ವೇತನ ಸಹಿತ ಋತುಚಕ್ರ ರಜೆ ನೀತಿಯು ಪ್ರಗತಿಪರ ಕ್ರಮ ಎಂದು ಸಮರ್ಥಿಸಿದ ಸರ್ಕಾರ; ಅಧಿಸೂಚನೆ ತಡೆಗೆ ಹೈಕೋರ್ಟ್‌ ನಕಾರ

ಮಹಿಳೆಯರ ಹಿತದೃಷ್ಟಿಯಿಂದ ದೇಶದ ಬೇರಾವುದೇ ರಾಜ್ಯದಲ್ಲಿ ಜಾರಿಗೊಳಿಸದ ಪ್ರಗತಿಪರ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. 72 ಆಕ್ಷೇಪಣೆಗಳು ಬಂದಿದ್ದು, ಎಲ್ಲವನ್ನೂ ಆಲಿಸಲಾಗಿದೆ. ಸಂವಿಧಾನದ 42ನೇ ವಿಧಿಯಡಿ ನೀತಿ ರೂಪಿಸಲು ಅವಕಾಶವಿದೆ ಎಂದ ಎಜಿ.
Menstrual Leave
Menstrual Leave
Published on

ರಾಜ್ಯದ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ನಿರ್ಧಾರ ಪ್ರಗತಿಪರ ಕ್ರಮವಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಬಲವಾಗಿ ವಾದಿಸಿತು. ಇದನ್ನು ಆಲಿಸಿದ ಪೀಠವು ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ.

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡುವಂತೆ ಕೋರಿದ್ದ ಬೆಂಗಳೂರು ಹೋಟೆಲುಗಳ ಸಂಘ ಮತ್ತು ದಿ ಮ್ಯಾನೇಜ್‌ಮೆಂಟ್‌ ಆಫ್‌ ಅವಿರತ ಎಎಫ್‌ಎಲ್‌ ಕನೆಕ್ಟಿವಿಟಿ ಸಿಸ್ಟಮ್ಸ್‌ ಲಿಮಿಟೆಡ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮರ್ತಿ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ತಿರಸ್ಕರಿಸಿತು. ಸಾರ್ವಜನಿಕ ದೃಷ್ಟಿಯಿಂದ ಅತ್ಯಂತ ಮಹತ್ವದ ಈ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ ಎಂದಿತು.

Justice Jyoti Mulimani
Justice Jyoti Mulimani

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಮಹಿಳೆಯರ ಹಿತದೃಷ್ಟಿಯಿಂದ ದೇಶದ ಬೇರಾವುದೇ ರಾಜ್ಯದಲ್ಲಿ ಜಾರಿಗೊಳಿಸದ ಪ್ರಗತಿಪರ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. 72 ಆಕ್ಷೇಪಣೆಗಳು ಬಂದಿದ್ದು, ಎಲ್ಲವನ್ನೂ ಆಲಿಸಲಾಗಿದೆ. ಸಂವಿಧಾನದ 42ನೇ ವಿಧಿ ಅಡಿಯಲ್ಲಿ ಕೆಲಸದ ಸ್ಥಳದಲ್ಲಿ ನ್ಯಾಯಯುತ ಮತ್ತು ಮಾನವೀಯ ಸ್ಥಿತಿ ಮತ್ತು ಮಾತೃತ್ವದ ಪರಿಹಾರಕ್ಕಾಗಿ ಸರ್ಕಾರ ಆದೇಶಿಸುವುದಕ್ಕೆ ಅವಕಾಶವಿದೆ. 15(3)ನೇ ವಿಧಿ ಪ್ರಕಾರ ರಾಜ್ಯ ಸರ್ಕಾರಗಳಿಗೆ ಈ ರೀತಿಯ ಜನಪರ ಆದೇಶಗಳನ್ನು ಮಾಡುವುದಕ್ಕೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ ಎಂದು. ಕಾನೂನು ಆಯೋಗದ ಶಿಫಾರಸ್ಸುಗಳು ಸರ್ಕಾರದ ನೀತಿಯ ಪರವಾಗಿದೆ" ಎಂದರು.

