ವಾರ್ಷಿಕ ಆಸ್ತಿ ವಿವರ ಸಲ್ಲಿಸಲು ವಿಫಲವಾದರೆ ಗ್ರಾ.ಪಂ ಸದಸ್ಯತ್ವ ರದ್ದಿಗೆ ಷೋಕಾಸ್‌ ನೋಟಿಸ್‌ ನೀಡಬೇಕಿಲ್ಲ: ಹೈಕೋರ್ಟ್‌

ಗ್ರಾ.ಪಂ. ಪ್ರತಿಯೊಬ್ಬ ಸದಸ್ಯನೂ ತನ್ನ ಅವಧಿ ಆರಂಭವಾದ 3 ತಿಂಗಳ ಒಳಗೆ ‍ತನ್ನ ಅವಧಿ ಮುಗಿಯುವವರೆಗೆ ಪ್ರತಿ ಆರ್ಥಿಕ ವರ್ಷ ಮುಗಿದ ಒಂದು ತಿಂಗಳ ಒಳಗೆ ಚರ-ಸ್ಥಿರಾಸ್ತಿ ಹೊಂದಿದ್ದರೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಬೇಕು.
Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench
Published on

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ನಿಗದಿತ ಅವಧಿಯಲ್ಲಿ ಆಸ್ತಿ ವಿವರ ಸಲ್ಲಿಸದಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯಿದೆಯ ಸೆಕ್ಷನ್‌ 43ಬಿ(ಎ) ಅಡಿ ಷೋಕಾಸ್‌ ನೋಟಿಸ್‌ ಜಾರಿ ಮಾಡುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ. ಅಲ್ಲದೇ, ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವುದಕ್ಕೂ ಮುನ್ನ ಅವರ ವಾದ ಆಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮೋಘಾ (ಕೆ) ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ತಮ್ಮನ್ನು ವಜಾ ಮಾಡಿದ್ದ ರಾಜ್ಯ ಚುನಾವಣಾ ಆಯೋಗದ ಆದೇಶದ ರದ್ದು ಕೋರಿ ಲಲಿತಾಬಾಯಿ ಪಾಟೀಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವ ಏಕಸದಸ್ಯ ಪೀಠವು ವಜಾ ಮಾಡಿದೆ.

“ಆಸ್ತಿ ಘೋಷಣೆ ತಡವಾಗಿರುವುದಕ್ಕೆ ಕಾರಣ ನೀಡಿದರೆ ಅಥವಾ ಸದಸ್ಯರು ಘೋಷಿಸಿರುವ ಆಸ್ತಿಯು ದೋಷಪೂರಿತವಾಗಿದ್ದರೆ ಮಾತ್ರ ವಾದಕ್ಕೆ ಅವಕಾಶ ನೀಡುವ ಅಗತ್ಯವಿರುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“2020ರ ಡಿಸೆಂಬರ್‌ 30ರಂದು ಗ್ರಾಮ ಪಂಚಾಯಿತಿ ಫಲಿತಾಂಶ ಘೋಷಿಸಲಾಗಿದ್ದು, 2021ರ ಜನವರಿ 18ರಂದು ಮೊದಲ ಸಭೆ ನಡೆದಿದೆ. ಈ ಸಭೆಯಲ್ಲಿ ಎಲ್ಲಾ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆನಂತರ ಮೂರು ತಿಂಗಳಲ್ಲಿ ಕಾಯಿದೆಯ ಸೆಕ್ಷನ್‌ 43ಬಿ (1)ರ ಅಡಿ ಆಸ್ತಿ ವಿವರ ಸಲ್ಲಿಸಬೇಕಿತ್ತು. ಅದಾಗ್ಯೂ, ಲಲಿತಾಬಾಯಿ ಅವರು ಆಸ್ತಿ ವಿವರ ಸಲ್ಲಿಸಿಲ್ಲ. ಆನಂತರ, 2021ರ ಡಿಸೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸಲು 2022ರ ಜನವರಿ 15ರ ತನಕ ಗಡುವು ವಿಧಿಸಲಾಗಿತ್ತು. ಈ ವೇಳೆಗೆ ದಾಖಲೆ ಸಲ್ಲಿಸದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಲಲಿತಾಬಾಯಿ ಅವರ ಪ್ರಕರಣದಲ್ಲಿ 2021ರ ಏಪ್ರಿಲ್‌ 18ರ ಒಳಗೆ ಆಸ್ತಿ ವಿವರದ ದಾಖಲೆ ಸಲ್ಲಿಸಬೇಕಿತ್ತು. ಆದರೆ, 10 ತಿಂಗಳಾದರೂ ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಆಯೋಗವು ಅನರ್ಹತೆ ಆದೇಶ ಮಾಡಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಹಾಲಿ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರಿಗೆ ಅಥವಾ ಅವರ ಕುಟುಂಬ ಸದಸ್ಯರಿಗೆ ಸೇರಿದ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಚರ-ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಆಸ್ತಿ ಘೋಷಣೆ ಸಲ್ಲಿಸುವುದು ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಈ ನಿಯಮ ಪಾಲಿಸದಿದ್ದಾಗ ಅವರ ವಾದ ಆಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ತಡವಾಗಿ ಆಸ್ತಿ ವಿವರ ಸಲ್ಲಿಸುವುದಕ್ಕೆ ಕಾರಣ ನೀಡಿದರೆ ಮಾತ್ರ ವಾದ ಆಲಿಸಲು ಅವಕಾಶ ಕಲ್ಪಿಸಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಕಾಯಿದೆಯ ಸೆಕ್ಷನ್‌ 43ಬಿ ಪ್ರಕಾರ ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬ ಸದಸ್ಯನೂ ತನ್ನ ಅವಧಿ ಆರಂಭವಾದ ಮೂರು ತಿಂಗಳ ಒಳಗೆ ಮತ್ತು ತನ್ನ ಅವಧಿ ಮುಗಿಯುವವರೆಗೆ ಪ್ರತಿ ಆರ್ಥಿಕ ವರ್ಷ ಮುಗಿದ ಒಂದು ತಿಂಗಳ ಒಳಗೆ ತಾನು ಅಥವಾ ತನ್ನ ಅವಿಭಜಿತ ಕುಟುಂಬ ಸದಸ್ಯರು ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚರ-ಸ್ಥಿರಾಸ್ತಿ ಹೊಂದಿದ್ದರೆ, ಅವರು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಸ್ತಿ ವಿವರ ಸಲ್ಲಿಸಲಾಗಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪದ ಪೀಠವು “ಎಲ್ಲಾ ಚುನಾಯಿತ ಮತ್ತು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿರುವಾಗ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರಾದ ಅರ್ಜಿದಾರರು ಕೋವಿಡ್‌ ಸಾಂಕ್ರಾಮಿಕದ ನೆಪವನ್ನಾಗಿ ಬಳಕೆ ಮಾಡಲಾಗದು. ಅರ್ಜಿದಾರರಿಗೆ ಆಯೋಗವು 2021ರ ಡಿಸೆಂಬರ್‌ 31ರಂದು ಆಸ್ತಿ ವಿವರನ್ನು ಆನ್‌ಲೈನ್‌ ಮೂಲಕ ಸಲ್ಲಿಸುವಂತೆ ಅವಕಾಶ ಮಾಡಿಕೊಟ್ಟಿತ್ತು. ಅದನ್ನೂ ಅವರು ಬಳಕೆ ಮಾಡಿಕೊಂಡಿಲ್ಲ” ಎಂದಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ಎಸ್‌ ಹಾಲಳ್ಳಿ ಅವರು “ಷೋಕಾಸ್‌ ನೋಟಿಸ್‌ ನೀಡಲಾಗಿಲ್ಲ ಅಥವಾ ಈ ಸಂಬಂಧ ಯಾವುದೇ ತನಿಖೆ ನಡೆಸದೇ ಸದಸ್ಯತ್ವ ರದ್ದು ಮಾಡಿ ಆದೇಶಿಸಿರುವುದನ್ನು ಬದಿಗೆ ಸರಿಸಬೇಕು. ಕಾಯಿದೆಯ ಸೆಕ್ಷನ್‌ 43ಬಿ (4)ರ ಅಡಿ ಅರ್ಜಿದಾರ ಸದಸ್ಯತ್ವ ರದ್ದುಪಡಿಸುವುದಕ್ಕೂ ಮುನ್ನ ಅವರ ವಾದ ಆಲಿಸಬೇಕು. ಕಾಯಿದೆ ಸೆಕ್ಷನ್‌ 43(ಬಿ) ಪಾಲನೆ ಮಾಡುವುದು ವಿಳಂಬವಾಗಿರಬಹುದು. ಅದನ್ನು ಪರಿಹರಿಸಬಹುದಾಗಿದ್ದು, ಸೆಕ್ಷನ್‌ 43ಬಿ(4)ರ ಅಡಿ ಅಧಿಕಾರ ಚಲಾಯಿಸಬಾರದಿತ್ತು”  ಎಂದು ವಾದಿಸಿದ್ದರು.

ಪ್ರತಿವಾದಿಗಳಾದ ಆಯೋಗದ ಪರ ವಕೀಲ ಅಮರೇಶ್‌ ಎಸ್‌. ರೋಜಾ ಮತ್ತು ಮೋಘಾ (ಕೆ) ಗ್ರಾಮ ಪಂಚಾಯಿತಿ ಪ್ರತಿನಿಧಿಸಿದ್ದ ವಕೀಲ ಕೃಪಾಸಾಗರ್‌ ಪಾಟೀಲ್‌ ಅವರು “ಅರ್ಜಿದಾರರಿಗೆ ನೋಟಿಸ್‌ ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದು ತಿಂಗಳು ಕಾದು ಆನಂತರ ಆಕ್ಷೇಪಾರ್ಹ ಆದೇಶ ಮಾಡಲಾಗಿತ್ತು” ಎಂದು ವಾದಿಸಿದ್ದರು.

Attachment
PDF
Lalitabai Vs Karnataka State Election Commission.pdf
Preview
Kannada Bar & Bench
kannada.barandbench.com