ಹೊಸಯುಗದ ಬೈಕ್‌ಗಳು, ಬುಲೆಟ್‌ಗಳಿಂದ ಶಬ್ದ ಮಾಲಿನ್ಯ: ಅಲಾಹಾಬಾದ್ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆ

ಶಬ್ದ ಮಾಲಿನ್ಯಕ್ಕೆ ಕಾರಣವಾಗುವಂತಹ ವಾಹನಗಳ ನಿಗ್ರಹಕ್ಕೆ ಆದೇಶಿಸಿದ ನ್ಯಾಯಾಲಯ ಆ ಬಗೆಯ ವಾಹನಗಳ ಶಬ್ದ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತದೆ ಎಂದಿತು.
ಹೊಸಯುಗದ ಬೈಕ್‌ಗಳು, ಬುಲೆಟ್‌ಗಳಿಂದ ಶಬ್ದ ಮಾಲಿನ್ಯ: ಅಲಾಹಾಬಾದ್ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆ

ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌, ಹೊಸಯುಗದ ದ್ವಿಚಕ್ರ ವಾಹನಗಳು ಹಾಗೂ ಇತರೆ ಮಾರ್ಪಡಿಸಿದ ಬೈಕ್‌ಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ಬಗ್ಗೆ ಅಲಾಹಾಬಾದ್‌ ಹೈಕೋರ್ಟ್‌ ಮಂಗಳವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ಇಂತಹ ಬೈಕುಗಳು ಅಪಾರ ಶಬ್ದ ಮಾಲಿನ್ಯವನ್ನು ಉಂಟುಮಾಡುವುದರ ಜೊತೆಗೆ ನಾಗರಿಕರಿಗೆ ತೊಂದರೆ ಉಂಟುಮಾಡುವುದು ಗಂಭೀರ ವಿಚಾರ ಎಂದು ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಅಭಿಪ್ರಾಯಪಟ್ಟರು. "ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಮಾರ್ಪಡಿಸಿದ ಸೈಲೆನ್ಸರ್ ಮೂಲಕ ಮಾಲಿನ್ಯಕ್ಕೆ ಕಾರಣವಾಗುವ ಅಂತಹ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ನ್ಯಾಯಾಲಯ ಮಂಗಳವಾರ ಆದೇಶಿಸಿತು.

ಆ ಬಗೆಯ ವಾಹನಗಳ ಶಬ್ದ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ತಮ್ಮ ಕುಟುಂಬದೊಂದಿಗೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಮನೆಯೂ ಆತನ ವಲಯವಾಗಿದ್ದು ಮನುಷ್ಯನ ದೈಹಿಕ ಖುಷಿ ಮತ್ತು ಆರೋಗ್ಯ ಹಾಗೂ ಆತನ ಖಾಸಗಿತನದಲ್ಲಿ ಮಾಡುವ ಹಸ್ತಕ್ಷೇಪಕ್ಕಿಂತ ದೊಡ್ಡ ಹಾನಿ ಇನ್ನೊಂದಿಲ್ಲ. ಈ ಪ್ರಕರಣದಲ್ಲಿ ವ್ಯಕ್ತಿಗಳ ಖಾಸಗಿತನಕ್ಕೆ ವಾಹನಗಳ ಶಬ್ದದಿಂದ ಹಸ್ತಕ್ಷೇಪ ಉಂಟಾಗುತ್ತಿದೆ ಎಂದು ಹೈಕೋರ್ಟ್‌ ತಿಳಿಸಿತು.

ಸೌಂಡ್‌ ಮಫ್ಲರ್‌ಗಳು ಅಥವಾ ಸೈಲೆನ್ಸರ್‌ಗಳನ್ನು ವಾಹನ ಸವಾರರು ಎಷ್ಟು ಮಾರ್ಪಡಿಸಿದ್ದಾರೆಂದರೆ, ವಾಹನದ ಸದ್ದು ನೂರಾರು ಮೀಟರ್ ದೂರಕ್ಕೆ ಕೇಳುತ್ತದೆ. ಇದರಿಂದಾಗಿ ವಯಸ್ಸಾದವರು, ದುರ್ಬಲರು, ಚಿಕ್ಕ ಮಕ್ಕಳು ಹಾಗೂ ಮೌನ ಅಗತ್ಯವಿರುವ ಇತರ ವ್ಯಕ್ತಿಗಳಿಗೆ ಭಾರಿ ತೊಂದರೆ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

Also Read
ಶಬ್ದ ಮಾಲಿನ್ಯ: ಒಂದೇ ಧರ್ಮವನ್ನು ಗುರಿಯಾಗಿಸಿದ್ದರೆ ಅದು ಸದುದ್ದೇಶದ ಕೊರತೆ ತೋರಿಸುತ್ತದೆ ಎಂದ ಕರ್ನಾಟಕ ಹೈಕೋರ್ಟ್

ಶಬ್ದಮಾಲಿನ್ಯದ ಸಮಸ್ಯೆ ಹೈಡ್ರಾದ (ಹಲವು ತಲೆಗಳ್ಳುಳ್ಳ ಜಲಚರ) ಕತೆಯಂತಿದೆ. ಯಾರಾದರೂ ಹೈಡ್ರಾದ ತಲೆ ಕತ್ತರಿಸಿದರೆ ಆ ಗಾಯದಿಂದಲೇ ಇನ್ನೂ ಎರಡು ತಲೆಗಳು ಹುಟ್ಟುತ್ತವೆ ಎಂದು ಬೇಸರ ವ್ಯಕ್ತಪಡಿಸಿತು.

ಕೇಂದ್ರೀಯ ಮೋಟಾರು ವಾಹನ ನಿಯಮಾವಳಿ 1989 ಮತ್ತು 1988ರ ಮೋಟಾರು ವಾಹನ ಕಾಯಿದೆಯಡಿ ಸೈಲೆನ್ಸರ್‌ಗಳ ಬಗ್ಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ನ್ಯಾಯಾಲಯ ಪ್ರಸ್ತಾಪಿಸಿತು. ಪ್ರಕರಣವನ್ನು ಆಗಸ್ಟ್ 10ಕ್ಕೆ ಮುಂದೂಡಲಾಗಿದೆ.

ಈ ಮಧ್ಯೆ ಮಂಗಳವಾರದ ಆದೇಶದ ಪ್ರತಿಯನ್ನು ಉತ್ತರಪ್ರದೇಶದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ರವಾನಿಸುವಂತೆ ನ್ಯಾಯಾಲಯ ಸೂಚಿಸಿತು. ಸಾರಿಗೆ, ಗೃಹ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌, ಸಂಚಾರ ಪೊಲೀಸ್‌ ಇಲಾಖೆಗಳನ್ನು ಪ್ರಕರಣದಲ್ಲಿ ಪಕ್ಷಕಕಾರರನ್ನಾಗಿ ಮಾಡಿಕೊಳ್ಳಲಾಗಿದೆ. ಮುಂದಿನ ವಿಚಾರಣೆಯ ಹೊತ್ತಿಗೆ ಮಾರ್ಪಡಿಸಿದ ಸೈಲೆನ್ಸರ್‌ಗಳ ಮೂಲಕ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಪ್ರತಿವಾದಿಗಳಿಗೆ ಸೂಚಿಸಲಾಗಿದೆ.

Related Stories

No stories found.