ಸುಪ್ರೀಂಕೋರ್ಟ್‌ನಲ್ಲಿ ಮಹಿಳೆ ಯಾವತ್ತೂ ಮುಖ್ಯ ನ್ಯಾಯಮೂರ್ತಿಯಾಗಿಲ್ಲ ಎಂದು ಅಟಾರ್ನಿ ಜನರಲ್‌ ಹೇಳಿದ್ದೇಕೆ?

ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚಳವಾದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ಪ್ರಾಮುಖ್ಯತೆ ನೀಡದಿರುವ ಕ್ರಮವನ್ನು ಸರಿಪಡಿಸಲು ಸಹಾಯಕವಾಗುತ್ತದೆ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅಭಿಪ್ರಾಯಪಟ್ಟಿದ್ದಾರೆ.
Stop Sexual Offences
Stop Sexual Offences

ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚಳವಾದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ಪ್ರಾಮುಖ್ಯತೆ ನೀಡದಿರುವ ಕ್ರಮವನ್ನು ಸರಿಪಡಿಸಲು ಸಹಾಯಕವಾಗುತ್ತದೆ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಸಂತ್ರಸ್ತೆಗೆ ರಾಖಿ ಕಟ್ಟಿದರೆ ಅತ್ಯಾಚಾರ ಆರೋಪಿಗೆ ಜಾಮೀನು ನೀಡುವುದಾಗಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ವೇಳೆ ವೇಣುಗೋಪಾಲ್‌ “ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ‌ ಹೆಚ್ಚಿಸುವುದರಿಂದ ಲೈಂಗಿಕ ದೌರ್ಜನ್ಯವನ್ನು ಒಳಗೊಂಡ ಪ್ರಕರಣಗಳಲ್ಲಿ ಹೆಚ್ಚು ಸಮತೋಲಿತವಾದ ಮತ್ತು ಸೂಕ್ತ ಒತ್ತು ನೀಡುವ ಕ್ರಮದೆಡೆಗೆ ಸಾಗಬಹುದು ಎಂದಿದ್ದಾರೆ.

“ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಾಧೀಶರನ್ನು ಹೆಚ್ಚಿಸುವುದರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಧೀಶರು ಹೆಚ್ಚು ಸಮತೋಲಿತವಾದ ಹಾಗೂ ಒತ್ತು ನೀಡುವ ವಿಧಾನವನ್ನು ಅನುಸರಿಸಲು ಸಹಾಯಕವಾಗುತ್ತದೆ” ಎಂದು ಅಟಾರ್ನಿ ಜನರಲ್ (ಎಜಿ) ಕೆ.ಕೆ.ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ತಮ್ಮ ಲಿಖಿತ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ. ಮುಂದುವರೆದು ಅವರು, “ಉದಾಹರಣೆಗೆ ಹೇಳುವುದಾದರೆ, 34 ನ್ಯಾಯಮೂರ್ತಿಗಳ ಅನುಮೋದಿತ ಸಂಖ್ಯೆಯ ಈ ನ್ಯಾಯಾಲಯವು (ಸುಪ್ರೀಂಕೋರ್ಟ್‌) ಕೇವಲ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ. ಸುಪ್ರೀಂಕೋರ್ಟ್‌ಗೆ ಇದುವರೆಗೆ ಮಹಿಳಾ ಮುಖ್ಯ ನ್ಯಾಯಮೂರ್ತಿ ನೇಮಕವಾಗಿಲ್ಲ” ಎಂದು ವಿವರಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಾಗ ಆರೋಪಿಗಳ ವಿರುದ್ಧ ನ್ಯಾಯಾಧೀಶರು ಲಘುವಾಗದಿರಲು ಸುಪ್ರೀಂಕೋರ್ಟ್‌ನ ವಕೀಲೆ ಅಪರ್ಣಾ ಭಟ್ ನೇತೃತ್ವದ ಒಂಬತ್ತು ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿ ಇತರ ಹೈಕೋರ್ಟ್‌ಗಳು ನೀಡಿದ್ದ ಆದೇಶಗಳನ್ನು ಕೂಡ ಉಲ್ಲೇಖಿಸಲಾಗಿತ್ತು. ಇಂತಹ ತೀರ್ಪುಗಳು ಘೋರ ಅಪರಾಧವನ್ನು ಕ್ಷುಲ್ಲಕಗೊಳಿಸುವಲ್ಲಿ ಅಂತ್ಯವಾಗುತ್ತವೆ. ಅಲ್ಲದೆ ಇಂತಹ ಅವಲೋಕನ ಅಥವಾ ನಿರ್ದೇಶನಗಳು ಮೂಲತಃ ಅಪರಾಧದ ಸಾಮಾನ್ಯೀಕರಣಕ್ಕೆ ಕೂಡ ಕಾರಣವಾಗಬಹುದು ಎಂದು ದೂರಲಾಗಿತ್ತು.

