
ಬಹುಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನೀಡಲು ವಿಧಿಸಲಾದ ಷರತ್ತುಗಳನ್ನು ಮಾರ್ಪಡಿಸುವಂತೆ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಶೆಲ್ ಬುಧವಾರ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಶ್ಯೂರಿಟಿ ಒದಗಿಸಬೇಕು ಎಂದು ಈ ಹಿಂದೆ ವಿಧಿಸಲಾಗಿದ್ದ ಜಾಮೀನು ಷರತ್ತಿಗೆ ಮಿಶೆಲ್ ಪರ ವಕೀಲರಾದ ಶ್ರೀರಾಮ್ ಪರಾಕ್ಕಟ್, ವಿಷ್ಣು ಶಂಕರ್ ವಿರೋಧ ವ್ಯಕ್ತಪಡಿಸಿದರು. ಭಾರತದಲ್ಲಿ ಯಾರೂ ತಮ್ಮ ಕಕ್ಷಿದಾರ ಕ್ರಿಶ್ಚಿಯನ್ ಮಿಶೆಲ್ ಪರವಾಗಿ ಜಾಮೀನು ನೀಡಲು ಸಿದ್ಧರಿರುವುದಿಲ್ಲ ಎಂದು ಅವರು ಹೇಳಿದರು. ಇದರೊಂದಿಗೆ ಇ ಡಿ ವಾದವನ್ನೂ ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ತೀರ್ಪು ಕಾಯ್ದಿರಿಸಿದರು.
ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಮಿಶೆಲ್ ಅವರೊಂದಿಗೆ ನ್ಯಾಯಮೂರ್ತಿಗಳು ಸಂವಾದ ನಡೆಸಿದರು. ಆಗ ತಾನು ಜಾಮೀನು ಷರತ್ತು ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿರುವುದನ್ನು ಮಿಶೆಲ್ ಖಚಿತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಅಂದಿನ ಕೇಂದ್ರ ಸರ್ಕಾರ ಅತಿಗಣ್ಯರ ಓಡಾಟಕ್ಕಾಗಿ ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದಂತೆ 42.27 ಯುರೋ ಮಿಲಿಯನ್ ಕಮಿಷನ್/ಲಂಚವನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆ ಹನ್ನೆರಡು ಒಪ್ಪಂದ ಮಾಡಿಕೊಂಡಿದ್ದ ಆರೋಪಕ್ಕೆ ಕ್ರಿಶ್ಚಿಯನ್ ಗುರಿಯಾಗಿದ್ದರು.
ಮಿಶೆಲ್ ಅವರನ್ನು ಡಿಸೆಂಬರ್ 2018 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ನಂತರ ಇ ಡಿ ಬಂಧಿಸಿತು. ಅಂದಿನಿಂದ ಅವರು ಆರು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದಾರೆ. ಈ ವರ್ಷ ಮಾರ್ಚ್ 4 ರಂದು ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತು . ಇದಕ್ಕೂ ಮುನ್ನ ಫೆಬ್ರವರಿ 18 ರಂದು ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಜಾಮೀನು ಮಂಜೂರಾಗಿದ್ದರೂ, ಶ್ಯೂರಿಟಿ ರೀತಿಯ ಜಾಮೀನು ಷರತ್ತುಗಳನ್ನು ಪಾಲಿಸದ ಕಾರಣ ಮಿಶೆಲ್ ನ್ಯಾಯಾಂಗ ಬಂಧನದಲ್ಲಿಯೇ ಉಳಿದಿದ್ದಾರೆ.