ನ್ಯಾಯಾಲಯದ ಆದೇಶ ಉಪೇಕ್ಷೆ: ಅಧಿಕಾರಿಗಳನ್ನು ಜೈಲಿಗಟ್ಟುವ ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್‌

ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಇಷ್ಟು ಲಘುವಾಗಿ ಪರಿಗಣಿಸಿದ್ದಾರೆ ಎಂದರೆ ಏನರ್ಥ? ಇದನ್ನೆಲ್ಲ ನೋಡುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿ ಹೋಗುತ್ತದೆ ಎಂದ ಪೀಠ.
Chief Justice Ritu Raj Awasthi, Justice Sachin Shankar Magdum and  Karnataka HC
Chief Justice Ritu Raj Awasthi, Justice Sachin Shankar Magdum and Karnataka HC

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ನೆಹರೂ ಪಾರ್ಕ್‌ನಲ್ಲಿ ಅಕ್ರಮವಾಗಿ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನೀಡಿದ್ದ ನಿರ್ದೇಶನ ಪಾಲಿಸದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಮಂಗಳವಾರ ಎಚ್ಚರಿಸಿದೆ.

ಉದ್ಯಾನಗಳು ಹಾಗೂ ಆಟದ ಮೈದಾನಗಳ ಅಸಮರ್ಪಕ ನಿರ್ವಹಣೆ ಪ್ರಶ್ನಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಜುಲೈ 19ರಂದು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಶೇಷಾದ್ರಿಪುರದ ನೆಹರೂ ಪಾರ್ಕ್‌ನಲ್ಲಿ ನೆಹರೂ ಕ್ರೀಡಾ ಸಮುಚ್ಚಯದ ಹೆಸರಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಲ್ಲಿಸಿದರು.

ಚಿತ್ರಗಳನ್ನು ಪರಿಶೀಲಿಸಿದ ಪೀಠವು ಅರ್ಜಿದಾರರು ಆರೋಪಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಕೂಡಲೇ ಅಧಿಕಾರಿಯೊಬ್ಬರನ್ನು ಪಾಲಿಕೆ ನಿಯೋಜಿಸಬೇಕು. ಆ ಅಧಿಕಾರಿ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಈ ಹಿಂದೆ ಮೂರ್ನಾಲ್ಕು ಬಾರಿ ಅರ್ಜಿ ವಿಚಾರಣೆಗೆ ಬಂದಾಗಲೂ ವರದಿ ಸಲ್ಲಿಸಲು ಪಾಲಿಕೆ ಕಾಲಾವಕಾಶ ಪಡೆದುಕೊಂಡಿತ್ತು.

ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲರು ಜುಲೈ 19ರ ಆದೇಶದ ಅನುಪಾಲನಾ ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪೀಠವು ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಇಷ್ಟು ಲಘುವಾಗಿ ಪರಿಗಣಿಸಿದ್ದಾರೆ ಎಂದರೆ ಏನರ್ಥ? ಇದನ್ನೆಲ್ಲ ನೋಡುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಒಂದಿಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿ ಹೋಗುತ್ತದೆ. ಬಿಬಿಎಂಪಿ ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳುಹಿಸಬೇಕಾದೀತು ಎಂದು ಕಟುವಾಗಿ ನುಡಿಯಿತು.

ನ್ಯಾಯಾಲಯದ ಘನತೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಉದ್ಯಾನ, ಆಟದ ಮೈದಾನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೊಡ್ಡವರ ವಿರುದ್ಧ ಕ್ರಮ ಜರುಗಿಸುಲು ಪಾಲಿಕೆ ಹಿಂಜರಿಯಬಹುದು. ಆದರೆ, ನ್ಯಾಯಾಲಯಕ್ಕೆ ಅಂಥ ಯಾವುದೇ ಹಿಂಜರಿಕೆ ಇಲ್ಲ. ಕೂಡಲೇ ಕ್ರಮ ಜರುಗಿಸದಿದ್ದರೆ ಅಧಿಕಾರಿಗಳಿಗೆ ತೊಂದರೆ ಖಚಿತ ಎಂದು ಪೀಠವು ಖಡಕ್ ಎಚ್ಚರಿಕೆ ನೀಡಿತು.

ಅನುಪಾಲನಾ ವರದಿ ಸಲ್ಲಿಸಲು ಪಾಲಿಕೆ ಪರ ವಕೀಲರು 10 ದಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅದನ್ನು ಪರಿಗಣಿಸಿದ ಪೀಠವು ಇದೇ ಅಂತಿಮ ಅವಕಾಶವಾಗಿದ್ದು, ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

Also Read
ನ್ಯಾಯಾಲಯ ಆದೇಶಿಸಿದಾಗ ಪೀಠದ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸುತ್ತೋಲೆ: ಹೈಕೋರ್ಟ್‌ ಅಂಥ ಆದೇಶ ಮಾಡಿದ್ದೇಕೆ?

ರಾಜ್ಯದ ಇತರ ಭಾಗಗಳಲ್ಲಿರುವ ಉದ್ಯಾನ ಹಾಗೂ ಮೈದಾನಗಳ ನಿರ್ವಹಣೆ ಹಾಗೂ ಸ್ಥಿತಿಗತಿ ಕುರಿತ ವರದಿಯನ್ನು ಆಯಾ ನಗರ ಪಾಲಿಕೆಗಳಿಂದ ತರಿಸಿಕೊಂಡು, ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು.

ಬೆಂಗಳೂರಿನ ಕೆಲ ನಿವಾಸಿಗಳು ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪತ್ರ ಬರೆದು, ಬಿಬಿಎಂಪಿ ಮತ್ತು ಬಿಡಿಎ ಅಧೀನದ ಉದ್ಯಾನ ಹಾಗೂ ಆಟದ ಮೈದಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದ್ದರು. ಪತ್ರ ಆಧರಿಸಿ ಪಿಐಎಲ್ ಸಲ್ಲಿಸಲಾಗಿದ್ದು, ಕರ್ನಾಟಕ ಉದ್ಯಾನ, ಆಟದ ಮೈದಾನ ಹಾಗೂ ಮುಕ್ತ ಪ್ರದೇಶ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯಿದೆ-1985, ಕರ್ನಾಟಕ ಸರ್ಕಾರಿ ಉದ್ಯಾನ (ಸಂರಕ್ಷಣೆ) ಕಾಯಿದೆ-1975ರ ಅನುಸಾರ ಉದ್ಯಾನ ಮತ್ತು ಆಟದ ಮೈದಾನಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಆದರೆ, ಈ ಜವಾಬ್ದಾರಿಯನ್ನು ಬಿಡಿಎ ಹಾಗೂ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ, ಉದ್ಯಾನಗಳು ಹಾಗೂ ಆಟದ ಮೈದಾನಗಳ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com