ತೀರ್ಪುಗಳಲ್ಲಿ ʼವೇಶ್ಯೆʼ, ʼಕನ್ಯೆʼ, ʼನಡತೆಗೆಟ್ಟ ಮಹಿಳೆʼ ಇತ್ಯಾದಿ ಪದ ಬಳಸುವಂತಿಲ್ಲ: ಸುಪ್ರೀಂ ಕೋರ್ಟ್ ಕೈಪಿಡಿ

ಸಿಜೆಐ ಚಂದ್ರಚೂಡ್ ಅವರು ಕೈಪಿಡಿಗೆ ಮುನ್ನುಡಿ ಬರೆದಿದ್ದು ಅದರಲ್ಲಿ ಹಾನಿಕಾರಕ ಅಸೂಕ್ಷ್ಮತೆಗಳನ್ನು ಹೆಚ್ಚಿಸುವ ತಮ್ಮದೇ ಆದ ಕಲ್ಪನೆಗಳನ್ನು ನ್ಯಾಯಾಂಗ ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.
Gender Equality
Gender Equality

ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅಸೂಕ್ಷ್ಮ ಮತ್ತು ಬಿಡುಬೀಸಾದ ಊಹೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಲಿಂಗತ್ವ ಅಸೂಕ್ಷ್ಮತೆ ತಪ್ಪಿಸುವ ಕೈಪಿಡಿಯೊಂದನ್ನು ಸುಪ್ರೀಂಕೋರ್ಟ್‌ ಬಿಡುಗಡೆ ಮಾಡಿದ್ದು ಇಂತಹ ಅಸೂಕ್ಷ್ಮಗಳ ವಿರುದ್ಧ ನ್ಯಾಯಾಂಗ ಭವಿಷ್ಯದಲ್ಲಿ ಹೆಜ್ಜೆ ಇರಿಸಲು ಕೈಪಿಡಿ ದಾರಿ ದೀಪವಾಗಲಿದೆ. ಹ್ಯಾಂಡ್‌ಬುಕ್‌ ಆನ್‌ ಕಂಬ್ಯಾಟಿಂಗ್‌ ಜೆಂಡರ್‌ ಸ್ಟೀರಿಯೋಟೈಪ್ಸ್‌ʼ (ಲಿಂಗತ್ವ ರೂಢಿಗತ ಗ್ರಹಿಕೆಗಳ ವಿರುದ್ಧದ ಹೋರಾಟದ ಕೈಪಿಡಿ) ಎನ್ನುವ ಹೆಸರಿನ ಪುಸ್ತಕ ಇದಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ  ಚಂದ್ರಚೂಡ್‌ ಅವರು ಕೈಪಿಡಿಗೆ ಮುನ್ನುಡಿ ಬರೆದಿದ್ದು ಇದು ನ್ಯಾಯಾಧೀಶರು ಸ್ವೀಕರಿಸುವ ಪ್ರಮಾಣವಚನದ ಪಾವಿತ್ರ್ಯತೆಯನ್ನು ನೆನಪಿಸುತ್ತದೆ. ಜೊತೆಗೆ ಹಾನಿಕಾರಕ ಅಸೂಕ್ಷ್ಮತೆಗಳನ್ನು ಹೆಚ್ಚಿಸುವ ತಮ್ಮದೇ ಆದ ಕಲ್ಪನೆಗಳನ್ನು ನ್ಯಾಯಾಂಗ ಬದಿಗೆ ಸರಿಸುವ ನಿಟ್ಟಿನಲ್ಲಿ ಏನು ಮಾಡಬೇಕೆಂಬುದನ್ನು ವಿವರಿಸುತ್ತದೆ.

Also Read
ಲಿಂಗತ್ವ ಅಸೂಕ್ಷ್ಮತೆ ತೊಡೆದು ಹಾಕಲು ಸುಪ್ರೀಂ ಕೋರ್ಟ್‌ ಕೈಪಿಡಿ ಬಿಡುಗಡೆ: ನ್ಯಾಯಾಲಯಗಳು ಪಾಲಿಸಬೇಕಾದ ವಿವರಗಳ ಉಲ್ಲೇಖ

ನಿರ್ದಿಷ್ಟವಾಗಿ ಮಹಿಳೆಯರ ಕುರಿತಾದ ರೂಢಿಗತ ಗ್ರಹಿಕೆಗಳ ಮೇಲೆ ಅವಲಂಬಿತರಾದರೆ ಅದು ಮಹಿಳೆಯರಿಗೆ ಅನ್ವಯವಾಗುವ ಕಾನೂನುಗಳನ್ನು ಹಾನಿಕಾರಕ ರೀತಿಯಲ್ಲಿ ವಿರೂಪಗೊಳಿಸುವ ಸಾಧ್ಯತೆ ಇದೆ ಎಂದು ಮುನ್ನುಡಿಯಲ್ಲಿ ತಿಳಿಸಲಾಗಿದೆ.

