
ರಾಜ್ಯದ ಒಂದು ವೃತ್ತದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗೆ ಔಷಧ ಪರಿವೀಕ್ಷಕ (ಡ್ರಗ್ ಇನ್ಸ್ಪೆಕ್ಟರ್) ಎಂದು ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕ ಆ ಅಧಿಕಾರಿ ಮತ್ತೊಂದು ವೃತ್ತಕ್ಕೆ ವರ್ಗಾವಣೆಗೊಂಡರೂ ಅದೇ ಹುದ್ದೆ ಮುಂದುವರೆಯಲಿದ್ದು, ಮತ್ತೆ ಹೊಸದಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಈಚೆಗೆ ಸ್ಪಷ್ಟಪಡಿಸಿದೆ.
ಗದಗ ವೃತ್ತದ ಡ್ರಗ್ ಇನ್‌ಸ್ಪೆಕ್ಟರ್ ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ರದ್ದು ಕೋರಿ ಎಂ ಎಸ್ ಕಡ್ಲಿ ಫಾರ್ಮಾದ ಮಾಲೀಕ ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ಒಮ್ಮೆ ಡ್ರಗ್ ಇನ್ಸ್ಪೆಕ್ಟರ್ ಎಂದು ನೇಮಿಸಿ, ಆನಂತರ ವರ್ಗಾವಣೆ ಮಾಡಿದರೂ ಆ ಹುದ್ದೆ ಮುಂದುವರೆಯಲಿದೆ. ವರ್ಗಾವಣೆಯಾದ ಪ್ರತಿ ಬಾರಿಯೂ ಅಧಿಕಾರಿಯನ್ನು ಡ್ರಗ್ ಇನ್ಸ್ಪೆಕ್ಟರ್ ಎಂದು ನಿಯೋಜಿಸಿರುವುದಾಗಿ ಹೊಸದಾಗಿ ಗೆಜೆಟ್ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹಾಲಿ ಪ್ರಕರಣದಲ್ಲಿ ಸಹಾಯಕ ಔಷಧ ನಿಯಂತ್ರಕರು ಖಾಸಗಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗ ವೃತ್ತದಲ್ಲಿ ಅವರು ಕೆಲಸ ಮಾಡುವಾಗ 2011ರ ಜುಲೈ 16ರಂದು ಇನ್‌ಸ್ಪೆಕ್ಟರ್ ಆಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಬಳಿಕ ಅವರನ್ನು ಗದಗ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ, ದೂರುದಾರರನ್ನು ಇನ್‌ಸ್ಪೆಕ್ಟರ್ ಆಗಿ ನೇಮಕ ಮಾಡಲಾಗಿದೆ ಎಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ. ಹೀಗಾಗಿ ಮತ್ತೊಮ್ಮೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಅವರು ಖಾಸಗಿ ದೂರು ದಾಖಲಿಸಿ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂಬ ಅರ್ಜಿದಾರರ ವಾದ ಒಪ್ಪಲಾಗದು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಸತ್ರ ನ್ಯಾಯಾಲಯದಲ್ಲಿ ಮಾತ್ರ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರು ವಾದಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊದಲು ದೂರು ದಾಖಲಿಸಿ, ಬಳಿಕ ಸತ್ರ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು “ಅರ್ಜಿದಾರರ ವಿರುದ್ಧದ ಆರೋಪಕ್ಕೆ ಎರಡು ವರ್ಷಗಳು ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರರ ವಿರುದ್ಧ ದೂರು ದಾಖಲಿಸಿರುವ ಅಧಿಕಾರಿಯನ್ನು ಡ್ರಗ್ ಇನ್‌ಸ್ಪೆಕ್ಟರ್ ಆಗಿ ನೇಮಿಸಿ ಶಿವಮೊಗ್ಗ ವೃತ್ತಕ್ಕೆ ಸೀಮಿತವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಸತ್ರ ನ್ಯಾಯಾಲಯದಲ್ಲಿ ಮಾತ್ರ ಪ್ರಕರಣ ದಾಖಲಿಸಬಹುದಾಗಿದೆ. ಆದರೆ, ಅದಕ್ಕೆ ಬದಲಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದ್ದು, ಬಳಿಕ ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಅದಕ್ಕೆ ಅವಕಾಶವಿಲ್ಲ. ಆದ್ದರಿಂದ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ರದ್ದುಪಡಿಸಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು “ಅರ್ಜಿದಾರನ ವಿರುದ್ಧದ ಆರೋಪಗಳಿಗೆ ಐದು ವರ್ಷ ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ದೂರುದಾರ ಅಧಿಕಾರಿಯು ಇನ್‌ಸ್ಪೆಕ್ಟರ್ ಆಗಿದ್ದು, ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಅಧಿಕಾರಿ ವರ್ಗಾವಣೆಯಾದ ಮಾತ್ರಕ್ಕೆ ಮತ್ತೆ ಮತ್ತೆ ಅಧಿಸೂಚನೆ ಹೊರಡಿಸಬೇಕಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಬಳಿಕ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಅರ್ಜಿದಾರರು ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು” ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಡಾ.ಎನ್ ಸಿ ನೇಕಾರ ಅಲಿಯಾಸ್ ಸಿದ್ದಪ್ಪ ಚನ್ನಬಸಪ್ಪ ನೇಕಾರ ಮತ್ತು ಅರ್ಜಿದಾರ ವಿಶ್ವನಾಥ್ ವಿರುದ್ಧ ಗದಗ ವೃತ್ತದ ಸಹಾಯಕ ಔಷಧ ನಿಯಂತ್ರಕರು ಲಕ್ಷ್ಮೇಶ್ವರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳ ಅಡಿ ಉಲ್ಲಂಘನೆ ಆರೋಪದ ಮೇಲೆ ಖಾಸಗಿ ದೂರು ಸಲ್ಲಿಸಿದ್ದರು.
ಮೊದಲ ಆರೋಪಿ ಡಾ. ನೇಕಾರ ಅವರು ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳ ಅಡಿಯಲ್ಲಿ ನೋಂದಾಯಿತ ವೈದ್ಯರಲ್ಲದಿದ್ದರೂ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸಂಜೀವಿನಿ ಕ್ಲಿನಿಕ್ ನಡೆಸುತ್ತಿದ್ದರು. ಅಲ್ಲದೇ, ಔಷಧ ಮಾರಾಟ ಮತ್ತು ಪ್ರದರ್ಶನಕ್ಕೆ ಪರವಾನಗಿ ಇಲ್ಲದ್ದಿದ್ದರೂ, ಎರಡನೇ ಆರೋಪಿಯಿಂದ (ಅರ್ಜಿದಾರ) ಅಲೋಪತಿ ಔಷಧಗಳನ್ನು ಖರೀದಿಸಿ ಸಂಜೀವಿನಿ ಕ್ಲಿನಿಕ್‌ಗೆ ಬರುತ್ತಿದ್ದ ರೋಗಿಗಳಿಗೆ ವಿತರಿಸುತ್ತಿದ್ದರು.
ಅರ್ಜಿದಾರ ಹಾವೇರಿ ಪಟ್ಟಣದ ಅಶ್ವಿನಿ ನಗರದಲ್ಲಿರುವ ಮೆಸರ್ಸ್ ಕಡ್ಲಿ ಫಾರ್ಮಾದ ಮಾಲೀಕರಾಗಿದ್ದು, ಔಷಧ ಮಾರಾಟ ಮಾಡಲು ಪರವಾನಿಗೆ ಹೊಂದಿದ್ದರು. ಈ ಪರವಾನಿಗೆಯಲ್ಲಿ ಔಷಧ ಸಂಗ್ರಹ ಅಥವಾ ವಿತರಣೆ ಮಾಡುವುದಕ್ಕೆ ಅಗತ್ಯ ಪರವಾನಗಿ ಹೊಂದಿರದ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಈ ಷರತ್ತುಗಳನ್ನು ಉಲ್ಲಂಘಿಸಿ ಮೊದಲ ಆರೋಪಿ ಡಾ.ನೇಕಾರ ಅವರಿಗೆ ಅಲೋಪತಿ ಔಷಧಗಳನ್ನು ಪೂರೈಕೆ ಮಾಡಿದ್ದ ಆರೋಪವಿತ್ತು.
ಈ ಸಂಬಂಧ ಸಹಾಯಕ ಔಷಧ ನಿಯಂತ್ರಕರು, ಸಂಜೀವಿನಿ ಕ್ಲಿನಿಕ್‌ನ ಡಾ.ನೇಕಾರ ಮತ್ತು ಕಡ್ಲಿ ಫಾರ್ಮಾದ ಮಾಲೀಕ ಅರ್ಜಿದಾರ ವಿಶ್ವನಾಥ್ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆನಂತರ ಆ ದೂರನ್ನು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದ್ದು, ಸಮನ್ಸ್ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.