ಲಿವ್-ಇನ್ ಜೋಡಿಯಲ್ಲಿ ಒಬ್ಬರಿಗೆ ಮದುವೆಯ ವಯಸ್ಸಾಗಿರದಿದ್ದರೂ ಜೀವನ, ಸ್ವಾತಂತ್ರ್ಯ ರಕ್ಷಿಸಬೇಕು: ಪಂಜಾಬ್ ಹೈಕೋರ್ಟ್‌

ಪೋಷಕರು ತಮ್ಮ ಷರತ್ತುಗಳಿಗೆ ಅನುಗುಣವಾಗಿ ವಯಸ್ಕ ಮಕ್ಕಳು ಬದುಕಬೇಕೆಂದು ಒತ್ತಾಯಿಸಲು ಸಾಧ್ಯ ಇಲ್ಲ. ಪ್ರತಿ ವಯಸ್ಕ ವ್ಯಕ್ತಿಯೂ ತನಗೆ ಸರಿ ಎನಿಸಿದಂತೆ ಜೀವನ ನಡೆಸುವ ಹಕ್ಕು ಪಡೆದಿರುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಲಿವ್-ಇನ್ ಜೋಡಿಯಲ್ಲಿ ಒಬ್ಬರಿಗೆ ಮದುವೆಯ ವಯಸ್ಸಾಗಿರದಿದ್ದರೂ ಜೀವನ, ಸ್ವಾತಂತ್ರ್ಯ ರಕ್ಷಿಸಬೇಕು: ಪಂಜಾಬ್ ಹೈಕೋರ್ಟ್‌

ಸಂಗಾತಿಗಳಲ್ಲಿ ಒಬ್ಬರಿಗೆ ಮದುವೆಯ ವಯಸ್ಸಾಗಿರದಿದ್ದರೂ ಕೂಡ ಲಿವ್‌- ಇನ್‌ ಸಂಬಂಧದಲ್ಲಿರುವ ಜೋಡಿಯ ಜೀವನ, ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಒಬ್ಬ ವ್ಯಕ್ತಿ ತನ್ನ ಜೀವನವನ್ನು ಹೇಗೆ ನಡೆಸಬೇಕು ಎಂದು ಸಮಾಜ ನಿರ್ಧರಿಸಲು ಸಾಧ್ಯ ಇಲ್ಲ ಎಂದು ನ್ಯಾಯಮೂರ್ತಿ ಅಲ್ಕಾ ಸರಿನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. (ಪ್ರಿಯಾಪ್ರೀತ್‌ ಕೌರ್‌ ಮತ್ತಿತರರು ಹಾಗೂ ಪಂಜಾಬ್‌ ಸರ್ಕಾರ ಮತ್ತಿತರರ ನಡುವಣ ಪ್ರಕರಣ)

ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಜೀವಿಸುವ ಹಕ್ಕಿನ ಭಾಗವಾಗಿರುವುದರಿಂದ ಲಿವ್‌ ಇನ್‌ ದಂಪತಿಗಳ ಜೀವನ ಮತ್ತು ಸ್ವಾತಂತ್ರ್ಯ ರಕ್ಷಿಸಬೇಕಿದೆ. ಪ್ರಕರಣದ ಎರಡನೇ ಅರ್ಜಿದಾರರಿಗೆ ಮದುವೆಯ ವಯಸ್ಸಾಗಿಲ್ಲ ಎಂಬ ಕಾರಣಕ್ಕೆ ಸಂವಿಧಾನದ 21 ನೇ ವಿಧಿಯಡಿ ದೊರೆತಿರುವ ಮೂಲಭೂತಹಕ್ಕುಗಳನ್ನು ಅವರಿಗೆ ನಿರಾಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಲಿವ್‌ ಇನ್‌ ಸಂಬಂಧದ ಕಾರಣಕ್ಕಾಗಿ ಹುಡುಗಿಯ ಕುಟುಂಬದಿಂದ ಕಿರುಕುಳ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಯುವಜೋಡಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಇಬ್ಬರೂ ಪರಸ್ಪರ ಮದುವೆಯಾಗಲು ಉದ್ದೇಶಿಸಿದ್ದರು. ಆದರೆ ಜೋಡಿಯಲ್ಲಿ ಒಬ್ಬ ವ್ಯಕ್ತಿಗೆ ಇನ್ನೂ ವಿವಾಹವಾಗುವ ವಯಸ್ಸು ಆಗಿರದ ಕಾರಣ ಲಿವ್‌ ಇನ್‌ ಸಂಬಂಧದಲ್ಲಿ ಇರಲು ನಿರ್ಧರಿಸಿದ್ದರು ಹಾಗೂ ಇಬ್ಬರೂ ವಯಸ್ಕರಾಗಿದ್ದರು.

ಇದೇ ವೇಳೆ ನ್ಯಾಯಾಲಯ "ಪೋಷಕರು ತಮ್ಮ ಷರತ್ತುಗಳಿಗೆ ಅನುಗುಣವಾಗಿ ವಯಸ್ಕ ಮಕ್ಕಳು ಬದುಕಬೇಕೆಂದು ಒತ್ತಾಯಿಸಲು ಸಾಧ್ಯ ಇಲ್ಲ. ಪ್ರತಿ ವಯಸ್ಕ ವ್ಯಕ್ತಿಯೂ ತನಗೆ ಸರಿ ಎನಿಸಿದಂತೆ ಜೀವನ ನಡೆಸುವ ಹಕ್ಕು ಪಡೆದಿರುತ್ತಾರೆ," ಎಂದು ಅಭಿಪ್ರಾಯಪಟ್ಟಿದೆ. ಆದರೆ ಇದೇ ವೇಳೆ ನ್ಯಾಯಾಲಯವು ತಾನು ಪ್ರಕರಣದಲ್ಲಿ ಆಕ್ಷೇಪಿಸಲಾಗಿರುವ ಸಂಬಂಧದ ಕುರಿತಂತೆ ಕಾನೂನು ಸಿಂದುತ್ವವನ್ನು ನಿರ್ಣಯಿಸಿಲ್ಲ ಎಂದು ಒತ್ತಿಹೇಳಿದ್ದು, ಅರ್ಜಿದಾರರ ವಿರುದ್ದ ಯಾವುದೇ ಸಿವಿಲ್‌ ಅಥವಾ ಕ್ರಿಮಿನಲ್ ಆರೋಪಗಳನ್ನು ಮಾಡಲಾಗಿದ್ದರೆ/ಬಾಕಿ ಇದ್ದರೆ ಅದರ ವಿಚಾರಣೆಯ ಮೇಲೆ ಈ ಆದೇಶವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

No stories found.
Kannada Bar & Bench
kannada.barandbench.com