
ದೇಶದ ಜನ ₹10 ಮತ್ತು ₹20 ಮುಖಬೆಲೆಯ ನಾಣ್ಯಗಳಿಗಿಂತಲೂ ನೋಟುಗಳನ್ನು ಬಳಸಲು ಆದ್ಯತೆ ನೀಡುತ್ತಿರುವುದರಿಂದ, ₹50ರ ನಾಣ್ಯ ಚಲಾವಣೆಗೆ ತರುವ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
₹50 ನಾಣ್ಯ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಮಂಗಳವಾರ ಸಲ್ಲಿಸಲಾದ ಪ್ರತಿಕ್ರಿಯೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಈ ಹೇಳಿಕೆ ನೀಡಿದೆ.
₹50ರ ನಾಣ್ಯ ಚಲಾವಣೆಗೆ ತರುವ ಕಾರ್ಯಸಾಧ್ಯತೆಯ ಕುರಿತಂತೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2022ರಲ್ಲಿ ಚಲಾವಣೆಯಲ್ಲಿರುವ ಅಸ್ತಿತ್ವದಲ್ಲಿರುವ ನಾಣ್ಯಗಳು ಮತ್ತು ನೋಟುಗಳ ಬಳಕೆಯ ಮಾದರಿ ವಿಶ್ಲೇಷಿಸಲು ಸಮೀಕ್ಷೆ ನಡೆಸಿದೆ. ₹10 ಮತ್ತು ₹20 ಮುಖಬೆಲೆಯ ನಾಣ್ಯಗಳಿಗಿಂತ ನೋಟುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರು ನಾಣ್ಯಗಳ ತೂಕ ಮತ್ತು ಗಾತ್ರದ ಕಾರಣಕ್ಕೆ ಅದರಲ್ಲಿಯೂ ಬಹುತೇಕ ನಾಣ್ಯಗಳ ಗಾತ್ರದಲ್ಲಿ ಹೋಲಿಕೆಯಾಗುವುದರಿಂದ ಬಳಕೆಗೆ ಅಡ್ಡಿಯಾಗುತ್ತಿದೆ ಎಂದಿದ್ದಾರೆ ಎಂದು ಇಲಾಖೆ ತಿಳಿಸಿದೆ.
ನಿರ್ದಿಷ್ಟ ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ತರುವ ನಿರ್ಧಾರ ಸಾರ್ವಜನಿಕರು ನಾಣ್ಯ ಸ್ವೀಕರಿಸಲು ಸಿದ್ಧರಿದ್ದಾರೆಯೇ ಮತ್ತು ದೈನಂದಿನ ವಹಿವಾಟುಗಳಲ್ಲಿ ಅದರ ಬಳಕೆಯ ಪ್ರಮಾಣ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಅದು ಹೇಳಿದೆ.
"ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಸ್ತುತ ಸಾರ್ವಜನಿಕರು ₹10 ಮತ್ತು ₹20 ಮುಖಬೆಲೆಯ ನಾಣ್ಯಗಳಿಗಿಂತ ನೋಟುಗಳತ್ತ ಒಲವು ತೋರುತ್ತಿದ್ದಾರೆ. ಆದ್ದರಿಂದ, ₹50ರ ನಾಣ್ಯ ಚಲಾವಣೆಗೆ ತರುವ ನಿರ್ಧಾರ ದೃಷ್ಟಿಹೀನ ವ್ಯಕ್ತಿಗಳ ಕಳವಳವನ್ನಷ್ಟೇ ಅಲ್ಲದೆ ಆರ್ಥಿಕತೆಯ ಅವಶ್ಯಕತೆ, ಸಾರ್ವಜನಿಕರು ಅದನ್ನು ಸ್ವೀಕರಿಸುವ ರೀತಿ ಸೇರಿದಂತೆ ಹಲುವು ಅಂಶಗಳನ್ನು ಅವಲಂಬಿಸಿರುತ್ತದೆ. ಪ್ರಸ್ತುತ, ₹50ರ ನಾಣ್ಯ ಚಲಾವಣೆಗೆ ತರುವ ಪ್ರಸ್ತಾಪ ಇಲಾಖೆಯ ಪರಿಗಣನೆಯಲ್ಲಿಲ್ಲ” ಎಂದು ಇಲಾಖೆ ವಿವರಿಸಿದೆ.