ಮಧ್ಯಪ್ರದೇಶ ಹೈಕೋರ್ಟ್‌ ಆದೇಶ ಪಾಲಿಸಲಾಗಿದೆ ಎಂಬುದನ್ನು ಗಮನಿಸಿರುವ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ನೇತೃತ್ವದ ಪೀಠ ಸಾಮಾನ್ಯವಾಗಿ ಅಂತಹ ಆದೇಶಗಳನ್ನು ಹೇಗೆ ತಪ್ಪಿಸಬಹುದು ಎಂಬ ಪ್ರಶ್ನೆ ಉಳಿದಿದೆ ಎಂದಿತ್ತು. ಈ ನಿಟ್ಟಿನಲ್ಲಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಲಹೆ ನೀಡುವಂತೆ ಸೂಚಿಸಿ ನೋಟಿಸ್ ನೀಡಿತ್ತು.

ಮುಖ್ಯವಾಗಿ ಆರೋಪಿ ಮತ್ತು ಸಂತ್ರಸ್ತೆ ನಡುವೆ ರಾಜಿ ನಡೆಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದಿರುವ ಅಟಾರ್ನಿ ಜನರಲ್‌ ಅವರು ವಿಚಾರಣಾ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ನ್ಯಾಯಾಲಯವು ತನ್ನ ತೀರ್ಪಿನ ಭಾಗವಾಗಿ ಸಂತ್ರಸ್ತೆ ಮತ್ತು ಆರೋಪಿಗಳ ನಡುವೆ ಮದುವೆ ಮಾಡಿಸಲು ಯತ್ನಿಸಬಾರದು. ಆ ಮೂಲಕ ಅಪರಾಧದ ಗಹನತೆಯನ್ನು ತಗ್ಗಿಸಲು ಮುಂದಾಗಬಾರದು. ಏಕೆಂದರೆ ಇದು ನ್ಯಾಯಾಲಯದ ಅಧಿಕಾರ ಮತ್ತು ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದ್ದಾರೆ.

ನ್ಯಾಯಾಂಗದಲ್ಲಿ ಮಹಿಳೆಯರ ಬಲ ಹೆಚ್ಚಿಸಲು ಎಜಿ ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ:

· ಕೆಳ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಲು ನೇರವಾಗಿ ದತ್ತಾಂಶ ಸಂಗ್ರಹಿಸಬೇಕು.

· ನ್ಯಾಯಮಂಡಳಿಗಳಲ್ಲಿ ಕೂಡ ಮಹಿಳಾ ನ್ಯಾಯಾಧೀಶರ ಸಂಖ್ಯೆ ನಿರ್ಧರಿಸಲು ನೇರ ದತ್ತಾಂಶ ಸಂಗ್ರಹಕ್ಕೆ ಮುಂದಾಗಬೇಕು.

· ಎಲ್ಲಾ ಹೈಕೋರ್ಟ್‌ಗಳ ಉನ್ನತ ಹುದ್ದೆಗಳ ಸಂಖ್ಯೆ ನಿರ್ಧರಿಸಲು ದತ್ತಾಂಶದ ನೇರ ಸಂಗ್ರಹಕ್ಕೆ ತೊಡಗಬೇಕು.

· ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಂಗದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳುವುದು.

ಲೈಂಗಿಕ ಶೋಷಣೆಗೊಳಗಾದವರಿಗೆ ರಕ್ಷಣೆ ನೀಡಲು ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲ ಸಮುದಾಯದಲ್ಲಿ ಲಿಂಗತ್ವ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎನ್ನುವುದೂ ಸೇರಿದಂತೆ ಇನ್ನು ಮುಂತಾದ ಸಲಹೆಗಳನ್ನು ಅವರು ನೀಡಿದ್ದಾರೆ.

Related Stories

No stories found.
Kannada Bar & Bench
kannada.barandbench.com