![[ಆರ್‌ಟಿಐ ಕಾಯಿದೆ] 476 ಅರ್ಜಿ ಸಲ್ಲಿಸಿದ್ದಕ್ಕೆ ಕಪ್ಪುಪಟ್ಟಿಗೆ ಸೇರಿಸಿರುವ ಆದೇಶ ತಡೆ ನೀಡಲು ಹೈಕೋರ್ಟ್ ನಕಾರ](http://media.assettype.com/barandbench-kannada%2F2025-10-15%2Fucfzqj8e%2FWhatsApp-Image-2025-10-15-at-3.41.51-PM.jpeg?w=480&auto=format%2Ccompress&fit=max)
ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯ ದುರುಪಯೋಗಕ್ಕೆ ಅವಕಾಶ ನೀಡಲಾಗದು ಎಂದು ತೀಕ್ಷ್ಣವಾಗಿ ಬುಧವಾರ ನುಡಿದಿರುವ ಕರ್ನಾಟಕ ಹೈಕೋರ್ಟ್, ಆರ್‌ಟಿಐ ಕಾಯಿದೆ ಅಡಿ ಮಾಹಿತಿ ಪಡೆಯದಂತೆ ವ್ಯಕ್ತಿಯೊಬ್ಬರನ್ನು ಕಪ್ಪುಪಟ್ಟಿಗೆ ಸೇರಿಸಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ರಾಜ್ಯ ಮಾಹಿತಿ ಆಯುಕ್ತರು 2025ರ ಜನವರಿ 28ರಂದು ಹೊರಡಿಸಿರುವ ಆದೇಶ ರದ್ದುಕೋರಿ ಆರ್‌ಟಿಐ ಕಾರ್ಯಕರ್ತ ಕೆ ದೇವಿಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿದ್ದು, ಮಾಹಿತಿ ಆಯುಕ್ತರ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು “ಅರ್ಜಿದಾರರು ಒಂದೇ ವಿಷಯದ ಬಗ್ಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಿಲ್ಲ. ವಿವಿಧ ಅಂಶಗಳ ಬಗ್ಗೆ ಮಾಹಿತಿ ಕೋರಿ 400ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆರ್‌ಟಿಐ ಕಾಯಿದೆಯಡಿ ಲಭ್ಯವಿರುವ ಹಕ್ಕನ್ನಷ್ಟೇ ಅರ್ಜಿದಾರರು ಬಳಸಿದ್ದಾರೆ. ಅದಕ್ಕೆ ಯಾವುದೇ ಶಾಸನಬದ್ಧ ನಿರ್ಬಂಧವಿಲ್ಲ. ಇಂಥದೇ ಪ್ರಕರಣದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಮತ್ತೊಬ್ಬ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸಮಾನತೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧದ ಆದೇಶಕ್ಕೂ ತಡೆ ನೀಡಬೇಕು” ಎಂದು ಕೋರಿದರು.
ವಾದ ಆಲಿಸಿದ ಪೀಠವು “ಮೊದಲಿಗೆ ಅರ್ಜಿದಾರರು ಆರ್‌ಟಿಐ ಕಾಯಿದೆ ಅಡಿ 476 ಅರ್ಜಿಗಳನ್ನು ಸಲ್ಲಿಸಿರುವುದು ಅಪ್ರಸ್ತುತ ಎಂದು ತೋರುತ್ತದೆ. ನೀವು (ಅರ್ಜಿದಾರ) ಸಾರ್ವಜನಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರೂ 400 ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬ ಬಗ್ಗೆ ತಿಳಿದುಕೊಂಡಿರಬೇಕು, ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. 400 ಅರ್ಜಿಗಳನ್ನು ಸಲ್ಲಿಸುವ ಮೂಲಕ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಮೊದಲು ನಾವು ನಿರ್ಧರಿಸಬೇಕಿದೆ” ಎಂದು ತಿಳಿಸಿದ ಪೀಠವು ಮಾಹಿತಿ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.
ಅಂತಿಮವಾಗಿ, ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯುಕ್ತರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯವು ಅರ್ಜಿದಾರರು ಆರ್‌ಟಿಐ ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗಳ ಸ್ವರೂಪ ಹಾಗೂ ಅವರು ಯಾವ ರೀತಿಯ ಮಾಹಿತಿ ಕೋರಿದ್ದಾರೆ ಎಂಬ ವಿವರಗಳನ್ನು ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಆರ್‌ಟಿಐ ಕಾಯಿದೆ ಅಡಿ ಮಾಹಿತಿ ಕೋರಿ 476 ಅರ್ಜಿಗಳನ್ನು ಸಲ್ಲಿಸಿದ್ದ ಚಾಮರಾಜನಗರದ ಕೆ ದೇವಿಪ್ರಸಾದ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ 2025ರ ಜನವರಿ 28ರಂದು ಆದೇಶ ಹೊರಡಿಸಿದ್ದ ರಾಜ್ಯ ಮಾಹಿತಿ ಆಯುಕ್ತರು, ಆರ್‌ಟಿಐ ಕಾಯಿದೆ ಅಡಿ ಮಾಹಿತಿ ಪಡೆಯದಂತೆ ದೇವಿಪ್ರಸಾದ್ ಅವರನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದರು.
ಈ ಆದೇಶ ರದ್ದುಪಡಿಸಬೇಕು ಹಾಗೂ ಆರ್‌ಟಿಐ ಕಾಯಿದೆ ಅಡಿ ತಾವು ಕೋರಿರುವ ಮಾಹಿತಿ ಒದಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿರುವ ದೇವಿಪ್ರಸಾದ್, ಅರ್ಜಿ ಇತ್ಯರ್ಥವಾಗುವವರೆಗೆ ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವ ಆದೇಶಕ್ಕೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.