ವಾದ್ರಾ ವಿರುದ್ಧ ಕಪ್ಪುಹಣ ಕಾಯಿದೆ ಪ್ರಕರಣ: “ಪರಿಶೀಲಿಸಬಹುದು ಆದರೆ ಅಂತಿಮ ಆದೇಶ ನೀಡುವಂತಿಲ್ಲ” ಎಂದ ದೆಹಲಿ ಹೈಕೋರ್ಟ್

ಲಂಡನ್‌ ಆಸ್ತಿಗೆ ಸಂಬಂಧಿಸಿದಂತೆ ಕಪ್ಪುಹಣ ನಿಯಂತ್ರಣ ಕಾಯಿದೆ ಅಡಿ ಆದಾಯ ತೆರಿಗೆ ಇಲಾಖೆಯು ರಾಬರ್ಟ್‌ ವಾದ್ರಾಗೆ ಜಾರಿ ಮಾಡಿರುವ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಹೈಕೋರ್ಟ್‌ ಅವರಿಗೆ ಮೂರು ವಾರಗಳ ಕಾಲಾವಕಾಶ ನೀಡಿದೆ.
Robert Vadra
Robert Vadra

ಲಂಡನ್‌ನಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾಗೆ ಆದಾಯ ತೆರಿಗೆ ಇಲಾಖೆಯು ಕಪ್ಪುಹಣ ಕಾಯಿದೆ 2015 (ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳು) ಅಡಿ ಜಾರಿ ಮಾಡಿರುವ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ದೆಹಲಿ ಹೈಕೋರ್ಟ್‌ ಮೂರು ವಾರಗಳ ಕಾಲಾವಕಾಶ ನೀಡಿದೆ.

ವಾದ್ರಾಗೆ ನೀಡಲಾಗಿರುವ ನೋಟಿಸ್‌ಗಳನ್ನು ಪ್ರಶ್ನಿಸಿರುವುದನ್ನು ಪರಿಗಣಿಸಿರುವ ನ್ಯಾಯಮೂರ್ತಿಗಳಾದ ರಾಜೀವ್‌ ಶಕ್ದೇರ್‌ ಮತ್ತು ತಲವಂತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣದಲ್ಲಿ ಪರಿಶೀಲನೆ ಮುಗಿದ ಕೂಡಲೇ ಅಂತಿಮ ಆದೇಶ ಹೊರಡಿಸದಂತೆ ಐಟಿ ಇಲಾಖೆಗೆ ನಿರ್ದೇಶಿಸಿದೆ.

“… ನೋಟಿಸ್‌ಗಳಿಗೆ ಪ್ರತಿಕ್ರಿಯೆ ನೀಡುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ… ಈ ಕಾರಣಕ್ಕಾಗಿ ಅರ್ಜಿದಾರರಿಗೆ ಇನ್ನೂ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಐಟಿ ಇಲಾಖೆಯು ಪರಿಶೀಲನೆಯನ್ನು ಮುಂದುವರಿಸಬಹುದಾಗಿದೆ. ಅದಾಗ್ಯೂ, ಯಾವುದೇ ಅಂತಿಮ ಆದೇಶವನ್ನು ಹೊರಡಿಸುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ನೋಟಿಸ್‌ ಅನ್ನು ಪ್ರಶ್ನಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮತ್ತು ಇತರೆ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಆದೇಶಿಸಿದೆ.

2019-2020ನೇ ಸಾಲಿನ ಐಟಿ ರಿಟರ್ನ್ಸ್‌ಗೆ ಸಂಬಂಧಿಸಿದಂತೆ ಕಪ್ಪುಹಣ ಕಾಯಿದೆ ಸೆಕ್ಷನ್‌ 10(1)ರ ಅಡಿ ಕೇಂದ್ರ ವಲಯದ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರು 2018ರ ಡಿಸೆಂಬರ್‌ನಲ್ಲಿ ರಾಬರ್ಟ್‌ ವಾದ್ರಾ ಅವರಿಗೆ ನೋಟಿಸ್‌ ನೀಡಿದ್ದರು. ಮುಂದುವರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳು ಸಹ ನೋಟಿಸ್‌ಗಳನ್ನು ನೀಡಲಾಗಿದೆ. 2010ರಲ್ಲಿ ಲಂಡನ್‌ನಲ್ಲಿ 1.9 ಮಿಲಿಯನ್‌ ಜಿಬಿಪಿಗೆ (ಗ್ರೇಟ್‌ ಬ್ರಿಟನ್‌ ಪೌಂಡ್‌) ವಾದ್ರಾ ಅವರು ಉಪಭೋಗಿ ಮಾಲೀಕತ್ವದಡಿ (ಬೆನಿಫಿಷಿಯಲ್‌ ಓನರ್ಶಿಪ್) ಆಸ್ತಿ ಖರೀದಿಸಿದ್ದು, ಈ ವೇಳೆ ಕಪ್ಪುಹಣ ಕಾಯಿದೆ ಉಲ್ಲಂಘಿಸಿದ್ದಾರೆ ಎಂದು ಐಟಿ ಇಲಾಖೆ ಹೇಳಿದೆ.

