

ವಾಣಿಜ್ಯಿಕ ದುರ್ಬಳಕೆ ನಿರೂಪಿಸುವ ಪ್ರಾಥಮಿಕ ಸಾಕ್ಷ್ಯ ಇಲ್ಲದೆ ಇರುವಾಗ, ಮಧ್ಯಂತರ ಹಂತದಲ್ಲಿ ಇಡಿಯಾಗಿ ಪ್ರತಿಬಂಧಕಾದೇಶ ಪಡೆಯಲು ಖ್ಯಾತನಾಮರು ತಮ್ಮ ವ್ಯಕ್ತಿತ್ವ ಹಕ್ಕು ಚಲಾಯಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಟಿ ರಂಗರಾಜ್ ಮತ್ತು ಜಾಯ್ ಕ್ರಿಜಿಲ್ಡಾ ನಡುವಣ ಪ್ರಕರಣ] .
ಅಂತೆಯೇ ತಮ್ಮ ಸಂಬಂಧದ ಕುರಿತು ಪೋಸ್ಟ್, ಸಂದರ್ಶನ, ಛಾಯಾಚಿತ್ರ, ವಿಡಿಯೋ ಪ್ರಕಟಿಸದಂತೆ ಹಾಗೂ ಪ್ರಸಾರ ಮಾಡದಂತೆ ತಡೆ ನೀಡುವಂತೆ ಕೋರಿ ಖ್ಯಾತ ಬಾಣಸಿಗ ಹಾಗೂ ಉದ್ಯಮಿ ಟಿ ರಂಗರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಸೆಂಥಿಲ್‌ಕುಮಾರ್ ವಜಾಗೊಳಿಸಿದ್ದಾರೆ.
ಪ್ರತಿವಾದಿಗಳು ವಾಣಿಜ್ಯಾತ್ಮಕ ಲಾಭ ಪಡೆದಿದ್ದಾರೆ ಎಂಬ ನಿರ್ದಿಷ್ಟ ಆರೋಪ ಇಲ್ಲದಿರುವಾಗ ಕೆಲವು ದಾಖಲೆಗಳನ್ನು ಸಲ್ಲಿಸಿದ ಮಾತ್ರಕ್ಕೆ ದಾವೆದಾರರ ಹಕ್ಕುಗಳು ಉಲ್ಲಂಘನೆಯಾಗಿವೆ ಎಂದು ಮೇಲ್ನೋಟಕ್ಕೆ ನಾಯಾಲಯ ನಿರ್ಧರಿಸಲಾಗದು. ದಾವೆದಾರರು ಮಾಡಿರುವ ವಿನಂತಿ ಸಂವಿಧಾನದ 19(1)(a) ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಪೀಠ ವಿವರಿಸಿದೆ.
ವಸ್ತ್ರ ವಿನ್ಯಾಸಕರಾದ ಜಾಯ್ ಕ್ರಿಜಿಲ್ಡಾ ಅವರ ಹೇಳಿಕೆಗಳಿಂದಾಗಿ ತಮ್ಮ ವ್ಯಕ್ತಿತ್ವ ಹಕ್ಕು ವರ್ಚಸ್ಸಿಗೆ ಹಾನಿಯಾಗಿದೆ ಎಂದು ಆರೋಪಿಸಿ ʼಮಾಧಂಪಟ್ಟಿ ಪಾಕಶಾಲಾʼ ಹೋಟೆಲ್ ನಡೆಸುವ ಮಾಧಂಪಟ್ಟಿ ತಂಗವೇಲು ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ರಂಗರಾಜ್ ಅವರು ಮೊಕದ್ದಮೆ ಹೂಡಿದ್ದರು.
