ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಮಧ್ಯಪ್ರವೇಶಕ್ಕೆ ನಕಾರ

ದೆಹಲಿಯಲ್ಲಿ ಪ್ರಕರಣ ನಡೆದಿದೆ ಎಂಬ ಕಾರಣಕ್ಕೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದ ಸರ್ವೋಚ್ಚ ನ್ಯಾಯಾಲಯ.
Manish Sisodia and Supreme Court
Manish Sisodia and Supreme Court

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಸಿಬಿಐ ಕ್ರಮ ಪ್ರಶ್ನಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ದೆಹಲಿಯಲ್ಲಿ ಪ್ರಕರಣ ನಡೆದಿದೆ ಎಂಬ ಕಾರಣಕ್ಕೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ಹೇಳಿದೆ.

ಸಿಸೋಡಿಯಾ ಅವರಿಗೆ ಪರ್ಯಾಯ ಪರಿಹಾರಗಳು ಇವೆ. ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಅರ್ಜಿ ಪುರಸ್ಕರಿಸಲು ನಮಗೆ ಒಲವು ಇಲ್ಲ  ಎಂದು ನ್ಯಾಯಾಲಯ ತಿಳಿಸಿತು. ಅಬಕಾರಿ ನೀತಿಯ ಹಗರಣಕ್ಕೆ ಕಾರಣರಾದ ಆರೋಪದಡಿ ಭಾನುವಾರ ಸಂಜೆ ಬಂಧಿತರಾಗಿದ್ದ ಸಿಸೋಡಿಯಾ ಅವರನ್ನು ಮಾರ್ಚ್ 4 ರವರೆಗೆ ಸಿಬಿಐ ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿ ಸಿಸೋಡಿಯಾ ಅವರನ್ನು ಸಿಬಿಐ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದೆ.  

ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರು ಲಂಚ ಪಡೆದು ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ದೆಹಲಿ ಮುಖ್ಯ ಕಾರ್ಯದರ್ಶಿ ವರದಿ ಆಧರಿಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ನಂತರ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ  ಪ್ರಕರಣ ದಾಖಲಿಸಿದ್ದವು. ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ಶಾಸನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಗಮನಾರ್ಹ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುವ ನೀತಿಯ ಅಧಿಸೂಚನೆ ಹೊರಡಿಸಿದ್ದಾರೆಎಂದು ವರದಿ ಹೇಳಿತ್ತು. ಇದೇ ವೇಳೆ ಆರೋಪಪಟ್ಟಿಯಲ್ಲಿ ಸಿಸೋಡಿಯಾ ಹೆಸರಿಲ್ಲದಿದ್ದರೂ ಅವರು ಹಾಗೂ ಮತ್ತಿತರರ ವಿರುದ್ಧ ತನಿಖೆ ನಡೆಸಲಾಗಿದೆ. ಸಿಸೋಡಿಯಾ ನಿರಪರಾಧಿ ಎಂದು ಎಎಪಿ ಸಮರ್ಥಿಸಿಕೊಂಡಿತ್ತು.

ಇಂದು ಪ್ರಕರಣದ ವಿಚಾರಣೆ ನಡೆದಾಗ ಸಿಸೋಡಿಯಾ ಅವರು ಹೈಕೋರ್ಟ್‌ನಲ್ಲಿ ಪರ್ಯಾಯ ಪರಿಹಾರ ಕಂಡುಕೊಳ್ಳಬಹುದು ಎಂದು ಪೀಠ ಹೇಳಿತು. ಪತ್ರಕರ್ತರಾದ ವಿನೋದ್ ದುವಾ ಪ್ರಕರಣ ಮತ್ತು ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳಿಗಿಂತ ಈ ಪ್ರಕರಣ ಭಿನ್ನ ಎಂದು ಅದು ಹೇಳಿತು.

Kannada Bar & Bench
kannada.barandbench.com