Also Read
ಮಹಿಳೆ ಪ್ರಚೋದನಕಾರಿ ಉಡುಗೆ ತೊಟ್ಟರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲದು: ಕೇರಳ ನ್ಯಾಯಾಲಯ

ಕೈಪಿಡಿಯಲ್ಲಿರುವ ಪ್ರಮುಖ ಸಂಗತಿಗಳು

  • 'ಬಲವಂತದ ಅತ್ಯಾಚಾರ' (ಬಲಾತ್ಕಾರ) ಪದದ  ಬದಲಿಗೆ 'ಅತ್ಯಾಚಾರ' ಎಂಬ ಪದ ಬಳಸಬೇಕು. ಲೈಂಗಿಕ ಹಿಂಸೆಗೆ ತುತ್ತಾದ ಮತ್ತು ಪ್ರಲೋಭನೆಯೊಡ್ಡಿದ ಪದಗಳ ಬದಲಿಗೆ ಅತ್ಯಾಚಾರಕ್ಕೀಡಾದ, ಲೈಂಗಿಕ ದಾಳಿ/ ದೌರ್ಜನ್ಯಕ್ಕೊಳಗಾದವರು ಎಂದು ಬರೆಯಬೇಕು.

  • ಸೂಳೆ ಅಥವಾ ವೇಶ್ಯೆ ಪದದ ಬದಲಿಗೆ ಲೈಂಗಿಕ ಕಾರ್ಯಕರ್ತೆ ಎಂಬ ಪದ ಬಳಸಬೇಕು.  

  • ʼಲಿಂಗʼ ಎನ್ನುವುದು ವ್ಯಕ್ತಿಗಳ ಜೈವಿಕ ಗುಣಲಕ್ಷಣಗಳನ್ನು ಸೂಚಿಸುತ್ತದೆ, ಲಿಂಗತ್ವ ಎಂಬುದು ಸಾಮಾಜಿಕ ರಚನೆಯಾಗಿದ್ದು ವ್ಯಕ್ತಿಯ ಲಿಂಗತ್ವ ಅಸ್ಮಿತೆ ಕೇವಲ ಇಬ್ಬರಿಗೆ ಸೀಮಿತವಾಗಿಲ್ಲ ಬದಲಿಗೆ ವಿವಿಧ ಸ್ತರಗಳಲ್ಲಿ ಅಸ್ತಿತ್ವದಲ್ಲಿದ್ದು ಕಾಲಾನಂತರದಲ್ಲಿ ವಿಕಸನಗೊಳ್ಳಬಹುದು.

  • ಯಾವುದೇ ಲಿಂಗಕ್ಕೆ ಸಂಬಂಧಿಸಿದಂತೆಯೂ ಹಾನಿಕಾರಕ ರೂಢಿಗತ ಗ್ರಹಿಕೆಗಳು ಅಸ್ತಿತ್ವದಲ್ಲಿರಬಹುದು.

  • ದ್ವಿಲಿಂಗಿ (ಹರ್ಮಾಫ್ರೋಡೈಟ್) ಬದಲಿಗೆ ಅಂತರ್‌ಲಿಂಗಿ (ಇಂಟರ್‌ಸೆಕ್ಸ್‌), 'ತೃತೀಯಕಾಮಿ (ಟ್ರಾನ್ಸ್ಸೆಕ್ಸುವಲ್) ಬದಲಿಗೆ ತೃತೀಯ ಲಿಂಗಿ, ಪುರುಷನಂತೆ ವೇಷ ಧರಿಸಿದ ಸ್ತ್ರೀ (ಟ್ರಾನ್ಸ್ವೆಸ್ಟೈಟ್') ಬದಲಿಗೆ ಕ್ರಾಸ್‌ ಡ್ರೆಸರ್‌ ಎಂಬ ಪದಗಳನ್ನು ಬಳಸತಕ್ಕದ್ದು.

  • ಫಾಗಾಟ್ (ಪುರುಷ ಸಲಿಂಗ ಕಾಮಿ) ಎಂಬ ಅವಹೇಳನಕಾರಿ ಪದದ ಬದಲಿಗೆ ವ್ಯಕ್ತಿಯ ಲೈಂಗಿಕ ದೃಷ್ಟಿಕೋನದ ನಿಖರ ವಿವರಗಳನ್ನು ಬಳಸಬೇಕು.

  • ಉದ್ಯೋಗಸ್ಥ ಮಹಿಳೆ, ಭಾರತೀಯ/ ಪಾಶ್ಚಾತ್ಯ ಮಹಿಳೆ, ಕನ್ಯಾಸ್ತ್ರೀ, ಜಾರಿಣಿ, ನೈತಿಕತೆ ಇಲ್ಲದವಳು, ಚಂಚಲೆ ಅಥವಾ ವ್ಯಭಿಚಾರಿಣಿ ಮುಂತಾದ ಅನಗತ್ಯ ವಿವರಣೆಗಳನ್ನು ತೆಗೆದುಹಾಕಬೇಕು.

