ಪೆಗಸಸ್ ಬೇಹು ತಂತ್ರಾಂಶ ಬಳಸಿ ದೇಶದ ಆಯ್ದ ನಾಗರಿಕರ ವಿರುದ್ಧ ಕೇಂದ್ರ ಸರ್ಕಾರವು ಗೂಢಚಾರಿಕೆ ನಡೆಸಿದೆ ಎನ್ನಲಾದ ಭಾರಿ ವಿವಾದ ಸೃಷ್ಟಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ತಾನು ಪರಿಶೀಲಿಸಿದ 29 ಮೊಬೈಲ್ ಫೋನ್‌ಗಳಲ್ಲಿ ಪೆಗಸಸ್ ತಂತ್ರಾಂಶ ಪತ್ತೆಯಾಗಿಲ್ಲ ಎಂದು ಹೇಳಿದೆ.
ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ಸಲ್ಲಿಸಿರುವ ವಿಸ್ತೃತ ವರದಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠವು 29 ಫೋನ್‌ಗಳ ಪೈಕಿ 5 ಫೋನ್‌ಗಳಲ್ಲಿ ಬೇರೆ ತಂತ್ರಾಂಶ (ಮಾಲ್ವೇರ್) ಪತ್ತೆಯಾಗಿದೆ. ಆದರೆ, ಅದು ಪೆಗಸಸ್ ಅಲ್ಲ ಎಂದು ಹೇಳಿದೆ.
“ತಾಂತ್ರಿಕ ಸಮಿತಿಗೆ ನೀಡಲಾಗಿದ್ದ 29 ಫೋನ್‌ಗಳಲ್ಲಿ, 5 ಫೋನ್‌ಗಳಲ್ಲಿ ಬೇರೆ ತಂತ್ರಾಂಶ ಪತ್ತೆಯಾಗಿದೆ. ಆದರೆ, ಇದು ಪೆಗಸಸ್ ಎಂದು ಹೇಳಲಾಗದು ಎಂದು ತಾಂತ್ರಿಕ ಸಮಿತಿ ಹೇಳಿದೆ” ಎಂದು ಪೀಠ ಹೇಳಿದೆ.
ಇದಲ್ಲದೇ, “ಭಾರತ ಸರ್ಕಾರವು ತನಗೆ ಸಹಾಯ ಮಾಡಿಲ್ಲ ಎಂದು ತಾಂತ್ರಿಕ ಸಮಿತಿ ಹೇಳಿದೆ” ಎಂದೂ ಪೀಠ ದಾಖಲಿಸಿದೆ. ಸಮಿತಿಯ ವರದಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಸಾಧ್ಯತೆಯನ್ನು ತಿಳಿಸಿರುವ ಪೀಠವು ಪ್ರಕರಣವನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ಪರಿಗಣಿಸುವ ಬಗ್ಗೆ ಸೂಚನೆ ನೀಡಿದೆ.
ಸಮಿತಿಯು ಕಣ್ಗಾವಲು ಕುರಿತಾಗಿ ಕಾನೂನು ರೂಪಿಸಬೇಕಾದ ಅಗತ್ಯತೆಯೂ ಸೇರಿದಂತೆ , ದೇಶದ ಸೈಬರ್ ಭದ್ರತೆಯನ್ನು ಬಲಪಡಿಸುವುದು, ಜನರ ಖಾಸಗಿ ಹಕ್ಕಿನ ರಕ್ಷಣೆ ಹೆಚ್ಚಿಸುವುದು, ಕಾನೂನುಬಾಹಿರವಾಗಿ ನಿಗಾ ಇರಿಸುವುದಕ್ಕೆ ಸಂಬಂಧಿಸಿದಂತೆ ಅಹವಾಲು ದಾಖಲಿಸಲು ವ್ಯವಸ್ಥೆ ರೂಪಿಸುವುದು ಮುಂತಾದ ವಿಷಯಗಳ ಬಗ್ಗೆ ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ಆಯ್ದ ಐದು ಪೋನ್‌ಗಳಲ್ಲಿ ಇತರೆ ತಂತ್ರಾಂಶ ಪತ್ತೆಯಾಗಿರುವುದರಿಂದ ಅದನ್ನು ತಿಳಿದುಕೊಳ್ಳುವ ಹಕ್ಕು ಅರ್ಜಿದಾರರಿಗೆ ಇದೆ. ಹೀಗಾಗಿ, ವರದಿಯ ಪ್ರತಿ ನೀಡಬೇಕು ಎಂದು ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ಇದಕ್ಕೆ ಹಿರಿಯ ವಕೀಲರಾದ ವೃಂದಾ ಗ್ರೋವರ್ ಧ್ವನಿಗೂಡಿಸಿದರು.
