ಭಾರತೀಯ ಕಾನೂನು ಆಯೋಗವನ್ನು ಶಾಸನಬದ್ಧ ಸಂಸ್ಥೆಯನ್ನಾಗಿಸುವ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕಾನೂನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿದ ವಿಚಾರ ಪ್ರಸ್ತುತ ಕೇಂದ್ರದ ಅಂಗಳದಲ್ಲಿದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಭಾರತೀಯ ಕಾನೂನು ಆಯೋಗವನ್ನು "ಕಾನೂನುಬದ್ಧ ಸಂಸ್ಥೆ" ಎಂದು ಘೋಷಿಸಬೇಕು ಹಾಗೂ ಒಂದು ತಿಂಗಳೊಳಗೆ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಸಿರುವ ಉದ್ದೇಶ ಸರಿ ಇಲ್ಲದೇ ಇರುವುದರಿಂದ ಭಾರಿ ದಂಡ ವಿಧಿಸಿ ವಿಚಾರಣೆಗೂ ಮೊದಲೇ ಅರ್ಜಿಯನ್ನು ವಜಾ ಮಾಡಬೇಕೆಂದು ಕೇಂದ್ರ ಕೋರಿತು.
ರಾಜಕಾರಣಿಗಳು ಮತ್ತು ಕ್ರಿಮಿನಲ್‌ಗಳ ನಡುವೆ ಇದೆ ಎನ್ನಲಾದ ಸಂಪರ್ಕದ ಕುರಿತು ವೋಹ್ರಾ ಆಯೋಗದ ವರದಿಯ ಮೇಲೆ ಕ್ರಮ ಕೋರಿ ತನ್ನ ವಾದ ಪರಿಗಣಿಸಲು ಕಾನೂನು ಸಮಿತಿಗೆ ನಿರ್ದೇಶನ ನೀಡಬೇಕು ಎಂದು ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು. "ಕಪ್ಪುಹಣ, ಬೇನಾಮಿ ಆಸ್ತಿ ಮತ್ತು ಅಸಮಾನ ಆಸ್ತಿಗಳನ್ನು ಶೇ. 100ರಷ್ಟು ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ಲೂಟಿಕೋರರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಪ್ರಾತಿನಿಧ್ಯವಾಗಿ ಪರಿಗಣಿಸಿ ಮೂರು ತಿಂಗಳೊಳಗೆ ಎರಡು ಪ್ರತ್ಯೇಕ ವರದಿಗಳನ್ನು ಸಿದ್ಧಪಡಿಸುವಂತೆ" ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿತ್ತು.