ಪರಿಷತ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠದ ಮಣೆ

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಪ್ರಾಣೇಶ್ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಣೇಶ್ ಅವರ ಸದಸ್ಯತ್ವಕ್ಕೆ ಯಾವುದೇ ಅಡ್ಡಿಯಿಲ್ಲ.
Karnataka HC and election
Karnataka HC and election

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು 2022ರ ನವೆಂಬರ್‌ 3ರಂದು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಗುರುವಾರ ವಿಭಾಗೀಯ ಪೀಠ ವಜಾಗೊಳಿಸಿದೆ.

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎಂ ಕೆ ಪ್ರಾಣೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿತು.

ಏಕಸದಸ್ಯ ಪೀಠದ ಆದೇಶದಿಂದ ಎಂ ಕೆ ಪ್ರಾಣೇಶ್ ಅವರಿಗೆ ಹಿನ್ನಡೆ ಉಂಟಾಗಿತ್ತು. ಆದ್ದರಿಂದ, ಅವರು ಮೇಲ್ಮನವಿ ಸಲ್ಲಿಸಿದ್ದರು. ಈಗ ಮೇಲ್ಮನವಿ ವಜಾಗೊಂಡಿದೆ. ಆದರೆ, ಪ್ರಾಣೇಶ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಯು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಣೇಶ್ ಅವರ ಸದಸ್ಯತ್ವಕ್ಕೆ ಯಾವುದೇ ಅಡ್ಡಿಯಿಲ್ಲ.

ರಾಜ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 20 ಸ್ಥಾನಗಳಿಗೆ 2021ರ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿಯ ಎಂ ಕೆ ಪ್ರಾಣೇಶ್ ಅವರ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸಂವಿಧಾನದ 243(6)ನೇ ವಿಧಿ ಮತ್ತು ಕೆಎಂಸಿ ಕಾಯಿದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ, ಅವರು ಸಲಹೆ-ಸೂಚನೆಗಳನ್ನು ಮಾತ್ರ ನೀಡಬಹುದು. ಹೀಗಾಗಿ, ವಿಧಾನ ಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು 2022ರ ನವೆಂಬರ್‌ 3ರಂದು ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಪ್ರಾಣೇಶ್ ಮೇಲ್ಮನವಿ ಸಲ್ಲಿಸಿದ್ದರು. ನಾಮನಿರ್ದೇಶಿತರ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದಾಕ್ಷಣ ವಿಧಾನಪರಿಷತ್ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲ ಎಂದು ಹೇಳಲಾಗದು. ಸ್ಥಳೀಯ ಸಂಸ್ಥೆಗಳ ಸಭೆ ಬೇರೆ ಮತ್ತು ವಿಧಾನ ಪರಿಷತ್ ಚುನಾವಣೆಯೇ ಬೇರೆ. ನಾಮನಿರ್ದೇಶಿತರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲವೆಂದು ಎಲ್ಲೂ ನಿರ್ಬಂಧ ಹೇರಿಲ್ಲ ಎಂದು ಪ್ರಾಣೇಶ್ ಪರ ವಕೀಲರ ವಾದವಾಗಿತ್ತು.

ಪ್ರಕರಣದ ಹಿನ್ನೆಲೆ: ಕೇಂದ್ರ ಚುನಾವಣಾ ಆಯೋಗ 2021ರ ನವೆಂಬರ್‌ 9ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು ಆ ಚುನಾವಣೆಯಲ್ಲಿ ಎಂ ಕೆ ಪ್ರಾಣೇಶ್ 1,182 ಮತಗಳನ್ನು ಮತ್ತು ಗಾಯಿತ್ರಿ ಅವರು 1,176 ಮತಗಳನ್ನು ಪಡೆದಿದ್ದರು. ಎಂ ಕೆ ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

Also Read
ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್‌ ಮಹತ್ವದ ಆದೇಶ

ಚುನಾವಣಾ ಫಲಿತಾಂಶ ಪ್ರಶ್ನಿಸಿ ಗಾಯಿತ್ರಿ ಶಾಂತೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೂಡಿಗೆರೆ, ಎನ್ ಆರ್ ಪುರ, ಶೃಂಗೇರಿ ಮತ್ತು ಕೊಪ್ಪ  ಸ್ಥಳೀಯ ಸಂಸ್ಥೆಗಳ  12 ನಾಮನಿರ್ದೇಶಿತ ಸದಸ್ಯರಿಗೆ ಕಾನೂನು ಬಾಹಿರವಾಗಿ ಮತದಾನದ ಹಕ್ಕು ನೀಡಿರುವುದರಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ, ಸಂವಿಧಾನದ ನಿಯಮಗಳಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ತಮ್ಮ ಪ್ರತಿಸ್ಪರ್ಧಿಯ ಆಯ್ಕೆ ಅಕ್ರಮ ಹಾಗೂ ಕಾನೂನು ಬಾಹಿರ. ಹೀಗಾಗಿ, ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಘೋಷಿಸಬೇಕು ಎಂದು ಅವರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com