ನೋಟುಗಳ ವಿನ್ಯಾಸದಿಂದಾಗಿ ದೃಷ್ಟಿಹೀನ ನಾಗರಿಕರು ಎದುರಿಸುತ್ತಿರುವ ತೊಂದರೆ ಮತ್ತು ಅಸಮಾನತೆಗಳ ಕುರಿತು ಅಧ್ಯಯನ ನಡೆಸಿರುವುದಾಗಿ ಅರ್ಜಿದಾರರು ವಾದಿಸಿದ್ದರು. ₹1, ₹2, ₹5, ₹10, ₹20, ₹100, ₹200, ₹500, ಮತ್ತು ₹2,000 ನೋಟುಗಳನ್ನು ದೃಷ್ಟಿಹೀನ ವ್ಯಕ್ತಿಗಳು ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದರೂ, ₹50ರ ನೋಟಿನಲ್ಲಿ ಅಂತಹ ವೈಶಿಷ್ಟ್ಯಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ (ಹೊಸ) ಸರಣಿಯ ₹10, ₹20 ಮತ್ತು ₹50ರ ಮುಖಬೆಲೆಯ ನೋಟುಗಳಲ್ಲಿ ಇಂಟಾಾಗ್ಲಿಯೊ ಮುದ್ರಣ (ದೃಷ್ಟಿಹೀನರು ಗುರುತಿಸಲು ಸಾಧ್ಯವಾಗುವಂತೆ ನೋಟುಗಳ ಮೇಲಿರುವ ಉಬ್ಬಿನ ಮುದ್ರಣ ಗುರುತು) ಇಲ್ಲ ಎಂದು ಹೇಳಿದೆ.
"ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಕಡಿಮೆ ಮೌಲ್ಯದ ನೋಟುಗಳಲ್ಲಿ ಇಂಟಾಗ್ಲಿಯೊ ಮುದ್ರಣವನ್ನು ಪುನಃ ಜಾರಿಗೆ ತರುವುದು ಅಸಾಧ್ಯವೆಂದು ಕಂಡುಬಂದಿದೆ, ಏಕೆಂದರೆ ಅಂತಹ ಮುದ್ರಣ, ನೋಟುಗಳನ್ನು ಹೆಚ್ಚು ಸ್ಪರ್ಶಿಸುವುದರ ಪರಿಣಾಮ ಬಹಳ ವೇಗವಾಗಿ ಸವೆದುಹೋಗುತ್ತದೆ. ಕಡಿಮೆ ಮೌಲ್ಯದ ನೋಟುಗಳು ಹೆಚ್ಚು ವ್ಯಾಪಕವಾಗಿ ಚಲಾವಣೆಯಾಗುವುದರಿಂದ, ಕಾಲಾನಂತರದಲ್ಲಿ ಸ್ಪರ್ಶ ವೈಶಿಷ್ಟ್ಯ ಕ್ಷೀಣಿಸುತ್ತವೆ. ಇದಲ್ಲದೆ, ಈ ಮೌಲ್ಯದ ನೋಟುಗಳಲ್ಲಿ ಇಂಟಾಗ್ಲಿಯೊ ಮುದ್ರಣವನ್ನು ಪುನಃ ಜಾರಿಗೆ ತರುವುದು ನೋಟು ಉತ್ಪಾದನೆಯ ವೆಚ್ಚ ಮತ್ತು ದಕ್ಷತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ" ಎಂದು ಇಲಾಖೆ ಸಮರ್ಥಿಸಿಕೊಂಡಿದೆ.
ಆದರೂ, ದೃಷ್ಟಿಹೀನರು ನೋಟುಗಳ ಮೌಲ್ಯ ಅಂದಾಜಿಸಲು ಅನುವಾಗುವಂತೆ ಆರ್‌ಬಿಐ 2020ರಲ್ಲಿ ಎಂಎಎನ್‌ಐ (ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್) ಎಂಬ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದೆ ಎಂದು ಅದು ಮಾಹಿತಿ ನೀಡಿದೆ.