ಪಿಎಂ ಕೇರ್ಸ್‌ ನಿಧಿಗೆ ಸಲ್ಲಿಕೆಯಾಗಿರುವ ಕೋವಿಡ್ ದೇಣಿಗೆ ವರ್ಗಾಯಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಪಿಎಂ ಕೇರ್ಸ್ ನಿಧಿಯ ಸ್ವರೂಪ ಚಾರಿಟೆಬಲ್ (ಧರ್ಮ ದತ್ತಿ) ಟ್ರಸ್ಟ್ ರೀತಿಯಲ್ಲಿದ್ದು, ಅಲ್ಲಿಗೆ ನೀಡುವ ದೇಣಿಗೆಯು ಸ್ವಯಂ ಪ್ರೇರಿತವಾಗಿದೆ ಎಂದು ಕೋರ್ಟ್ ಹೇಳಿದೆ.
ಪಿಎಂ ಕೇರ್ಸ್‌ ನಿಧಿಗೆ ಸಲ್ಲಿಕೆಯಾಗಿರುವ ಕೋವಿಡ್ ದೇಣಿಗೆ ವರ್ಗಾಯಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಕೋವಿಡ್ ಪರಿಸ್ಥಿತಿ ನಿಭಾಯಿಸಲು ಪಿಎಂ ಕೇರ್ಸ್‌ ನಿಧಿಯಲ್ಲಿ ಸಂಗ್ರಹವಾಗಿರುವ ದೇಣಿಗೆ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸುವ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕಿರಿಸಿದೆ.

ಪಿಎಂ ಕೇರ್ಸ್ ನಿಧಿಗೆ ಸ್ವಯಂಪ್ರೇರಿತವಾಗಿ ಜನರು ದೇಣಿಗೆ ನೀಡಿದ್ದಾರೆ. ಎನ್‌ಡಿಆರ್‌ಎಫ್‌ಗೆ ನೀಡಿರುವ ದೇಣಿಗೆಗೆ ಯಾವುದೇ ತೆರನಾದ ಶಾಸನಬದ್ಧ ನಿಷೇಧ ವಿಧಿಸಲಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಉಭಯ ನಿಧಿಗಳು ಚಾರಿಟೆಬಲ್ ಟ್ರಸ್ಟ್ ರೂಪದಲ್ಲಿದ್ದರೂ ಪಿಎಂ ಕೇರ್ಸ್ ನಿಧಿಯು ಎನ್‌ಡಿಆರ್‌ಎಫ್‌ಗಿಂತ‌ ಭಿನ್ನವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಕೋವಿಡ್ ನಿಭಾಯಿಸಲು ರಾಷ್ಟ್ರೀಯ ಯೋಜನೆ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದ್ದ ಅರ್ಜಿದಾರರ ಮನವಿಯನ್ನೂ ತಿರಸ್ಕರಿಸಿರುವ ನ್ಯಾಯಾಲಯವು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಂಕ್ರಾಮಿಕತೆಯನ್ನು ನಿಭಾಯಿಸಲು ಜಾರಿಗೊಳಿಸಿರುವ ಯೋಜನೆ ಸರಿಯಾಗಿದೆ ಎಂದು ಹೇಳಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಿಂದ ಪಿಎಂ ಕೇರ್ಸ್ ನಿಧಿಯನ್ನು ಹೊರಗಿಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಪಿಎಂ ಕೇರ್ಸ್‌ ನಿಧಿಯು ಸಾರ್ವಜನಿಕ ಚಾರಿಟೆಬಲ್ ಟ್ರಸ್ಟ್‌ ಆಗಿದ್ದು, ಯಾರು ಬೇಕಾದರೂ ಸ್ವಯಂಪ್ರೇರಿತವಾಗಿ ದೇಣಿಗೆ ನೀಡಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ವಾದಿಸಿತು. ಇದಕ್ಕೆ ತಗಾದೆ ಎತ್ತಿದ ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ದುಷ್ಯಂತ್ ಧವೆ ಅವರು ಪ್ರಕರಣದಲ್ಲಿ ಯಾರದೇ ಸದ್ಭಾವನೆಯನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಆದರೆ, ಹಾಲಿ ಇರುವ ಕಾಯ್ದೆಯಿಂದ ಪಿಎಂ ಕೇರ್ಸ್ ನಿಧಿಯನ್ನು ಹೊರಗಿಡಲಾಗಿದೆ ಎನ್ನುವ ಮೂಲಕ ಕೋರ್ಟ್‌ ಗಮನಸೆಳೆದರು.

