ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಅಗತ್ಯವಿಲ್ಲವೆಂದ ನ್ಯಾಯಾಲಯ; ಕಾರಾಗೃಹ ಕೈಪಿಡಿ ಅನ್ವಯ ಸೌಲಭ್ಯ ನೀಡಲು ಸೂಚನೆ

ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲ ಫಂಗಸ್ ಬಂದಿದೆ. ನನಗೆ ವಿಷ ನೀಡಲಿ ಎಂದು ನ್ಯಾಯಾಧೀಶರ ಮುಂದೆ ಅಲವತ್ತುಕೊಂಡ ದರ್ಶನ್‌.
Darshan, Actor
Darshan, Actor
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಬೆಂಗಳೂರಿನ ಸೆಷನ್ಸ್ ಕೋರ್ಟ್, ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ತಿಳಿಸಿದೆ. ಇದೇ ವೇಳೆ, ಜೈಲಿನಲ್ಲಿ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ದರ್ಶನ್‌ ಅವರ ಮನವಿ ಮಾನ್ಯ ಮಾಡಿರುವ ನ್ಯಾಯಾಲಯ, ಕಾರಾಗೃಹ ಕೈಪಿಡಿಯ ಅನುಸಾರ ಯಾವೆಲ್ಲ ಕನಿಷ್ಠ ಸೌಲಭ್ಯಗಳು ಇವೆಯೋ ಅವೆಲ್ಲವನ್ನೂ ಒದಗಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ, ದಿಂಬು, ಹೊದಿಕೆ ಒದಗಿಸಲು ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ ಪಿ ನಾಯ್ಕ್ ಅವರು ಮಂಗಳವಾರ ಪ್ರಕಟಿಸಿದರು.

ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸುವಂತೆ ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಸಿಗೆ, ದಿಂಬು ಹಾಗೂ ಬೇಡ್​​ಶೀಟ್​ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು. ನ್ಯಾಯಾಲಯದ ಈ ಆದೇಶದಿಂದ ದರ್ಶನ್‌ಗೆ ಕೊಂಚ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.

ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಹಾಗೂ ವಕೀಲ ಸುನೀಲ್ ಕುಮಾರ್ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ವಿಷ ಕೊಡಿ ಎಂದ ದರ್ಶನ್

ಬೆಳಗಿನ ಕಲಾಪದ ಅವಧಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ನ್ಯಾಯಾಧೀಶರ ಬಳಿ ತಮ್ಮದೊಂದು ಮನವಿ ಇದೆ ಎಂದು ತಿಳಿಸಿದ್ದರು.

ಅದೇನೆಂದು ನ್ಯಾಯಾಧೀಶರು ಕೇಳಿದಾಗ, “ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು” ಎಂದು ಮನವಿ ಮಾಡಿದ್ದರು.

ಇದನ್ನು ಕೇಳಿದ್ದ ನ್ಯಾಯಾಧೀಶರು, “ನೀವು ಹಾಗೆಲ್ಲ ಹೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ” ಎಂದು ತಿಳಿಸಿ, ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು.

Kannada Bar & Bench
kannada.barandbench.com