  • ವಿವಾಹೇತರ ಸಂಬಂಧಗಳ ಕುರಿತಂತೆ ಉಪಪತ್ನಿ, ಇಟ್ಟುಕೊಂಡವಳು ಅಥವಾ ವಾರಾಂಗನೆ ಎಂಬ ಪದಗಳ ಬದಲಿಗೆ ʼವಿವಾಹೇತರ ಸಂಬಂಧ ಹೊಂದಿರುವ ಮಹಿಳೆʼ ಎಂಬ ಪದ ಬಳಸಬೇಕು.

  •  'ಕರ್ತವ್ಯನಿರತ, ನಿಷ್ಠಾವಂತ, ಒಳ್ಳೆಯ, ಅಥವಾ ವಿಧೇಯ ಪತ್ನಿʼ ಎಂಬ ಪದಗಳ ಬದಲಿಗೆ ಪತ್ನಿ ಎಂಬ ಪದವನ್ನಷ್ಟೇ ಬಳಸಬೇಕು.

  • ಹೌಸ್‌ವೈಫ್‌ (ಗೃಹಿಣಿ) ಪದದ ಬದಲಿಗೆ ʼಹೋಮ್‌ಮೇಕರ್‌ (ಗೃಹಿಣಿ)ʼ ಪದ ಬಳಸಿ.

  • ಮಹಿಳೆಯ ʼಹಾರ್ಮೋನಲ್‌ʼ ಸ್ಥಿತಿ ವಿವರಿಸುವುದಕ್ಕಿಂತಲೂ ಲಿಂಗ-ತಟಸ್ಥ ಪದಗಳೊಂದಿಗೆ ಮಹಿಳೆಯ ಭಾವನಾತ್ಮಕ ಸ್ಥಿತಿಯನ್ನು ವಿವರಿಸಿ.

  • ಲೈಂಗಿಕ ಹಿಂಸಾಚಾರಕ್ಕೆ ತುತ್ತಾದ ವ್ಯಕ್ತಿಯನ್ನು ಸಂತ್ರಸ್ತರು ಅಥವಾ ಬಲಿಪಶುಗಳು ಎಂದು ಗುರುತಿಸಬಹುದು. ವ್ಯಕ್ತಿ ಆದ್ಯತೆ ನೀಡದೆ ಹೋದರೆ ಎರಡೂ ಪದಗಳನ್ನು ಬಳಸಬಹುದಾದರೂ ಈ ಸಂದರ್ಭದಲ್ಲಿ ವ್ಯಕ್ತಿಯ ಆದ್ಯತೆಯನ್ನು ಗೌರವಿಸಬೇಕು (ಕೇರಳ ಹೈಕೋರ್ಟ್‌ ಹಾದಿಯಾ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ ಬಳಸಿದ ಪದಗಳಿಗೆ ಆಕ್ಷೇಪಿಸುತ್ತಾ ಪ್ರಸ್ತಾಪ).

  • ಮಹಿಳೆಯ ಉಡುಗೆ ತೊಡುಗೆಗಳಂತಹ ಅಭಿವ್ಯಕ್ತಿ ಶೀಲ ಆಯ್ಕೆ ಮತ್ತು ಆಕೆಯ ಚಾರಿತ್ರ್ಯ ಆಧರಿಸಿ ಆಕೆಯ ನಡತೆಯನ್ನು ಊಹಿಸುವಂತಿಲ್ಲ (ಕೇರಳದ ನ್ಯಾಯಾಲಯವೊಂದು ಈಚೆಗೆ ನೀಡಿದ್ದ ಪ್ರಚೋದನಕಾರಿ ಉಡುಗೆ ತೀರ್ಪಿನ ಪ್ರಸ್ತಾಪ).

  • ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತಕ್ಷಣ ದೂರು ನೀಡಿಲ್ಲ ಎಂಬ ರೂಢಿಗತ ಗ್ರಹಿಕೆಯಿಂದ ಹೊರಬರಬೇಕು. ಆಘಾತಕಾರಿ ಘಟನೆಗಳ ಬಗ್ಗೆ ಬೇರೆ ಬೇರೆ ಜನ ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ.  

  • ಮಹಿಳೆಯರು ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಸುಳ್ಳು ಆರೋಪಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಏಕಾಏಕಿ ಊಹಿಸುವುದು ಕೂಡ ಖಂಡನೀಯ (ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಬಳಸಿದ ಪದಗಳನ್ನು ಅಲ್ಲಗಳೆಯುತ್ತಾ ಹೇಳಲಾಗಿದೆ).

[ಕೈಪಿಡಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
SC_handbook_gender_stereotypes.pdf
Preview

Related Stories

No stories found.
Kannada Bar & Bench
kannada.barandbench.com