ಚುನಾವಣೆಯ ಮೊದಲು ಮತ್ತು ನಂತರ ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಮತ್ತು ಹಂಚುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸಲು ತನಗೆ ಯಾವುದೇ ಅಧಿಕಾರವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಚುನಾವಣೆಗೂ ಮುನ್ನ ಸಾರ್ವಜನಿಕ ಹಣ ಬಳಸಿ ಉಚಿತ ಕೊಡುಗೆಗಳ ಆಶ್ವಾಸನೆ ನೀಡುವ/ವಿತರಿಸುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆ ವಾಪಸ್ ಪಡೆದು ಅವುಗಳ ನೋಂದಣಿ ರದ್ದುಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಸಿಐ ನೀಡಿರುವ ಅಫಿಡವಿಟ್‌ನಲ್ಲಿ ಈ ಅಂಶಗಳಿವೆ. ಹೀಗೆ ಮಾಡುವುದರಿಂದ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರದರ್ಶನ ತೋರುವುದಕ್ಕೂ ಮುನ್ನವೇ ಮಾನ್ಯತೆ ಕಳೆದುಕೊಳ್ಳುವ ಸ್ಥಿತಿ ಉಂಟಾಗಬಹುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ಇಸಿಐಗಳಿಗೆ ಜನವರಿ 25 ರಂದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ಸೂಚಿಸಿತ್ತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ವೆಲ್ಫೇರ್ ಮತ್ತು ಇತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ವಂಚನೆ ಅಥವಾ ನಕಲಿ ಕಾರ್ಯಗಳ ಮೂಲಕ ನೋಂದಣಿ ಮಾಡಿದ್ದಾಗ, ನೋಂದಾಯಿತ ರಾಜಕೀಯ ಪಕ್ಷ ತನ್ನ ಸಂಘದ ನಿಯಮ ಮತ್ತು ನಿಬಂಧನೆಗಳ ಹೆಸರನ್ನು ತಿದ್ದುಪಡಿ ಮಾಡಿದಾಗ, ಆಯೋಗದ ಕಡೆಯಿಂದ ಯಾವುದೇ ವಿಚಾರಣೆಯ ಅಗತ್ಯವಿಲ್ಲದ ಮೇಲಿನ ರೀತಿಯ ಮತ್ತಾವುದಾದರೂ ಆಧಾರವಿದ್ದಾಗ ಎಂಬ ಮೂರು ಅಂಶಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬಹುದು ಎಂದು ಇಸಿಐ ವಿವರಿಸಿದೆ. ಆದರೆ ಉಚಿತ ಕೊಡುಗೆಗಳ ಭರವಸೆ ಈ ಮೂರು ಅಂಶಗಳ ವ್ಯಾಪ್ತಿಗೆ ಬರುವುದಿಲ್ಲ. ಗೆಲ್ಲುವ ಪಕ್ಷ ಸರ್ಕಾರ ರಚಿಸಿದಾಗ ಕೈಗೊಳ್ಳುವ ನೀತಿ ನಿರ್ಧಾರಗಳನ್ನು ನಿಯಂತ್ರಿಸಲು ತನಗೆ ಸಾಧ್ಯವಾಗದು ಎಂದು ಕೂಡ ಅದು ತಿಳಿಸಿದೆ.