“ನನ್ನ ಫೋನ್ ಅನ್ನು ಪರಿಶೀಲಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಿರುವುದರಿಂದ ಅದರಲ್ಲಿ ಯಾವ ತಂತ್ರಾಂಶ ಪತ್ತೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ನನ್ನ ಕಕ್ಷಿದಾರರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ” ಎಂದು ವೃಂದಾ ಗ್ರೋವರ್ ಹೇಳಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರ ನೇತೃತ್ವದ ಸಮಿತಿಯು ಕಳೆದ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಜೋಶಿ, ಇಂಟರ್‌ನ್ಯಾಷನಲ್ ಅರ್ಗನೈಸೇಷನ್ ಆಫ್ ಸ್ಟ್ಯಾಂಡರ್ಡೈಸೇಷನ್/ ಇಂಟರ್‌ನ್ಯಾಷನಲ್ ಎಲೆಕ್ಟ್ರೊ-ಟೆಕ್ನಿಕಲ್ ಕಮಿಷನ್/ ಜಂಟಿ ತಾಂತ್ರಿಕ ಸಮಿತಿಯ ಉಪ ಸಮಿತಿಯ ಅಧ್ಯಕ್ಷ ಡಾ. ಸುಂದೀಪ್ ಓಬೆರಾಯ್ ಅವರು ಸಮಿತಿ ಇತರೆ ಇಬ್ಬರು ಸದಸ್ಯರಾಗಿದ್ದರು.
ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಪರಿಶೀಲಿಸಿದ 29 ಫೋನ್‌ಗಳಲ್ಲಿ ಪೆಗಸಸ್ ಪತ್ತೆಯಾಗಿಲ್ಲ.
5 ಫೋನ್‌ಗಳಲ್ಲಿ ಬೇರೆ ಮಾಲ್ವೇರ್ ತಂತ್ರಾಂಶ ಪತ್ತೆಯಾಗಿದ್ದು, ಅದು ಪೆಗಸಸ್ ಅಲ್ಲ.
ಭಾರತ ಸರ್ಕಾರವು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ಸಹಾಯ ಮಾಡಿಲ್ಲ.
ಕಣ್ಗಾವಲಿನ ಬಗ್ಗೆ, ಜನರ ಖಾಸಗಿತನವನ್ನು ಸಂರಕ್ಷಿಸಲು ಕಾನೂನು ರೂಪಿಸಲು ನ್ಯಾ. ರವೀಂದ್ರನ್ ಸಮಿತಿಯಿಂದ ಶಿಫಾರಸ್ಸು.
ತಾಂತ್ರಿಕ ಸಮಿತಿಯ ವರದಿಯನ್ನು ವೆಬ್‌ಸೈಟ್‌ನಲ್ಲಿ ಸುಪ್ರೀಂ ಕೋರ್ಟ್ ಅಪ್‌ಲೋಡ್ ಮಾಡುವ ಸಾಧ್ಯತೆ. ಯಾವುದೇ ಆದೇಶ ಮಾಡದ ಪೀಠ. ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿಕೆ.