ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಹೈಕೋರ್ಟ್
ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಹೈಕೋರ್ಟ್

ಕೇಜ್ರಿವಾಲ್‌ಗೆ ಇಲ್ಲ ಜಾಮೀನು; ಏಪ್ರಿಲ್ 2ರೊಳಗೆ ಉತ್ತರಿಸುವಂತೆ ಇ ಡಿಗೆ ದೆಹಲಿ ಹೈಕೋರ್ಟ್‌ ಸೂಚನೆ

ತಮ್ಮ ಬಿಡುಗಡೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಪ್ರತಿಕ್ರಿಯಿಸಲು ಜಾರಿ ನಿರ್ದೇಶನಾಲಯಕ್ಕೆ ಏಪ್ರಿಲ್ 2ರವರೆಗೆ ಕಾಲಾವಕಾಶ ನೀಡಿದ ನ್ಯಾಯಾಲಯ ಏಪ್ರಿಲ್ 3ಕ್ಕೆ ಪ್ರಕರಣ ಮುಂದೂಡಿತು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ (ಇ ಡಿ) ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಕುರಿತಂತೆ ಯಾವುದೇ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ಇ ಡಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕೇಜ್ರಿವಾಲ್ ಅವರ ಅರ್ಜಿಯಲ್ಲಿ ಕೋರಲಾದ ಪರಿಹಾರಗಳ ಸ್ವರೂಪವನ್ನು ಗಮನಿಸಿದರೆ, ಇ ಡಿಯ ಪ್ರತಿಕ್ರಿಯೆ ಕೇಳದೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"(ಇ ಡಿಗೆ) ಈ ಅವಕಾಶ ನಿರಾಕರಿಸುವುದು ನ್ಯಾಯಯುತ ವಿಚಾರಣೆಯನ್ನು ನಿರಾಕರಿಸಿದಂತಾಗುತ್ತದೆ. ಒಬ್ಬ ಪಕ್ಷಕಾರರನ್ನು ಆಲಿಸದೆ ಮತ್ತೊಬ್ಬ ಪಕ್ಷಕಾರರನ್ನು ಆಲಿಸಲೇಬೇಕು ಎನ್ನುವ ಸ್ವಾಭಾವಿಕ ನ್ಯಾಯದ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ಪೀಠ ಹೇಳಿದೆ.

ಆದ್ದರಿಂದ, ಮಧ್ಯಂತರ ಪರಿಹಾರಕ್ಕಾಗಿ ದೆಹಲಿ ಸಿಎಂ ಮಾಡಿದ ಮನವಿಯ ಬಗ್ಗೆ ನ್ಯಾಯಾಲಯ ಇ ಡಿಗೆ ನೋಟಿಸ್ ನೀಡಿತಾದರೂ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು.

ಮಧ್ಯಂತರ ಅರ್ಜಿಯಲ್ಲಿ ಪರಿಹಾರ ನೀಡುವುದು ಅಂತಿಮ ಪರಿಹಾರವನ್ನು ನೀಡಿದಂತಾಗುತ್ತದೆ ಎಂದು ನ್ಯಾ. ಶರ್ಮಾ ಅಭಿಪ್ರಾಯಪಟ್ಟರು.

ಅದರಂತೆ, ಇ ಡಿ ಕಸ್ಟಡಿಯಿಂದ ಬಿಡುಗಡೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಇ ಡಿ ಪ್ರತಿಕ್ರಿಯೆ ನೀಡಲು ಏಪ್ರಿಲ್ 2ರವರೆಗೆ ಕಾಲಾವಕಾಶ ನೀಡಿದ ನ್ಯಾಯಾಲಯ ಏಪ್ರಿಲ್ 3 ಕ್ಕೆ ಪ್ರಕರಣ ಮುಂದೂಡಿತು.

ಇದಕ್ಕೂ ಮುನ್ನ ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು ವಾದ ಮಂಡಿಸಿದರು.

ಸಿಂಘ್ವಿ ಅವರ ವಾದದ ಪ್ರಮುಖಾಂಶಗಳು

 • ಮಾಫಿಸಾಕ್ಷಿಗಳಾಗಿ ಮಾರ್ಪಟ್ಟವರ ಹೇಳಿಕೆಗಳ ಆಧಾರದ ಮೇಲೆ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ.

 • ಇದನ್ನು ಹೊರತುಪಡಿಸಿ ಕೇಜ್ರಿವಾಲ್‌ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ.

 • ಅಂತಹ ಮಾಫಿಸಾಕ್ಷಿಗಳು ಮಧ್ಯಕಾಲೀನ ಯುಗದಲ್ಲಿ ಘುರಿದ್‌ ದಾಳಿಕೋರರೊಂದಿಗೆ (ಘೋರಿಗಳು) ಶಾಮೀಲಾಗಿ ಭಾರತೀಯ ಆಡಳಿತಗಾರರಿಗೆ ದ್ರೋಹ ಬಗೆದ ರಾಜ ಜೈಚಂದ್‌ ಇದ್ದಂತೆ.

 • ರಾಜ ಜೈಚಂದ್‌ ರೀತಿಯ ತಳಿಗಳನ್ನು ಮಾಫಿಸಾಕ್ಷಿಗಳೆನ್ನುತ್ತಾರೆ.

