್‌ ತೇಲ್ತುಂಬ್ಡೆ ಬುಡಕಟ್ಟು ಸಮುದಾಯಗಳ ಹೋರಾಟಗಾರ ದಿವಂಗತ ಫಾದರ್‌ ಸ್ಟಾನ್‌ಸ್ವಾಮಿ ಸೇರಿದಂತೆ ಅನೇಕರನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು. ಅವರಲ್ಲಿ ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ ಇನ್ನೂ ಕೆಲವರು ಸೆರೆವಾಸ ಅನುಭವಿಸುತ್ತಿದ್ದಾರೆ. ಸ್ಟಾನ್‌ ಸ್ವಾಮಿ ಜೈಲಿನಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

Related Stories

No stories found.
Kannada Bar & Bench
kannada.barandbench.com