ಇಂದು ಸುಪ್ರೀಂ ಕೋರ್ಟ್ ಸೇವೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿಗೆ ಅಧಿಕೃತ ವಿದಾಯ ಕಾರ್ಯಕ್ರಮ ಆಯೋಜಿಸದಂತೆ ಸುಪ್ರೀಂ ಕೋರ್ಟ್‌ನ ವಕೀಲರ ಸಂಘಗಳು ನಿರ್ಧರಿಸಿರುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನಿವೃತ್ತಿಯ ನಂತರ ಅವರಿಗೆ ವಿದಾಯ ಸಮಾರಂಭವನ್ನು ಆಯೋಜಿಸುವುದು ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘಗಳು (ಎಸ್‌ಸಿಎಒಆರ್‌ಎ) ನಡೆಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ, ನ್ಯಾಯಮೂರ್ತಿ ತ್ರಿವೇದಿ ಅವರ ನಿವೃತ್ತಿಯ ವೇಳೆ ಅವರಿಗೆ ವಿದಾಯ ಹೇಳುವ ಕಾರ್ಯಕ್ರಮವನ್ನು ಈ ಸಂಘಗಳು ನಿಗದಿಪಡಿಸಿರಲಿಲ್ಲ.
ಈ ಅಂಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ತ್ರಿವೇದಿ ಅವರ ಕೊನೆಯ ಕೆಲಸದ ದಿನದಂದು ಅವರನ್ನು ಗೌರವಿಸಲು ನಡೆದ ಸಿಜೆಐ ಗವಾಯಿ ಅವರ ನೇತೃತ್ವದ ವಿಧ್ಯುಕ್ತ ಪೀಠವು ಗಮನಿಸದೆ ಇರಲಿಲ್ಲ.
ಇಂದು ಬೆಳಿಗ್ಗೆ ವಿಧ್ಯುಕ್ತ ಪೀಠದ ಮುಂದೆ ಹಾಜರಿದ್ದ ಎಸ್‌ಸಿಬಿಎ ಅಧ್ಯಕ್ಷರಾದ ಕಪಿಲ್ ಸಿಬಲ್ ಮತ್ತು ಉಪಾಧ್ಯಕ್ಷೆ ರಚನಾ ಶ್ರೀವಾಸ್ತವ ಅವರನ್ನು ಶ್ಲಾಘಿಸುವ ವೇಳೆ ಸಿಜೆಐ ಗವಾಯಿ ಈ ಅಂಶವನ್ನು ಉಲ್ಲೇಖಿಸಿದರು. "ಸಿಬಲ್ ಮತ್ತು ರಚನಾ ಶ್ರೀವಾಸ್ತವ ಇಬ್ಬರೂ ಇಲ್ಲಿದ್ದಾರೆ ಎಂಬುದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ ಸಂಘವು (ಎಸ್‌ಸಿಬಿಎ) ತೆಗೆದುಕೊಂಡ ನಿಲುವನ್ನು ನಾನು ಬಹಿರಂಗವಾಗಿ ಖಂಡಿಸುತ್ತೇನೆ. ಸರಳ ಮತ್ತು ನೇರವಾಗಿ ಇರುವುದನ್ನು ನಾನು ನಂಬುತ್ತೇನೆ. ಇಂತಹ ಸಂದರ್ಭದಲ್ಲಿ, ಸಂಘವು ಈ ರೀತಿಯ ನಿಲುವನ್ನು ತೆಗೆದುಕೊಳ್ಳಬಾರದಿತ್ತು. ಹಾಗಾಗಿ, ಆಡಳಿತ ಮಂಡಳಿಯ ನಿರ್ಣಯದ ಹೊರತಾಗಿಯೂ, ಅವರು ಇಲ್ಲಿದ್ದಾರೆ ಎಂಬುದಕ್ಕೆ ನಾನು ಸಿಬಲ್ ಮತ್ತು ಶ್ರೀವಾಸ್ತವ ಅವರನ್ನು ಬಹಿರಂಗವಾಗಿ ಶ್ಲಾಘಿಸುತ್ತೇನೆ" ಎಂದರು.
