ಕಚೇರಿ ಅವಧಿಯ ನಂತರ ವಿಚಾರಣೆ ನಡೆಸುವಂತಿಲ್ಲ: ಬಾಂಬೆ ಹೈಕೋರ್ಟ್ ಸೂಚನೆಯಂತೆ ಆಂತರಿಕ ಮಾರ್ಗಸೂಚಿ ಬಿಡುಗಡೆ ಮಾಡಿದ ಇ ಡಿ

ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿರುವ ಇ ಡಿ ತನಿಖೆಗೊಳಪಡಿಸುವವರ ನಿದ್ರಿಸುವ ಹಕ್ಕನ್ನು ಗೌರವಿಸುವ ಮಹತ್ವದ ಬಗ್ಗೆ ತಿಳಿಹೇಳಿದೆ.
Enforcement Directorate
Enforcement Directorate
Published on

ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಸಮನ್ಸ್‌ ಪಡೆದವರ ಹೇಳಿಕೆಗಳನ್ನು ತಡರಾತ್ರಿಯವರೆಗೂ ಪಡೆದುಕೊಳ್ಳುವ ಬದಲು ಕಚೇರಿ ಅವಧಿಗೇ ಸೀಮಿತಗೊಳಿಸಲು ಎಲ್ಲಾ ಯತ್ನ ಮಾಡುವಂತೆ ಜಾರಿ ನಿರ್ದೇಶನಾಲಯ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿರುವ ಇ ಡಿ ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು ಎಂದಿದೆ.

Also Read
ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ ಡಿ ಕಸಿಯುವಂತಿಲ್ಲ: ಬಾಂಬೆ ಹೈಕೋರ್ಟ್

ಸುತ್ತೋಲೆ ಆಂತರಿಕವಾಗಿರಬೇಕೆ ವಿನಾ ಸಾರ್ವಜನಿಕರಿಗೆ ಲಭಿಸುವಂತಾಗಬಾರದು ಎಂದು ಅಕ್ಟೋಬರ್ 14 ರಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರಿದ್ದ ಹೈಕೋರ್ಟ್‌ ಪೀಠ ಸೂಚಿಸಿದೆ. ಆದ್ದರಿಂದ, ಸುತ್ತೋಲೆಯ ಸಂಬಂಧಿತ ಭಾಗಗಳನ್ನು ಇ ಡಿಯ ಜಾಲತಾಣ ಮತ್ತದರ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸುವಂತೆ ಅದು ಇ ಡಿಗೆ ನಿರ್ದೇಶಿಸಿದೆ.

ತನ್ನ ಅಕ್ರಮ ಬಂಧನ ಪ್ರಶ್ನಿಸಿ 64 ವರ್ಷದ ಉದ್ಯಮಿ ರಾಮ್ ಇಸ್ರಾನಿ ಅವರ ಅರ್ಜಿಯನ್ನು ಕಳೆದ ಏಪ್ರಿಲ್ 15 ರಂದು ವಜಾಗೊಳಿಸಿದ್ದ ಇದೇ ಪೀಠ ಹೇಳಿಕೆ ದಾಖಲಿಸುವುದಕ್ಕಾಗಿ ಕಚೇರಿಯಲ್ಲಿ ಉದ್ಯಮಿಯನ್ನು ಕಾಯುವಂತೆ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಹೀಗೆ ಮಾಡುವುದು ಇಸ್ರಾನಿ ಅವರ ನಿದ್ರಿಸುವ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಅದು ಆಗ ಹೇಳಿತ್ತು.

“ನಿದ್ರಿಸುವ ಹಕ್ಕು ಮನುಷ್ಯನ ಮೂಲಭೂತ ಹಕ್ಕಾಗಿದೆ. ನಿದ್ರಿಸುವ ಹಕ್ಕು ನೀಡದಿದ್ದರೆ ವ್ಯಕ್ತಿಯ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇದು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆತನ ಮಾನಸಿಕ ಸಾಮರ್ಥ್ಯ ಹಾಗೂ ಗ್ರಹಿಕೆಯ ಕೌಶಲ್ಯ ಇತ್ಯಾದಿಗಳನ್ನು ದುರ್ಬಲಗೊಳಿಸಬಹುದು. ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಕರೆಸಿಕೊಂಡು ವ್ಯಕ್ತಿಯ ಮೂಲಭೂತ ಹಕ್ಕನ್ನು ಅಂದರೆ ನಿದ್ರಿಸುವ ಹಕ್ಕನ್ನು ವಂಚಿಸುವಂತಿಲ್ಲ. ಹೇಳಿಕೆಗಳನ್ನು ಸೂಕ್ತ ಸಮಯದಲ್ಲಿಯೇ ದಾಖಿಸಿಕೊಳ್ಳಬೇಕೆ ವಿನಾ ವ್ಯಕ್ತಿಯ ಗ್ರಹಿಕೆಯ ಕೌಶಲ್ಯಗಳು ದುರ್ಬಲಗೊಂಡಿರುವ ರಾತ್ರಿ ಹೊತ್ತಿನಲ್ಲಿ ಅಲ್ಲ” ಎಂದು ನ್ಯಾಯಾಲಯ ಆಗ ಎಚ್ಚರಿಕೆ ನೀಡಿತ್ತು.

Kannada Bar & Bench
kannada.barandbench.com