ಭದ್ರತಾ ಕಾರಣ ನೀಡಿ ಸಿಸಿಟಿವಿ ಅಳವಡಿಸಿಕೊಂಡವರಿಗೆ ನೆರೆಹೊರೆಯವರ ಮೇಲೆ ಕಣ್ಣಿಡುವ ಹಕ್ಕಿಲ್ಲ: ಕೇರಳ ಹೈಕೋರ್ಟ್

ವ್ಯಕ್ತಿಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನು ನಿಯಂತ್ರಿಸಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ನ್ಯಾ. ವಿ ಜಿ ಅರುಣ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದರು.
Kerala High Court and CCTV camera
Kerala High Court and CCTV camera

ಭದ್ರತಾ ಕಾರಣ ನೀಡಿ ಸಿಸಿಟಿವಿ ಅಳವಡಿಸಿಕೊಂಡವರು ನೆರೆ ಹೊರೆಯವರ ಮೇಲೆ ಕಣ್ಣಿಡಲು ಅವಕಾಶ ನೀಡಬಾರದು ಎಂದು ಕೇರಳ ಹೈಕೋರ್ಟ್ ಮಂಗಳವಾರ ತಿಳಿಸಿದೆ [ಆಗ್ನೆಸ್ ಮೈಕೆಲ್ ಮತ್ತು ಚೆರನೆಲ್ಲೂರು ಗ್ರಾಮ ಪಂಚಾಯತ್ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಸೂಕ್ತ ಮಾರ್ಗಸೂಚಿ  ರೂಪಿಸುವಂತೆ  ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತು.

Also Read
ಇ- ಕಣ್ಗಾವಲು ಮಾಹಿತಿ ಬಹಿರಂಗ: ಕೇಂದ್ರದ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

"ಸುರಕ್ಷತಾ ಕಾರಣಗಳಿಗಾಗಿ ಸಿಸಿಟಿವಿ ಕಣ್ಗಾವಲು ಕ್ಯಾಮೆರಾ ಅಳವಡಿಸಿಕೊಳ್ಳುವ ನೆಪದಲ್ಲಿ, ವ್ಯಕ್ತಿಗಳು ತಮ್ಮ ನೆರೆಹೊರೆಯವರ ವ್ಯವಹಾರಗಳಿಗೆ ಇಣುಕಲು ಅವಕಾಶ ನೀಡಬಾರದು ಎಂಬ ಪ್ರಾಥಮಿಕ ಅಭಿಪ್ರಾಯ ನನ್ನದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುತ್ತಿರುವ ರೀತಿ ಬಗ್ಗೆ ಆದೇಶ ಅಥವಾ ಮಾರ್ಗಸೂಚಿ ರೂಪಿಸುವಂತೆ ಪರಿಸ್ಥಿತಿ ಬೇಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು”ಎಂದು ನ್ಯಾಯಾಲಯ ನಿರ್ದೇಶಿಸಿದೆ.

ನೆರೆಮನೆಯ ವ್ಯಕ್ತಿಯೊಬ್ಬರು ಸಿಸಿಟಿವಿ ಅಳವಡಿಸಿಕೊಂಡು ತನ್ನ ಮನೆಯ ಕಾಂಪೌಂಡ್‌ ಮತ್ತು ನಿವಾಸದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಸ್ವಯಂ ಪ್ರೇರಿತವಾಗಿ ಪಕ್ಷಕಾರರನ್ನಾಗಿ ಮಾಡಿಕೊಂಡ ನ್ಯಾಯಾಲಯ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ತಿಳಿಸಿತು. ಮುಂದಿನ ತಿಂಗಳು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.  

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
_Agnes_Michale_v_Cheraneulloor_Grama_Panchayat_and_others__.pdf
Preview

Related Stories

No stories found.
Kannada Bar & Bench
kannada.barandbench.com