ಇ- ವಾಣಿಜ್ಯ ವ್ಯವಹಾರಗಳ ದೈತ್ಯ ಕಂಪೆನಿ ಅಮೆಜಾನ್ ಹರಿಯಾಣದ ಮಾನೇಸರ್‌ನಲ್ಲಿರುವ ಗೋದಾಮಿನಲ್ಲಿ ಕಾರ್ಮಿಕ ಕಾನೂನು ಉಲ್ಲಂಘಿಸಿದೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಬುಧವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ವರದಿ ನಿಜವೇ ಆಗಿದ್ದರೆ ಅದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೊರಡಿಸಿದ ಮಾರ್ಗಸೂಚಿ ಹಾಗೂ ಕಾನೂನುಗಳನ್ನು ಉಲ್ಲಂಘಿಸಿದ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಆಯೋಗ ತಿಳಿಸಿದೆ.
ಅದರಂತೆ, ಆಯೋಗ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ಒಂದು ವಾರದೊಳಗೆ ಪ್ರಕರಣದ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದೆ.
ಕಾರ್ಮಿಕರ ಪರವಾದ ಕಾನೂನುಗಳು ಮತ್ತು ಸರ್ಕಾರಿ ನೀತಿಗಳ ಹೊರತಾಗಿಯೂ ಈ ಆರೋಪ ಕೇಳಿಬಂದಿರುವುದಕ್ಕೆ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
30 ನಿಮಿಷ ಚಹಾ ವಿರಾಮ ಪಡೆದಿದ್ದ ತನ್ನ ತಂಡ ಆರು ಟ್ರಕ್‌ಗಳಿಂದ 24 ಅಡಿ ಉದ್ದದ ಪ್ಯಾಕೇಜ್‌ಗಳನ್ನು ಇಳಿಸುವವರೆಗೂ ಶೌಚಾಲಯ ಅಥವಾ ನೀರು ಕುಡಿಯಲು ತೆರಳುವುದಿಲ್ಲ ಎಂದು ಪ್ರಮಾಣ ಮಾಡುವಂತೆ 24 ವರ್ಷದ ಕೆಲಸಗಾರನಿಗೆ ಸೂಚಿಸಲಾಗಿತ್ತು.
ಕೆಲಸದ ಸ್ಥಳದಲ್ಲಿ ಗೋದಾಮು ವ್ಯವಸ್ಥೆ ಇಲ್ಲ, ವಿಶ್ರಾಂತಿ ಕೊಠಡಿ ಇಲ್ಲ ಎಂದು ಗೋದಾಮಿನ ಮಹಿಳಾ ಉದ್ಯೋಗಿಯೊಬ್ಬರು ದೂರಿದ್ದರು. ಭಾರತದಲ್ಲಿನ ಕಾರ್ಮಿಕ ಸಂಘಗಳು ಮಾನೇಸರ್ ಮತ್ತು ಸುತ್ತಮುತ್ತಲಿನ ಐದು ಗೋದಾಮುಗಳು ಕಾರ್ಖಾನೆಗಳ ಕಾಯಿದೆ- 1948ನ್ನು ಉಲ್ಲಂಘಿಸಿವೆ ಎಂದು ಆರೋಪಿಸಿದ್ದರು.
ಇದಲ್ಲದೆ, ವಾರಕ್ಕೆ ಐದು ದಿನಗಳ ಕಾಲ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡಿ ತಿಂಗಳಿಗೆ ₹ 10,088 ಗಳಿಸುವ ಕಾರ್ಮಿಕನೊಬ್ಬ 30 ನಿಮಿಷ ಊಟ ಮತ್ತು ಚಹಾ ವಿರಾಮ ತೆಗೆದುಕೊಳ್ಳದೆ ನಿರಂತರವಾಗಿ ಕೆಲಸ ಮಾಡಿದರೂ ಆತ ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಟ್ರಕ್‌ಗಳ ಸರಕು ಇಳಿಸಲು ಸಾಧ್ಯವಾಗದು ಎಂದು ವರದಿ ತಿಳಿಸಿತ್ತು.
ತಾನು ಪ್ರತಿನಿತ್ಯ ಒಂಬತ್ತು ಗಂಟೆಗಳ ಕಾಲ ನಿಂತೇ ಇದ್ದು ಕರ್ತವ್ಯದ ಸಮಯದಲ್ಲಿ ಗಂಟೆಗೆ 60 ಸಣ್ಣ ಉತ್ಪನ್ನಗಳನ್ನು ಅಥವಾ 40 ಮಧ್ಯಮ ಗಾತ್ರದ ಉತ್ಪನ್ನಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಕೆಲಸಗಾರ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಅಮೆಜಾನ್ ಬೇರೆ ದೇಶಗಳಲ್ಲೂ ಇಂತಹ ಆರೋಪ ಎದುರಿಸಿದೆ.