 • ನೆಪಗಳನ್ನೊಡ್ಡಿ ಆರೋಪಿಗಳಿಗೆ ಜಾಮೀನು ಕೊಡಿಸಲಾಗುತ್ತದೆ. ಆ ನಂತರ ಅವರು ಮಾಫಿ ಸಾಕ್ಷಿಗಳಾಗಿ ಕೇಜ್ರಿವಾಲ್‌ ವಿರುದ್ಧ ಸಾಕ್ಷ್ಯ ನುಡಿಯುತ್ತಾರೆ.

 • ಅಬಕಾರಿ ನೀತಿ ಹಗರಣ ಕುರಿತಾದ ಪ್ರತಿಯೊಂದು ಪ್ರಕರಣದಲ್ಲಿಯೂ ಇದೇ ರೀತಿ ಆಗಿದೆ.

 • ಇದು ಸಾಂವಿಧಾನಿಕ ರಕ್ಷಣೆಗಳನ್ನು ಗಾಳಿಗೆ ತೂರುತ್ತದೆ.

 • ಪ್ರಕರಣದಲ್ಲಿ ರಾಘವ್‌ ಮಾಗುಂಟಗೆ ಚಿತ್ರಹಿಂಸೆ ನೀಡಲಾಯಿತು. ಅವರ ತಂದೆ ನೀಡಿದ ಹೇಳಿಕೆ ಆಧರಿಸಿ ಆತನಿಗೆ ಜಾಮೀನು ದೊರೆಯಿತು.

 • ಶರತ್‌ ರೆಡ್ಡಿಯ ವಿಚಾರದಲ್ಲಿ ಆತನಿಂದ ಪಡೆದಿದ್ದ ಒಂಭತ್ತು ಹೇಳಿಕೆಗಳಲ್ಲಿ ಆತ ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ, ಬಂಧನಕ್ಕೊಳಗಾದ ಹದಿನೆಂಟು ದಿನಗಳ ನಂತರವಷ್ಟೇ ಇ ಡಿ ಮಾತು ಕೇಳಿ ಹೇಳಿಕೆ ನೀಡಲಾರಂಭಿಸಿದ. ನನ್ನ ವಿರುದ್ಧ (ಕೇಜ್ರಿವಾಲ್‌) ಹೇಳಿಕೆ ನೀಡಿದ ಒಂಭತ್ತು ದಿನಗಳ ನಂತರ ಆತನಿಗೆ ವೈದ್ಯಕೀಯ ಜಾಮೀನು ಮಂಜೂರಾಯಿತು. ಇಪ್ಪತ್ತು ದಿನಗಳ ನಂತರ ಮಾಫಿ ಸಾಕ್ಷ್ಯ ಮಾಡಲಾಯಿತು. ಇದೆಲ್ಲಾ ಏನನ್ನು ಹೇಳುತ್ತವೆ?

 • ಇ ಡಿ ಯ ವಿಳಂಬ ಧೋರಣೆ ಕುರಿತು ನ್ಯಾಯಾಲಯ ಕ್ರಮ ಕೈಗೊಳ್ಳಬೇಕು.

 • ಇದು ಕೇವಲ ಕೇವಲ ಕ್ರಿಮಿನಲ್ ಕಾನೂನು ಪ್ರಕರಣವಲ್ಲ ಬದಲಿಗೆ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಹಾಲಿ ಮುಖ್ಯಮಂತ್ರಿಯ ಬಂಧನವಾಗಿರುವುದನ್ನು ಒಳಗೊಂಡ ದೊಡ್ಡ ಸಾಂವಿಧಾನಿಕ ಸಮಸ್ಯೆಯನ್ನು ಒಳಗೊಂಡಿದೆ.

 • ಮುಖ್ಯಮಂತ್ರಿಗಳನ್ನು ಬಂಧಿಸುವುದು ಸಹಜವಾದರೂ ಇದೇ ಸಮಯದಲ್ಲಿ ಬಂಧನವಾದದ್ದು ಏಕೆ ಎಂಬ ಪ್ರಶ್ನೆ ಇದೆ.

 • ಚುನಾವಣೆಗೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಈ ಬಂಧನ ನಡೆದಿದೆ.

 • ತನಿಖಾ ಸಂಸ್ಥೆಗೆ ಅಸಹಕಾರ ತೋರಿದ್ದಾರೆಂಬುದು ಬಂಧನಕ್ಕೆ ಆಧಾರವಾಗದು ಏಕೆಂದರೆ ಸ್ವಯಂ-ದೋಷಾರೋಪಣೆಯ ವಿರುದ್ಧದ ಹಕ್ಕಿನಿಂದ ಅದನ್ನು ತಡೆಯಬಹುದಾಗಿದೆ.

 • ಕೇಜ್ರಿವಾಲ್‌ ಸಹಕರಿಸಲಿಲ್ಲ ಎಂದು ಚುನಾವಣೆಗೆ ಮುಂಚಿತವಾಗಿ ಕಸ್ಟಡಿ ವಿಚಾರಣೆ ನಡೆಸಲು ಬಯಸಿದ್ದಾಗಿ ಇ ಡಿ ಹೇಳಲು ಸಾಧ್ಯವಿಲ್ಲ.

ಎಎಸ್‌ಜಿ ವಾದ ಮಂಡನೆಯ ಪ್ರಮುಖ ಸಂಗತಿಗಳು

 • ಇ ಡಿ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ.

 • ಇದೊಂದು ದೊಡ್ಡ ಅರ್ಜಿ. ವಿವರವಾದ ಉತ್ತರ ಸಲ್ಲಿಸಲು ಬಯಸುತ್ತೇವೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Arvind Kejriwal v Directorate of Enforcement.pdf
Preview
Kannada Bar & Bench
kannada.barandbench.com