ಇನ್ನು ಎನ್‌ಡಿಆರ್‌ಎಫ್‌ ನಿಧಿಯು ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ಪಿಎಂ ಕೇರ್ಸ್‌ ಹಣಕಾಸಿನ ಲೆಕ್ಕವನ್ನು ಖಾಸಗಿ ಲೆಕ್ಕಪರಿಶೋಧಕರು ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಪಿಎಂ ಕೇರ್ಸ್‌ ಅನ್ನೂ ಸಿಎಜಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಧವೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ಜಾರಿಗೊಳಿಸುವ ಸಂಬಂಧಿತ ಪ್ರಕರಣದ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಪಿಎಂ ಕೇರ್ಸ್‌ಗೆ ದೇಣಿಗೆ ನೀಡುವವರು ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ದೊರೆಯುವ ಅನುಕೂಲಗಳಿಗೆ ಅರ್ಹರಿರುತ್ತಾರೆ. ಆದರೆ, ಎನ್‌ಡಿಆರ್‌ಎಫ್‌‌ ನಿಧಿಗೆ ದೇಣಿಗೆ ನೀಡುವವರಿಗೆ ಯಾವುದೇ ತೆರನಾದ ಪ್ರೋತ್ಸಾಹವಿಲ್ಲ ಎಂದು ಕೋರ್ಟ್ ಗಮನಸೆಳೆದರು.

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಷ್ಟ್ರೀಯ ಯೋಜನೆ ಜಾರಿಗೊಳಿಸಬೇಕಿದೆ ಎಂದು ಸಿಪಿಐಎಲ್ ಅರ್ಜಿಯಲ್ಲಿ ಉಲ್ಲೇಖಿಸಿತ್ತು. ಇದಕ್ಕೂ ಮುನ್ನ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಯೋಜನೆಯ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಪಿಎಂ ಕೇರ್ಸ್‌ ನಿಧಿ ಸ್ಥಾಪನೆಯನ್ನು ಅಫಿಡವಿಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರವು ಸಂಗ್ರಹವಾಗಿರುವ ದೇಣಿಗೆಯನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಕೇಂದ್ರ ಸರ್ಕಾರವು ಅಫಿಡವಿಟ್ ನಲ್ಲಿ ಹೀಗೆ ವಿವರಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 46ರ ಅಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಸ್ಥಾಪಿಸಲಾಗಿದೆ. ಈ ನಿಧಿಗೆ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಹಣ ಹಂಚಿಕೆ ಮಾಡುತ್ತದೆ. ಇನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಎನ್‌ಡಿಆರ್‌ಎಫ್‌ ಅನುದಾನ ಹಂಚಿಕೆ ಮಾಡಲಿವೆ. ಇದಕ್ಕೆ ಖಾಸಗಿಯವರು ದೇಣಿಗೆ ನೀಡುವುದಿಲ್ಲ.
ಕೇಂದ್ರ ಸರ್ಕಾರದ ಅಫಿಡವಿಟ್

ಹಿಂದೆ ವಕೀಲರೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಪಿಎಂ ಕೇರ್ಸ್‌ ನಿಧಿಯು ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ಒಳಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಉತ್ತರಿಸುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತ್ತು. ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದಾದರೆ ಅದು ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾದಲ್ಲಿ ಆರ್‌ಟಿಐ ಮೂಲಕ ಪಿಎಂ ಕೇರ್ಸ್ ನಿಧಿ ಮಾಹಿತಿ ಪಡೆಯಲಾಗದು.

Related Stories

No stories found.
Kannada Bar & Bench
kannada.barandbench.com