ಎವಾನ್ ಪಬ್‌ನಿಂದ ಶಬ್ದ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮಧ್ಯರಾತ್ರಿವರೆಗೂ ಜೋರಾಗಿ ಹಾಡು ಹಾಕಲು ಪಬ್‌ಗೆ ಅವಕಾಶ ಸಿಕ್ಕಿದ್ದಾದರೂ ಹೇಗೆ ಎನ್ನುವುದೇ ರಸಹ್ಯವಾಗಿದೆ. ಈ ಕುರಿತು ಪೊಲೀಸರು, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖ.
Karnataka High Court
Karnataka High Court

ಬೆಂಗಳೂರಿನ ಬಿಟಿಎಂ ಲೇಔಟ್ 2ನೇ ಹಂತದಲ್ಲಿರುವ ಎವಾನ್ ಪಬ್ ಅಂಡ್‌ ಕಿಚನ್‌ನಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮ ಉಲ್ಲಂಘಿಸಿರುವ ಪಬ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಲಲಿತಾ ಶ್ರೀನಿವಾಸನ್ (81 ವರ್ಷ), ಟಿ.ಎಚ್.ಎಂ. ಶೈಲಜಾ (64 ವರ್ಷ) ಸೇರಿ ಐವರು ಹಿರಿಯ ನಾಗರಿಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ನಗರಾಭಿವೃದ್ಧಿ ಇಲಾಖೆ, ನಗರ ಪೊಲೀಸ್ ಆಯುಕ್ತರು, ಮೈಕೋ ಲೇಔಟ್ ಠಾಣೆ ಪೊಲೀಸರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಎವಾನ್ ಪಬ್ ಆ್ಯಂಡ್ ಕಿಚನ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಎವಾನ್‌ ಪಬ್ ಆ್ಯಂಡ್ ಕಿಚನ್‌ನಲ್ಲಿ ರಾತ್ರಿ 1ರಿಂದ 3ಗಂಟೆಯವರೆಗೂ ಜೋರಾಗಿ ಹಾಡುಗಳನ್ನು ಹಾಕುತ್ತ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕಿವಿಗಪ್ಪಳಿಸುವ ಜೋರು ಶಬ್ದದಿಂದ ತಲೆ ನೋವು, ಮೈಗ್ರೇನ್ ಸಮಸ್ಯೆ ಉಂಟಾಗುತ್ತಿದೆ. ಹಿರಿಯ ನಾಗರಿಕರು, ಮನೆಗಳಿಂದ ಕೆಲಸ ಮಾಡುತ್ತಿರುವವರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದೆ. ಸ್ಥಳೀಯ ನಿವಾಸಿಗಳಂತೂ ರಾತ್ರಿ ಹೊತ್ತು ಶಾಂತಿಯಿಂದ ನಿದ್ರಿಸುವುದಕ್ಕೂ ಅವಕಾಶ ಇಲ್ಲದಂತಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.

ಮಧ್ಯರಾತ್ರಿವರೆಗೂ ಜೋರಾಗಿ ಹಾಡುಗಳನ್ನು ಹಾಕಲು ಪಬ್‌ಗೆ ಅವಕಾಶ ಸಿಕ್ಕಿದ್ದಾದರೂ ಹೇಗೆ ಎನ್ನುವುದೇ ರಸಹ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರು, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಸೇರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಪಬ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಹಾಗೂ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com