ಸುಪ್ರೀಂ ಕೋರ್ಟ್‌ ಆವರಣದಲ್ಲಿ ಇನ್ನು ಸೆಲ್ಫಿ, ರೀಲ್ಸ್‌ಗೆ ನಿಷೇಧ: ಉಲ್ಲಂಘಿಸಿದವರಿಗೆ ಕಾದಿದೆ ಕಠಿಣ ಶಿಕ್ಷೆ

ಸುಪ್ರೀಂ ಕೋರ್ಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿದರೆ ಮತ್ತು ರೀಲ್ಸ್ ಮಾಡಿದರೆ ಅಂತಹವರು ನ್ಯಾಯಾಲಯ ಆವರಣ ಪ್ರವೇಶಿಸದಂತಾಗಬಹುದು ಎಂದು ನ್ಯಾಯಾಲಯ ಹೊರಡಿಸಿದ ಸುತ್ತೋಲೆ ಎಚ್ಚರಿಕೆ ನೀಡಿದೆ.
Supreme Court Selfies
Supreme Court Selfies
Published on

ನವದೆಹಲಿಯ ಅತಿಭದ್ರತೆಯ ವಲಯಗಳಲ್ಲಿ ಒಂದಾದ ಸುಪ್ರೀಂ ಕೋರ್ಟ್‌ನಲ್ಲಿ ಛಾಯಾಗ್ರಹಣ ಮತ್ತು ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದ್ದು ನಿಯಮ ಉಲ್ಲಂಘಿಸುವವರು ಕಠಿಣ ಪರಿಣಾಮ  ಎದುರಿಸಬೇಕಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿದೆ.

ಈ ನಿರ್ಬಂಧವು ಎಲ್ಲಾ ವಕೀಲರು, ದಾವೆ ಹೂಡುವವರು, ಇಂಟರ್ನ್‌ಗಳು, ಕಾನೂನು ಗುಮಾಸ್ತರು, ಸಿಬ್ಬಂದಿ ಮತ್ತು ಸಂದರ್ಶಕರಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿಯವರು ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಧಿಕೃತ ಬಳಕೆಗೆ ಮಾತ್ರ ವಿನಾಯಿತಿ ಇರಲಿದೆ.

Also Read
ಕೋರ್ಟ್ ಆವರಣದಲ್ಲಿ ಕೋತಿಗಳಿಗೆ ಆಹಾರ ನೀಡಬೇಡಿ, ಕಿಟಕಿ ಮುಚ್ಚಿರುವಂತೆ ನೋಡಿಕೊಳ್ಳಿ: ದೆಹಲಿ ಹೈಕೋರ್ಟ್ ಸುತ್ತೋಲೆ

ನಿರ್ಬಂಧಿತ ಪ್ರದೇಶದೊಳಗೆ ಕ್ಯಾಮೆರಾ, ಟ್ರೈಪಾಡ್‌, ಸೆಲ್ಫಿ-ಸ್ಟಿಕ್‌ಗಳು ಮತ್ತು ಮೊಬೈಲ್ ಫೋನ್‌ಮೂಲಕ ವಿಡಿಯೋ ಚಿತ್ರೀಕರಿಸುವಂತಿಲ್ಲ,  ರೀಲ್ಸ್‌ ಮಾಡುವಂತಿಲ್ಲ ಅಥವಾ ಸೆಲ್ಫಿ ಕ್ಲಿಕ್ಕಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅತಿ ಭದ್ರತಾ ವಲಯ ವ್ಯಾಪ್ತಿಗೆ ಒಳಪಡುವ ನ್ಯಾಯಾಲಯದ ಹುಲ್ಲುಹಾಸಿನ ಪ್ರದೇಶಕ್ಕೂ ನಿಷೇಧ ಅನ್ವಯವಾಗಲಿದೆ.  

ಕಡಿಮೆ ಭದ್ರತಾ ವಲಯ ವರ್ಗಕ್ಕೆ ಸೇರುವ ನಿರ್ದಿಷ್ಟ ಹುಲ್ಲುಹಾಸಿನಿಂದ ಮಾತ್ರ ಸಂದರ್ಶನಗಳು ಮತ್ತು ನೇರ ಪ್ರಸಾರಗಳನ್ನು ನಡೆಸುವಂತೆ ಮಾಧ್ಯಮ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ವರದಿಗಾರರು ಇದನ್ನು ಉಲ್ಲಂಘಿಸಿದರೆ, ಅವರು ಒಂದು ತಿಂಗಳ ಕಾಲ ಅತಿ ಭದ್ರತಾ ವಲಯ ಪ್ರವೇಶ ಪಡೆಯದಂತೆ ಅಮಾನತು ಮಾಡಲಾಗುತ್ತದೆ ಎಂದು ಸುತ್ತೋಲೆ ತಿಳಿಸಿದೆ.   

Also Read
ನ್ಯಾಯಾಲಯ ಆದೇಶಿಸಿದಾಗ ಪೀಠದ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸುತ್ತೋಲೆ: ಹೈಕೋರ್ಟ್‌ ಅಂಥ ಆದೇಶ ಮಾಡಿದ್ದೇಕೆ?

ನಿಯಮಗಳನ್ನು ಉಲ್ಲಂಘಿಸುವ ವಕೀಲರು, ಇಂಟರ್ನ್‌ಗಳು ಅಥವಾ ಕಾನೂನು ಗುಮಾಸ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ವಕೀಲರ ಸಂಘ ಅಥವಾ ರಾಜ್ಯ ವಕೀಲರ ಪರಿಷತ್ತುಗಳಿಗೆ ಸೂಚಿಸಲಾಗುತ್ತದೆ. ರಿಜಿಸ್ಟ್ರಿ ಸಿಬ್ಬಂದಿ ಕೂಡ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಕೃತ್ಯ ಎಸಗುವ ಉಳಿದ ಸಿಬ್ಬಂದಿಯ ಬಗ್ಗೆ ಆಯಾ ಇಲಾಖಾ ಮುಖ್ಯಸ್ಥರಿಗೆ ದೂರು ನೀಡಲಾಗುತ್ತದೆ ಎಂದು ಅದು ವಿವರಿಸಿದೆ.

ಹೆಚ್ಚಿನ ಭದ್ರತಾ ವಲಯದೊಳಗೆ ಯಾರಾದರೂ ಛಾಯಾಚಿತ್ರ ಅಥವಾ ವಿಡಿಯೋ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಅದನ್ನು ತಡೆಯಲು ಭದ್ರತಾ ಸಿಬ್ಬಂದಿಗೆ ಈ ಸುತ್ತೋಲೆ  ಅಧಿಕಾರ ನೀಡಿದೆ.

Kannada Bar & Bench
kannada.barandbench.com