ಸಾಮಾಜಿಕ ಕಾರ್ಯಕರ್ತೆ ನೌದೀಪ್‌ ಕೌರ್‌ಗೆ ಜಾಮೀನು ಮಂಜೂರು ಮಾಡಿದ ಪಂಜಾಬ್‌-ಹರಿಯಾಣ ಹೈಕೋರ್ಟ್‌

ಸಾಮಾಜಿಕ ಕಾರ್ಯಕರ್ತೆ ನೌದೀಪ್‌ ಕೌರ್‌ ವಿರುದ್ಧದ ಸುಲಿಗೆ ಆರೋಪವೂ ಸೇರಿದಂತೆ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೆ ಜಾಮೀನು ದೊರೆತಿತ್ತು. ಇಂದು ಮೂರನೇ ಪ್ರಕರಣದಲ್ಲಿ ಕೌರ್‌ಗೆ ಜಾಮೀನು ದೊರೆತಿದ್ದು, ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
Nodeep Kaur, Punjab & Haryana High Court
Nodeep Kaur, Punjab & Haryana High Court
Published on

ರೈತರ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದ ಸಂದರ್ಭದಲ್ಲಿ ಜನವರಿ 12ರಂದು ಬಂಧಿಸಲ್ಪಟ್ಟಿದ್ದ ದಲಿತ ಹೋರಾಟಗಾರ್ತಿ ನೌದೀಪ್‌ ಕೌರ್‌ ಅವರಿಗೆ ಪಂಜಾಬ್‌-ಹರಿಯಾಣ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಕೌರ್‌ ವಿರುದ್ಧ ದಾಖಲಾಗಿದ್ದ ಮೂರನೇ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅವರು ಬಂಧ ಮುಕ್ತವಾಗಲಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ನೌದೀಪ್‌ ಕೌರ್‌ ವಿರುದ್ಧದ ಸುಲಿಗೆ ಆರೋಪವೂ ಸೇರಿದಂತೆ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೆ ಜಾಮೀನು ದೊರೆತಿತ್ತು. ಕೌರ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 307 (ಕೊಲೆ ಯತ್ನ), 353ರ (ಕರ್ತವ್ಯಕ್ಕೆ ಅಡ್ಡಿ), 146 (ದೊಂಬಿ) ಅಡಿ ಮೂರನೇ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲಿ ಉಳಿದಿದ್ದರು.

Also Read
ದಿಶಾ ರವಿ ಪ್ರಕರಣದ ಆದೇಶದಿಂದ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್ ಪಾಠ ಕಲಿಯಬೇಕಿದೆ: ಮಾಜಿ ಅಟಾರ್ನಿ ಜನರಲ್ ರೋಹಟ್ಗಿ

ಕಳೆದ ವಾರ ಕೌರ್‌ ಅವರ ಎಲ್ಲಾ ವೈದ್ಯಕೀಯ ವರದಿಗಳನ್ನು ಪಡೆದುಕೊಂಡಿದ್ದ ನ್ಯಾಯಮೂರ್ತಿ ಅವನೀಶ್‌ ಜಿಂಗ್ಹಾನ್‌ ಅವರು ಇಂದು ಆದೇಶ ಹೊರಡಿಸಿದ್ದಾರೆ. ಕೌರ್‌ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂಬೆಲ್ಲಾ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಕೌರ್‌ ವಿರುದ್ಧ ಮಾಡಲಾಗಿರುವ ಕೊಲೆ ಯತ್ನದ ಆರೋಪ ಸಾಬೀತುಪಡಿಸಲು ಮೇಲ್ನೋಟಕ್ಕೆ ತಕ್ಕ ಸಾಕ್ಷ್ಯಗಳನ್ನು ಸಲ್ಲಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಕೌರ್‌ ಅವರು ಕಾರ್ಮಿಕರಿಗೆ ಕೂಲಿ ಪಾವತಿಸುವಂತೆ ಆಗ್ರಹಿಸಿ ಇತರೆ ಇಪ್ಪತ್ತು ಮಂದಿಯ ಜೊತೆಗೆ ಜನವರಿ 12ರಂದು ಕುಂಡಲಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರ ಜೊತೆಗೆ ವಾಗ್ವಾದ ಜೋರಾಗಿ, ಆನಂತರ ಅವರನ್ನು ಬಂಧಿಸಲಾಗಿತ್ತು. ಕೌರ್‌ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು.

Kannada Bar & Bench
kannada.barandbench.com