ವಾದ್ರಾ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಆಸ್ತಿಯು ವರ್ಟೆಕ್ಸ್‌ ಕಂಪೆನಿಗೆ ಸೇರಿದ್ದು, ಅದನ್ನು ಸಂಜಯ್‌ ಭಂಡಾರಿ ಎಂಬವರು ಖರೀದಿಸಿದ್ದಾರೆ. ಆಸ್ತಿಯು ವಾದ್ರಾ ಅವರಿಗೆ ಸಂಬಂಧಿಸಿದ್ದು ಎಂಬುದನ್ನು ತೋರಲು ಯಾವುದೇ ಒಂದು ದಾಖಲೆಯೂ ಇಲ್ಲ. ಆಸ್ತಿಗೆ ಸಂಬಂಧಿಸಿದಂತೆ ವಾದ್ರಾ ಹಣ ಪಾವತಿಸಿದ್ದಾರೆ ಎಂಬುದಕ್ಕೂ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು.

“ಪ್ರಶ್ನಾರ್ಹವಾದ 18 ಇಮೇಲ್‌ಗಳ ಪೈಕಿ ಒಂದೇ ಒಂದು ಇಮೇಲ್‌ ಅನ್ನು ವಾದ್ರಾ ಅವರು ಸುಮಿತ್‌ ಚಂದ್ರಗೆ ಕಳುಹಿಸಿದ್ದು, ಅದು ದುರಸ್ತಿ ಕೆಲಸಕ್ಕೆ ಹಣ ಪಾವತಿ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಅವಲೋಕನ ನಡೆಸದೇ ಸದರಿ ಪ್ರಕರಣಕ್ಕೆ ಕಪ್ಪುಹಣ ಕಾಯಿದೆ ಅನ್ವಯಿಸಲಾಗದು. ವಾದ್ರಾಗೆ 2018ರಲ್ಲಿ ನೋಟಿಸ್‌ ನೀಡಿದ ಬಳಿಕ 24 ತಿಂಗಳ ಕಾಲ ಯಾವುದೇ ನೋಟಿಸ್‌ ಅಥವಾ ಶೋ ಕಾಸ್‌ ನೋಟಿಸ್‌ ನೀಡಲಾಗಿಲ್ಲ” ಎಂದು ಆಕ್ಷೇಪಿಸಿದರು.

ಪ್ರತಿವಾದಿ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು 2018ರಲ್ಲಿ ಮೂರು ವರ್ಷಗಳ ಐಟಿ ರಿಟರ್ನ್‌ಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ಬಳಿಕ ವಾದ್ರಾ ದುರುದ್ದೇಶದಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಮೇ 31ರ ಗಡುವಿನ ಒಳಗೆ ಪ್ರತಿಕ್ರಿಯಿಸುವಂತೆ ವಾದ್ರಾಗೆ ಸೂಚಿಸಬೇಕು ಮತ್ತು ಐಟಿ ರಿಟರ್ನ್ಸ್‌ಗೆ ಸಂಬಂಧಿಸಿದಂತೆ ಅಂತಿಮ ಆದೇಶ ಹೊರಡಿಸಲು ಅವಕಾಶ ಮಾಡಿಕೊಡಬೇಕು ಎಂದರು.

“… ಸದರಿ ಪ್ರಕರಣದಲ್ಲಿ ಅವರು ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾರೆ… ಯಾವಾಗ ಮೇ 31 ಸಮೀಪಿಸುತ್ತಿದೆಯೋ ಆಗ ಇನ್ನಷ್ಟು ಕಾಲಾವಕಾಶ ಕೊಡುವಂತೆ ಕೋರುತ್ತಿದ್ದಾರೆ. ನಾವು ಆಗುವುದಿಲ್ಲ ಎಂದಿದ್ದೇವೆ. 2018ರಿಂದ ಸರ್ಕಾರ ಕಾಯುತ್ತಿದೆ… ಅವರ ವಿರುದ್ಧ ಆದೇಶ ಹೊರಡಿಸಿದರೆ ಅವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು” ಎಂದರು.

Also Read
ಪಿಎಂ ಕೇರ್ಸ್‌ನಿಂದ ಎನ್‌ಡಿಆರ್‌ಎಫ್ ಗೆ ಹಣ ವರ್ಗಾವಣೆ ಕೋರಿದ್ದ ಅರ್ಜಿಯ ತೀರ್ಪು ಮರುಪರಿಶೀಲನೆಗೆ ಸುಪ್ರೀಂನಲ್ಲಿ ಮನವಿ

ಆಸ್ತಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪದೇಪದೇ ಇಮೇಲ್‌ಗಳ ಮೂಲಕ ಚರ್ಚಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಬಲಬೀರ್‌ ಸಿಂಗ್‌ ವಾದಿಸಿದರು.

ಆಗ ಪೀಠವು “ನೀವು ಅವರಿಗೆ ಅವಕಾಶ ನೀಡಿ. ಪರಿಶೀಲನೆ ಮುಂದುವರಿಸಬಹುದಾಗಿದೆ. ಆದರೆ, ಅಂತಿಮ ಆದೇಶ ಹೊರಡಿಸುವಂತಿಲ್ಲ. ನಿಮ್ಮ ಮತ್ತು ಅವರ ವಾದವನ್ನು ನಾವು ಪರಿಗಣಿಸಬೇಕಿದೆ” ಎಂದಿತು.

ಪ್ರತಿಕ್ರಿಯೆ ಸಲ್ಲಿಸುವ ಸಮಯದ ವಿಸ್ತರಣೆ ಮಾಡುವುದಕ್ಕೆ ಪ್ರತಿವಾದಿ ವಕೀಲರ ತಕರಾರಿಲ್ಲ ಎಂಬುದನ್ನು ಪೀಠ ದಾಖಲಿಸಿಕೊಂಡಿದ್ದು, ಆಗಸ್ಟ್‌ 10ಕ್ಕೆ ವಿಚಾರಣೆ ಮುಂದೂಡಿದೆ.

Kannada Bar & Bench
kannada.barandbench.com