ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಸಲಿಂಗಕಾಮವನ್ನು ನಿರಪರಾಧವಾಗಿಸಿದ್ದರೂ ಕೂಡ, ಸಲಿಂಗ ವಿವಾಹವು ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. (ಅಭಿಜಿತ್ ಅಯ್ಯರ್ ಮಿತ್ರ ಮತ್ತಿತರರು ಹಾಗೂ ಕೇಂದ್ರ ಸರ್ಕಾರದ ನಡುವಣ ಪ್ರಕರಣ).
ಹಿಂದೂ ವಿವಾಹ ಕಾಯಿದೆಯಡಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಫಿಡವಿಟ್‌ನಲ್ಲಿ ಈ ಹೇಳಿಕೆ ನೀಡಿದೆ. "ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅನ್ನು ನಿರಪರಾಧವಾಗಿಸಿದ್ದರೂ, ಅರ್ಜಿದಾರರು ದೇಶದ ಕಾನೂನಿನ ಮಾನ್ಯತೆಯಡಿ ಸಲಿಂಗ ವಿವಾಹವನ್ನು ಮೂಲಭೂತ ಹಕ್ಕಾಗಿ ಆಗ್ರಹಿಸಲು ಸಾಧ್ಯವಿಲ್ಲ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಸಲಿಂಗ ವಿವಾಹ ಕುರಿತಂತೆ ಕೇಂದ್ರ ಸರ್ಕಾರ ಹೇಳಿರುವ ಪ್ರಮುಖ ಅಂಶಗಳು
ವಿವಾಹ ವಿಧ್ಯುತ್ಕತೆ ಅಥವಾ ವಿವಾಹ ನೋಂದಣಿ ಘೋಷಿಸುವುದು ಸರಳ ಕಾನೂನು ಮಾನ್ಯತೆಗಿಂತಲೂ ಹೆಚ್ಚು ಸಂಕೀರ್ಣ ಪರಿಣಾಮಗಳನ್ನು ಹೊಂದಿರುವಂಥದ್ದು.
ವಿವಾಹ ವಿಧ್ಯುಕ್ತತೆ ಅಥವಾ ನೋಂದಣಿಗಿಂತಲೂ ಸಲಿಂಗ ವಿವಾಹವಾಗಲು ಬಯಸುವವರ ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗಿವೆ.
'ಲಿವಿಂಗ್ ಟುಗೆದರ್' ರೀತಿ ಸಂಗಾತಿಗಳಾಗಿ ಬಾಳುವುದು ಅಥವಾ ಪರಸ್ಪರ ಸಲಿಂಗ ಲೈಂಗಿಕ ಸಂಬಂಧ ಹೊಂದುವುದನ್ನು (ಇದು ಈಗ ಕಾನೂನುಸಮ್ಮತವಾಗಿದೆ) ಗಂಡ, ಹೆಂಡತಿ, ಮಕ್ಕಳು ಎಂಬ ಭಾರತೀಯ ಕೌಟುಂಬಿಕ ಘಟಕದ ಪರಿಕಲ್ಪನೆಗೆ ಹೋಲಿಸಲಾಗದು.
ಜೈವಿಕ ಪುರುಷನನ್ನು ಗಂಡ ಎಂದು ಜೈವಿಕ ಮಹಿಳೆಯನ್ನು ಹೆಣ್ಣು ಎಂದು ಇವರಿಬ್ಬರ ಸಂಗಮದಿಂದ ಹುಟ್ಟಿದವರನ್ನು ಮಕ್ಕಳು ಎಂದು ಸ್ವೀಕರಿಸುವ ಭಾರತೀಯ ಪೂರ್ವಕಲ್ಪನೆಗೆ ಇದು ಹೊರತಾದದ್ದು.
ಸಲಿಂಗಿಗಳ ವಿವಾಹವನ್ನು ಸಾಮಾನ್ಯ ಮದುವೆಯಂತೆ ಪರಿಗಣಿಸಲಾಗುವುದಿಲ್ಲ ಅಥವಾ ಯಾವುದೇ ಕ್ರೋಡೀಕರಿಸದ ವೈಯಕ್ತಿಕ ಕಾನೂನುಗಳಲ್ಲಿ ಅಥವಾ ಯಾವುದೇ ಕ್ರೋಡೀಕರಿಸಿದ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ.
ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಿನ ಸಾಮಾಜಿಕ ಮಾನ್ಯತೆಯುಳ್ಳ ಕೂಟವಾಗಿದ್ದು, ಇದು ಒಂದೋ ಸಂಹಿತೇತರವಾದ ವೈಯಕ್ತಿಕ ಕಾನೂನುಗಳಿಂದ ನಿಯಂತ್ರಿಸಲ್ಪಟ್ಟಿರುತ್ತದೆ ಅಥವಾ ಕಾನೂನಾತ್ಮಕ ಸಂಹಿತೆಗಳಿಂದ ಪರಿಪಾಲಿಸಲ್ಪಟ್ಟಿರುತ್ತದೆ. ಇಬ್ಬರು ಸಲಿಂಗ ವ್ಯಕ್ತಿಗಳ ನಡುವಿನ ವಿವಾಹವನ್ನು ಸಂಹಿತೇತರವಾದ ವೈಯಕ್ತಿಕ ಕಾನೂನುಗಳಡಿಯಾಗಲಿ, ಶಾಸನಾತ್ಮಕ ಕಾನೂನುಗಳ ಸಂಹಿತೆಯಡಿಯಾಗಲಿ ಒಪ್ಪುವುದಾಗಲಿ, ಮಾನ್ಯ ಮಾಡಿರುವುದಾಗಲಿ ಇಲ್ಲ.
ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸುವುದು ಮೂಲಭೂತವಾಗಿ ಶಾಸಕಾಂಗ ನಿರ್ಧರಿಸಬೇಕಾದ ಪ್ರಶ್ನೆಯಾಗಿದ್ದು ಇದು ಎಂದಿಗೂ ನ್ಯಾಯಾಂಗ ತೀರ್ಪಿನ ವಿಷಯವಾಗಿರಬಾರದು.
ಸಂವಿಧಾನದ 21ನೇ ವಿಧಿ ಮೂಲಭೂತ ಹಕ್ಕಿಗೆ ಸಂಬಂಧಿಸಿದ ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನಕ್ಕೆ ಒಳಪಟ್ಟಿದ್ದು ಸಲಿಂಗ ವಿವಾಹದ ಮೂಲಭೂತ ಹಕ್ಕನ್ನು ಅದಕ್ಕೆ ವಿಸ್ತರಿಸಲು ಸಾಧ್ಯವಿಲ್ಲ.
ಭಾರತದಲ್ಲಿ ಮದುವೆಯನ್ನು ಸಂಸ್ಕಾರವೆಂದು ಪರಿಗಣಿಸಲಾಗಿದ್ದು ಇದು ಹಳೆಯ ಪದ್ಧತಿಗಳು, ಆಚರಣೆಗಳು ಮತ್ತು ಸಾಂಸ್ಕೃತಿಕ ನೀತಿಗಳು ಮತ್ತು ಸಾಮಾಜಿಕ ಮೌಲ್ಯಗಳನ್ನು ಅವಲಂಬಿಸಿರುತ್ತದೆ.
ವೈಯಕ್ತಿಕ ಮತ್ತು ಶಾಸನಾತ್ಮಕ ಕಾನೂನುಗಳನ್ನು ಸಲಿಂಗ ವಿವಾಹ ಉಲ್ಲಂಘಿಸಲಿದ್ದು ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಬೇಕು.
ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಎಂಡ್ಲಾ ಮತ್ತು ಅಮಿತ್ ಬನ್ಸಾಲ್ ಅವರಿಗೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯೆ ನೀಡಿದರು. ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳಿಗೆ ಕೂಡ ಕೇಂದ್ರದ ಪ್ರತಿಕ್ರಿಯೆ ಇದೇ ಆಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 20ರಂದು ನಡೆಯಲಿದೆ.