ಕ್ರಿಜಿಲ್ಡಾ ಅವರ ಹೇಳಿಕೆಗಳು ತಮ್ಮ ವೈವಾಹಿಕ ಸಂಬಂಧವನ್ನು ತಪ್ಪಾಗಿ ಚಿತ್ರಿಸಿದ್ದು ತಮ್ಮ ಖಾಸಗಿ ಮತ್ತು ವೃತ್ತಿಪರ ಬದುಕನ್ನು ಅವಹೇಳನ ಮಾಡಿವೆ ಎಂದು ರಂಗರಾಜ್ ದೂರಿದ್ದರು. ಈ ಹೇಳಿಕೆಗಳು "ಸರಿಪಡಿಸಲಾಗದ ವಾಣಿಜ್ಯ ನಷ್ಟ"ಕ್ಕೆ ಕಾರಣವಾಗಿವೆ ಮತ್ತು ತಮ್ಮ ಬ್ರ್ಯಾಂಡ್‌ಗೆ ಸಂಬಂಧಿಸಿದ ಸದ್ಭಾವನೆಗೆ ಧಕ್ಕೆ ತಂದಿವೆ. ಹೀಗಾಗಿ ಶಾಶ್ವತ ಪ್ರತಿಬಂಧಕಾದೇಶ ಹೊರಡಿಸಬೇಕು ಹಾಗೂ ಸಾಮಾಜಿಕ ಮಾಧ್ಯಮದಲ್ಲಿರುವ ವಸ್ತುವಿಷಯವನ್ನು ತೆಗೆದುಹಾಕಬೇಕು ಎಂದು ಕೋರಿದ್ದರು.
ಆದರೆ ವಾಕ್ ಸ್ವಾತಂತ್ರ್ಯವು ಸಂವಿಧಾನಾತ್ಮಕವಾಗಿ ರಕ್ಷಿತ ಹಕ್ಕು ಎಂದು ಒತ್ತಿ ಹೇಳಿದ ನ್ಯಾಯಾಲಯ, ವ್ಯಕ್ತಿತ್ವ ಅಥವಾ ಪ್ರಚಾರ ಹಕ್ಕುಗಳು ಮಾನವ ಅಸ್ಮಿತೆಯ ವಾಣಿಜ್ಯ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಕೇವಲ ವೈಯಕ್ತಿಕ ವಿಷಯಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತವೆ ಎಂಬ ಕಾರಣಕ್ಕೆ ಮಾತ್ರ ವ್ಯಕ್ತಿತ್ವ ಹಕ್ಕುಗಳು ಉಲ್ಲಂಘನೆಯಾಗುವುದಿಲ್ಲ ಎಂದು ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿನ ಫೋಟೋಗಳು, ವಿಡಿಯೋಗಳು ಮತ್ತು ಆರೋಪಗಳ ಸತ್ಯಾಸತ್ಯತೆಯು ವಿಚಾರಣೆಯ ವೇಳೆಯೇ ಸಾಕ್ಷ್ಯಗಳ ಆಧಾರದಲ್ಲಿ ನಿರ್ಧಾರವಾಗಬೇಕೆಂದು ಹೇಳಿದ ಅದು ಮಧ್ಯಂತರ ಹಂತದಲ್ಲೇ ಅವುಗಳಿಗೆ ತಡೆ ನೀಡಲು ನಿರಾಕರಿಸಿತು
ರಂಗರಾಜ್ ಸ್ವತಃ ಸಂಬಂಧ ಇರುವುದನ್ನು ಒಪ್ಪಿಕೊಂಡಿದ್ದು ಕ್ರಿಜಿಲ್ಡಾ ಸಲ್ಲಿಸಿದ ಮೇಲ್ನೋಟದ ಸಾಕ್ಷ್ಯಗಳನ್ನು ಗಮನಿಸಿದಾಗ ಸಮಂಜಸತೆಯ ಸಮತೋಲನ ಕ್ರಿಜಿಲ್ಡಾ ಪರವಾಗಿ ಇದ್ದು, ರಂಗರಾಜ್ ಮೇಲ್ನೋಟಕ್ಕೆ ತಮ್ಮ ಆರೋಪ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
[ಆದೇಶದ ಪ್ರತಿ]