ವಯಸ್ಕರು ತಮ್ಮಿಷ್ಟದವರೊಂದಿಗೆ ವಾಸಿಸುವ ಅಥವಾ ಮದುವೆಯಾಗುವ ಹಕ್ಕು ಸಂವಿಧಾನದ 21ನೇ ವಿಧಿಯಿಂದ ದೊರೆತಿದ್ದು ಹಾಗೆ ಜೀವಿಸುವ ಅಥವಾ ವಿವಾಹವಾಗುವ ಹಕ್ಕನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಹೇಳಿದೆ.
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿ ಕೊಲೆ ಬೆದರಿಕೆ ಎದುರಿಸುತ್ತಿದ್ದ ದಂಪತಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ ಜೆ ಮುನೀರ್ ಮತ್ತು ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ವಿಭಾಗೀಯ ಪೀಠ ಜೂನ್ 7ರಂದು ಈ ವಿಚಾರ ತಿಳಿಸಿದೆ. ಪತ್ನಿಯ ಚಿಕ್ಕಪ್ಪ ಪತಿ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಆ ಮೂಲಕ ರದ್ದುಗೊಳಿಸಿದೆ.
"ಅರ್ಜಿದಾರರು ಒಂದು ವೇಳೆ ಪರಸ್ಪರ ಮದುವೆಯಾಗದಿದ್ದರೂ ಸಹ, ಒಬ್ಬ ವಯಸ್ಕ ಅವನು ಅಥವಾ ಅವಳು ಇಷ್ಟಪಡುವ ಸ್ಥಳಕ್ಕೆ ಹೋಗುವುದನ್ನು, ಅವನ ಇಲ್ಲವೇ ಅವಳ ಆಯ್ಕೆಯ ವ್ಯಕ್ತಿಯೊಂದಿಗೆ ಇರುವುದನ್ನು ಅಥವಾ ಅವನ ಇಲ್ಲವೇ ಅವಳ ಇಚ್ಛೆ ಅಥವಾ ಇಚ್ಛೆಯ ಪ್ರಕಾರ ವಿವಾಹ ಆಗುವುದನ್ನು ಯಾರೂ ನಿರ್ಬಂಧಿಸಲು ಸಾಧ್ಯವಿಲ್ಲ. ಈ ಹಕ್ಕು ಸಂವಿಧಾನದ 21ನೇ ವಿಧಿಯಿಂದ ದೊರತದ್ದಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ತನ್ನ ಚಿಕ್ಕಪ್ಪ ದಾಖಲಿಸಿರುವುದು ಸುಳ್ಳು ಪ್ರಕರಣ ಎಂದು 21 ವರ್ಷದ ಪತ್ನಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದು ಪತಿಯೊಂದಿಗೆ ತೆರಳಿದ್ದಕ್ಕಾಗಿ ತನಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ತಿಳಿಸಲಾಗಿತ್ತು. ಆದರೂ ಮ್ಯಾಜಿಸ್ಟ್ರೇಟ್ ಚಿಕ್ಕಪ್ಪನೊಂದಿಗೆ ಮಹಿಳೆಯನ್ನು ಕಳಿಸಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಚಿಕ್ಕಪ್ಪನಿಂದ ಪ್ರಾಣಭಯ ಇದೆ ಎಂದಿದ್ದರೂ ಸಂತ್ರಸ್ತೆಯನ್ನು ಆಕೆಯೊಂದಿಗೆ ಕಳಿಸಿಕೊಡಲಾಗಿತ್ತು ಎಂದು ವರದಿಯಾಗಿದೆ. ಇದು ಈ ನ್ಯಾಯಾಲಯವನ್ನು ನಿರಾಶೆಗೊಳಿಸುವಂತಹ ವಿಚಾರ. ಹಾಗೆ ವಯಸ್ಕರನ್ನು ಇನ್ನೊಬ್ಬರ ವಶಕ್ಕೆ ನೀಡಲಾಗದು. ಅವನು ಇಲ್ಲವೇ ಅವಳೊಂದಿಗೆ ಇರುವಂತೆ ಬಲವಂತಪಡಿಸಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಚಿಕ್ಕಪ್ಪನ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವುದು ಮ್ಯಾಜಿಸ್ಟ್ರೇಟ್ ಅವರ ಕರ್ತವ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಸುರಕ್ಷತೆಗಾಗಿ ಮ್ಯಾಜಿಸ್ಟ್ರೇಟ್ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂತಹ ವಿಷಯಗಳಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ತಿಳಿಯದ ವಿದ್ಯಮಾನವೇನಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಮಹಿಳೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶ ನೀಡಿದ ನ್ಯಾಯಾಲಯ ಆಕೆಗೆ ಏನಾದರೂ ತೊಂದರೆಯಾದರೆ ಪೊಲೀಸ್ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿತು.