ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ ಎಂದ ಹೈಕೋರ್ಟ್

ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದೊಮ್ಮೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದ ಪೀಠ.
Justice M Nagaprasanna and Karnataka HC's Dharwad Bench

Justice M Nagaprasanna and Karnataka HC's Dharwad Bench

Published on

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಆದೇಶಿಸಿದೆ.

ಚೆಕ್‌ ಬೌನ್ಸ್ ಪ್ರಕರಣದಲ್ಲಿ ಸಾಲ ಪಡೆದ ಮೊತ್ತದ ಪೈಕಿ ಶೇ 20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ತಮಗೆ ಸೂಚಿಸಿ ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಕೊಪ್ಪಳದ ಕುಷ್ಟಗಿ ನಿವಾಸಿ ವಿಜಯಾ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರರಿಗೆ (ಸಾಲ ನೀಡಿದವರು) ಮಧ್ಯಂತರ ಪರಿಹಾರ ಪಾವತಿಸುವಂತೆ ಆರೋಪಿಗೆ (ಸಾಲ ಪಡೆದವರು) ಆದೇಶಿಸುವ ವಿವೇಚನಾಧಿಕಾರವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊಂದಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದೊಮ್ಮೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ.

“ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಯನ್ನು ಸಾಲ ಮರು ಪಾವತಿಗೆ ಹೊಣೆಗಾರರನ್ನಾಗಿ ಮಾಡಿಲ್ಲ. ಹೀಗಿದ್ದರೂ ದೂರುದಾರ ಶೇಖರಪ್ಪ ಅವರಿಂದ ಪಡೆದ ಎರಡು ಕೋಟಿ ರೂಪಾಯಿ ಸಾಲದಲ್ಲಿ ಶೇ 20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಮಾಡಬೇಕು” ಎಂದು ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಲಯವು ವಿಜಯಾ ಅವರಿಗೆ ಆದೇಶಿಸಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಸೂಚಿಸಲು ಸಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ. ಆದ್ದರಿಂದ ಈ ಆದೇಶ ನ್ಯಾಯಸಮ್ಮತ ಎಂದು ಹೈಕೋರ್ಟ್ ಹೇಳಿದೆ.

ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ದೂರುದಾರ ಶೇಖರಪ್ಪ ಅವರಿಗೆ 40 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವಾಗಿ ಪಾವತಿಸದ್ದಕ್ಕೆ ಆರೋಪಿ ವಿಜಯಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಆಸ್ತಿ ಹರಾಜಿಗೆ ಕೊಪ್ಪಳ ಮುನ್ಸಿಪಲ್ ಆಯುಕ್ತರು 2022ರ ಜನವರಿ 10ರಂದು ಹೊರಡಿಸಿದ ಸಾರ್ವಜನಿಕ ಪ್ರಕಟಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಇನ್ನೂ ಜೆಂಎಫ್‌ಸಿ ಕೋರ್ಟ್ ಆದೇಶ ಪ್ರಶ್ನಿಸಿ ವಿಜಯಾ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯನ್ನು ತ್ವರಿತವಾಗಿ ನಡೆಸುವಂತೆ ಕೊಪ್ಪಳ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ಇದೇ ವೇಳೆ ಆದೇಶಿಸಿದೆ. ಅಲ್ಲಿಯವರೆಗೆ 40 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ವಿಜಯಾಗೆ ನಿರ್ದೇಶಿಸಿ ಜೆಎಂಎಫ್‌ಸಿ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

Also Read
ರಮೇಶ್‌ ಜಾರಕಿಹೊಳಿ ವಿರುದ್ಧದ ರೂ. 5.02 ಕೋಟಿ ಮೌಲ್ಯದ ಚೆಕ್‌ ಬೌನ್ಸ್‌ ಪ್ರಕರಣ: ಮತ್ತೆ ವಿಚಾರಣೆಗೆ ಹೈಕೋರ್ಟ್‌ ಆದೇಶ

ಘಟನೆ ವಿವರ

ವ್ಯಾಪಾರ ನಡೆಸುವುದಕ್ಕಾಗಿ ವಿಜಯಾ 2020ರ ಡಿಸೆಂಬರ್‌ನಲ್ಲಿ ಶೇಖರಪ್ಪ ಅವರಿಂದ ಎರಡು ಕೋಟಿ ನಗದನ್ನು ಸಾಲವಾಗಿ ಪಡೆದಿದ್ದರು. ಸಾಲವನ್ನು ಒಂದು ತಿಂಗಳು ಅಥವಾ 2021ರ ಜನವರಿ 11ರೊಳಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಭದ್ರತಾ ಖಾತರಿಯಾಗಿ ಎರಡು ಚೆಕ್ ನೀಡಿದ್ದರು. ಆದರೆ, ಜನವರಿ 11ರ ನಂತರ ಶೇಖರಪ್ಪ ಅವರು ವಿಜಯಾ ಅವರು ನೀಡಿದ್ದ ಎರಡು ಚೆಕ್ ಅನ್ನು ಬ್ಯಾಂಕ್‌ಗೆ ನೀಡಿದಾಗ, ಅದು ಬೌನ್ಸ್ ಆಗಿತ್ತು. ಇದರಿಂದ ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿತ್ತು.

ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಲಯವು 2021ರ ಜೂನ್‌ 1ರಂದು ಸಾಲದ ಹಣದ ಪೈಕಿ ಶೇ 20ರಷ್ಟು ಅಂದರೆ 40 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ಪಾವತಿಸುವಂತೆ ವಿಜಯಾಗೆ ಆದೇಶಿಸಿತ್ತು.

Attachment
PDF
Vijaya Versus Shekharappa.pdf
Preview
Kannada Bar & Bench
kannada.barandbench.com