ಕಲ್ಯಾಣ ಮಂಟಪದ ಮಾಲೀಕರು ವಧು-ವರರ ವಯಸ್ಸಿನ ಕುರಿತು ದಾಖಲೆ ಪರಿಶೀಲಿಸುವ ಕಠಿಣ ನಿಯಮ ಇಲ್ಲ: ಹೈಕೋರ್ಟ್‌

ವಿಜಯಪುರದ ಉದ್ಯಮಿ ಅಬ್ದುಲ್‌ ಹಮೀದ್‌ ವಿರುದ್ಧದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆಗೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿದ ಆರೋಪದಡಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿದ ನ್ಯಾಯಾಲಯ.
Child Marriage
Child Marriage
Published on

ಮದುವೆ ಕಾರ್ಯಗಳಿಗೆ ಕಲ್ಯಾಣ ಮಂಟಪ ಬಾಡಿಗೆ ನೀಡುವ ಸಂದರ್ಭದಲ್ಲಿ ಮಂಟಪದ ಮಾಲೀಕರು ವಧು-ವರರ ವಯಸ್ಸಿನ ಕುರಿತ ದಾಖಲೆಗಳನ್ನು ಪರಿಶೀಲಿಸಬೇಕು ಎಂಬ ಕಠಿಣ ನಿಯಮಗಳು ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಹೇಳಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆಗೆ ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿದ ಆರೋಪದಡಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ವಿಜಯಪುರದ ಉದ್ಯಮಿ ಅಬ್ದುಲ್‌ ಹಮೀದ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿನ ಸಾಕ್ಷ್ಯಾಧಾರ ಪರಿಶೀಲಿಸಿದರೆ ಅರ್ಜಿದಾರರ ವಿರುದ್ಧ ಯಾವುದೇ ಆರೋಪಗಳಿಲ್ಲ. ಅರ್ಜಿದಾರರು ಹುಸೇನ್‌ ಪ್ಯಾಲೇಸ್‌ ಕಲ್ಯಾಣ ಮಂಟಪದ ಮಾಲೀಕರಾಗಿದ್ದಾರೆ. ಮಂಟಪದಲ್ಲಿ ಮದುವೆ ಆಗುವವರ ವಯಸ್ಸನ್ನು ತಿಳಿದುಕೊಳ್ಳಲೇಬೇಕು ಎಂಬ ಕಠಿಣ ನಿಯಮಗಳೆಲ್ಲೂ ಇಲ್ಲ. ಅಲ್ಲದೆ, ಅರ್ಜಿದಾರರು ಇತರೆ ಆರೋಪಿಗಳೊಂದಿಗೆ ಸೇರಿ ಬಾಲ್ಯ ವಿವಾಹ ನಡೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗದು ಎಂಬ ಅಭಿಪ್ರಾಯದೊಂದಿಗೆ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಧಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ವರ್ಷ 8 ತಿಂಗಳ ಬಾಲಕಿ 2024ರ ಮೇ 27ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಿಜಯಪುರದ ಗೋಲಗುಂಬಜ್‌ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.

ಪೊಲೀಸರು ಬಾಲಕಿಯ ಮದುವೆ ನಡೆದ ಸಭಾಂಗಣದ ಮಾಲೀಕರನ್ನು ಆರನೇ ಆರೋಪಿಯನ್ನಾಗಿಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಆಪಾದನೆಯನ್ನು ವಿಚಾರಣೆಗೆ ಪರಿಗಣಿಸಿ‌ತ್ತು.

Kannada Bar & Bench
kannada.barandbench.com