ಆಗ ಪೀಠವು “ಸರ್ಕಾರದ ಅಧಿಸೂಚನೆಯು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸಲಿದೆಯೇ?” ಎಂದಿತು. ಇದಕ್ಕೆ ಎಜಿ ಅವರು ಹೌದು ಎಂದರು.

ಇದನ್ನು ಆಲಿಸಿದ ಪೀಠವು “ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದ್ದು, ಜನವರಿಯಲ್ಲಿ ನಡೆಸಲಾಗುವುದು” ಎಂದರು.

ಅದಕ್ಕೆ ಅರ್ಜಿದಾರರ ಪರ ವಕೀಲ ಬಿ ಕೆ ಪ್ರಶಾಂತ್‌ ಅವರು “ಅಲ್ಲಿಯವರೆಗೆ ಬಲವಂತದ ಕ್ರಮಕೈಗೊಳ್ಳಬಾರದು” ಎಂದು ಆದೇಶಿಸಬೇಕು ಎಂದರು.

ಇದಕ್ಕೆ ಪೀಠವು “ಏನೂ ಆಗುವುದಿಲ್ಲ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಮಹತ್ವ ಪೂರ್ಣ ಪ್ರಕರಣವಾಗಿದ್ದು, ಮೊದಲ ಬಾರಿಗೆ ಪರಿಗಣಿಸಲಾಗದು. ವಿಚಾರಣೆಗೆ ದಿನ ನಿಗದಿಪಡಿಸಲಾಗುವುದು” ಎಂದರು.

ಇದಕ್ಕೆ ಪ್ರಶಾಂತ್‌ ಅವರು “ಋತುಚಕ್ರ ರಜೆ ನೀತಿಯನ್ನು ಜಾರಿಗೊಳಿಸುತ್ತಿರುವುದಕ್ಕೆ ಆಕ್ಷೇಪವಿದೆ. ಈಗಾಗಲೇ ಹಲವು ಕಾನೂನುಗಳಿದ್ದು, ಅವುಗಳಿಗೆ ಸರ್ಕಾರ ತಿದ್ದುಪಡಿ ಮಾಡಬಹುದು. ಕಾರ್ಯಕಾರಿ ಆದೇಶದ ಮೂಲಕ ಶಾಸನಬದ್ಧ ರೀತಿಯನ್ನು ಮೀರಬಹುದೇ?” ಎಂದರು.

ಎಐಸಿಸಿಟಿಯು ಪರ ವಕೀಲ ಕ್ಲಿಫ್ಟನ್‌ ರೊಜಾರಿಯ ಅವರು ಮಧ್ಯಪ್ರವೇಶ ಕೋರಿಕೆ ಸಲ್ಲಿಸಲಾಗಿದೆ ಎಂದರು.

ಇದನ್ನು ಆಲಿಸಿದ ಪೀಠವು ಅರ್ಜಿದಾರರ ಪರ ವಕೀಲರಿಗೆ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಅಲ್ಲದೇ, ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ದಾಖಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.

ನ್ಯಾಯಾಲಯದಲ್ಲಿ ನಿನ್ನೆ ಕೆಲವು ನಾಟಕೀಯ ಬೆಳವಣಿಗೆ ನಡೆದಿದ್ದವು, ಮೊದಲಿಗೆ ಸರ್ಕಾರದ ಅಧಿಸೂಚನೆಗೆ ಸರ್ಕಾರ ತಡೆ ನೀಡಿತ್ತು. ಆನಂತರ ಎಜಿ ಭೋಜನಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಎಜಿ ಆಕ್ಷೇಪಿಸಿದ್ದರಿಂದ ತಡೆ ಹಿಂಪಡೆದು, ಇಂದಿಗೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

Kannada Bar & Bench
kannada.barandbench.com