

ಪತಿ ವಿರುದ್ಧ ಪೊಲೀಸ್ ದೂರು ದಾಖಲಿಸಿಲ್ಲ ಎಂಬ ಏಕೈಕ ಕಾರಣಕ್ಕೆ ಪತ್ನಿ ಮಾಡಿರುವ ಕೌಟುಂಬಿಕ ದೌರ್ಜನ್ಯ ಮತ್ತು ಕ್ರೌರ್ಯದ ಆರೋಪಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗಿರಿಸಿರುವ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠ, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
"ವೈವಾಹಿಕ ಸಂಬಂಧದ ಸೂಕ್ಷ್ಮತೆ, ಕುಟುಂಬದ ಖಾಸಗಿ ವಿಚಾರಗಳು ಸಾರ್ವಜನಿಕವಾಗುವ ಭೀತಿ ಹಾಗೂ ಸಮಾಜದಲ್ಲಿ ಗೌರವಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಗಳಿಂದ ಮಹಿಳೆಯರು ತಮ್ಮ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಬಹುದು. ಹೀಗಾಗಿ, ಪೊಲೀಸ್ ದೂರು ದಾಖಲಿಸಿಲ್ಲ ಎಂಬ ಒಂದೇ ಕಾರಣಕ್ಕೆ ಪತ್ನಿಯ ಕಿರುಕುಳದ ಆರೋಪಗಳನ್ನು ತಳ್ಳಿಹಾಕಲಾಗದು” ಎಂದು ಪೀಠ ಹೇಳಿದೆ.
ಮದುವೆಯನ್ನು ಉಳಿಸಿಕೊಳ್ಳುವ ಆಸೆ, ಮಕ್ಕಳ ಭವಿಷ್ಯದ ಕಾಳಜಿ, ಸಂಗಾತಿಯ ಮೇಲಿನ ಅವಲಂಬನೆ ಅಥವಾ ಆತನ ವರ್ತನೆ ಮುಂದೊಂದು ದಿನ ಸುಧಾರಿಸಬಹುದು ಎಂಬ ನಿರೀಕ್ಷೆಯೂ ಪೊಲೀಸ್ ದೂರು ದಾಖಲಿಸದಿರಲು ಕಾರಣವಾಗಿರಬಹುದು ಎಂದು ನ್ಯಾಯಾಲಯ ವಿವರಿಸಿದೆ.
ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ದಂಪತಿ 1999ರ ಜೂನ್ 4ರಂದು ಚರ್ಚ್‌ನಲ್ಲಿ ಸಂಪ್ರದಾಯದಂತೆ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಪುತ್ರಿಯಿದ್ದಾಳೆ.
ಮದುವೆಯಾದ ಕೆಲವೇ ತಿಂಗಳಲ್ಲಿ ಪತಿ ಮದ್ಯವ್ಯಸನಿಯಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಪತ್ನಿ ಆರೋಪಿಸಿದ್ದರು. ಅಲ್ಲದೆ, ಜೀವ ಬೆದರಿಕೆ ಹಾಕಿದ್ದು, ಒಂದು ಸಂದರ್ಭದಲ್ಲಿ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದರು ಎಂದು ದೂರಿದ್ದರು.
ತಮ್ಮಿಂದ 29 ಚೆಕ್‌ಗಳ ಮೂಲಕ ಸುಮಾರು ₹25.08 ಲಕ್ಷ ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ. ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ದುಶ್ಚಟಗಳಿಗೆ ಬಳಸಿಕೊಂಡಿದ್ದಾರೆ. ವ್ಯವಹಾರ ಆರಂಭಿಸುವುದಾಗಿ ಹೇಳಿ ತಮ್ಮ ತಾಯಿಯಿಂದ ₹2 ಲಕ್ಷ ಪಡೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೂ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು.
ಪತಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದು, ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಆರೋಪಗಳ ಹಿನ್ನೆಲೆಯಲ್ಲಿ ಪತ್ನಿ 2017ರಲ್ಲಿ ವಿಚ್ಛೇದನ ಕಾಯಿದೆ, 1869ರ ಸೆಕ್ಷನ್ 10(1)(10)ರ ಅಡಿಯಲ್ಲಿ ವಿಚ್ಛೇದನ ಕೋರಿ ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಪತ್ನಿ ಪತಿಯ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ ಮತ್ತು ಸಲ್ಲಿಸಿರುವ ವೈದ್ಯಕೀಯ ದಾಖಲೆಗಳು ಆರೋಪಗಳನ್ನು ಸಮರ್ಥಿಸುವಷ್ಟು ಪೂರಕವಾಗಿಲ್ಲ ಎಂಬ ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯವು 2019ರ ಡಿಸೆಂಬರ್ 13ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ 41 ವರ್ಷದ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.