ಮುಂದುವರೆದು, "ಕೋರ್ಟ್ ಹಾಲ್ ತುಂಬುವ ರೀತಿಯಲ್ಲಿ ಎಲ್ಲರೂ ನೆರೆದಿರುವುದನ್ನು ನೋಡಿದರೆ ಬೇಲಾ ತ್ರಿವೇದಿ ಅವರು ತುಂಬಾ ಉತ್ತಮ ನ್ಯಾಯಮೂರ್ತಿಗಳು ಎನ್ನುವುದು ವಿಧಿತವಾಗುತ್ತದೆ. ವಿಭಿನ್ನ ರೀತಿಯ ನ್ಯಾಯಮೂರ್ತಿಗಳಿರುತ್ತಾರೆ. ಆದರೆ, ಆ ಆಂಶವು ಇಂದು ಸಂಜೆ 4:30ಕ್ಕೆ ಮಾಡಬೇಕಾದ ಕೆಲಸವನ್ನು (ವಿದಾಯ ಸಮಾರಂಭ) ಮಾಡದೆ ಇರಲು ಒಂದು ಕಾರಣವಾಗಬಾರದು" ಎಂದು ಸಿಜೆಐ ಗವಾಯಿ ಬೇಸರಿಸಿದರು.
ಸಿಜೆಐ ಗವಾಯಿ ಅವರು, ನ್ಯಾ. ತ್ರಿವೇದಿ ಅವರ ದೃಢ ವ್ಯಕ್ತಿತ್ವ, ನಿರ್ಭೀತಿ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.
ನ್ಯಾ. ಮಸೀಹ್ ಅವರು ನ್ಯಾ. ತ್ರಿವೇದಿ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಅವರು ತೋರಿದ ಅಕ್ಕರೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಇದೇ ವೇಳೆ, ಅವರೂ ಸಹ ವಕೀಲರ ಸಂಘಗಳು ಅವರಿಗೆ ವಿದಾಯವನ್ನು ನೀಡದ ಬಗ್ಗೆ ತಮ್ಮ ಅಸಮಾಧಾನವನ್ನು ಸೂಚಿಸಿದರು.
ತುಂಬಿದ ಕೋರ್ಟ್ ಹಾಲ್‌ನಲ್ಲಿ ನೆರೆದಿದ್ದ ಹಿರಿ, ಕಿರಿಯ ನ್ಯಾಯವಾದಿಗಳು ತಮ್ಮ ಬಗ್ಗೆ ಸೂಚಿಸಿದ ಮೆಚ್ಚುಗೆಯಿಂದ ಭಾವುಕರಾದ ನ್ಯಾ. ತ್ರಿವೇದಿಯವರು ವಿಧ್ಯುಕ್ತ ಪೀಠದ ಕೊನೆಯಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ವಿದಾಯದ ಮಾತುಗಳನ್ನು ಆಡಿದರು.
"ನನ್ನ ಮೂವತ್ತು ವರ್ಷಗಳ ಕರ್ತವ್ಯದಲ್ಲಿ ನಾನು ಯಾವಾಗಲೂ ನನ್ನ ತೀರ್ಪುಗಳ ಮೂಲಕವೇ ಮಾತನಾಡಿದ್ದೇನೆ. ಇದು ನನ್ನ ಸೇವೆಯ ಕೊನೆಯ ದಿನವಾಗಿದೆ. ನಾನು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ... ನಾನು ಯಾವಾಗಲೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇನೆ. ನಾನು ಕಠಿಣವಾಗಿ ಕಾರ್ಯನಿರ್ವಹಿಸಿದ್ದೇನೆ, ಆದರೆ ಇದರ ಹಿಂದಿನ ಆತ್ಯಂತಿಕ ಉದ್ದೇಶ ಸಂಸ್ಥೆಯ ಘನತೆಯಾಗಿತ್ತೇ ಹೊರತು ಮತ್ತೇನೂ ಅಲ್ಲ... ನಾನು ಈ ಸಂಸ್ಥೆಯ ಭಾಗವಾಗಿರುವುದಕ್ಕೆ, ಈ ಪಯಣದ ಭಾಗವಾಗಿರುವುದಕ್ಕೆ ಕೃತಜ್ಞಳಾಗಿದ್ದೇನೆ," ಎಂದರು.