ಎನ್‌ಎಲ್‌ಎಸ್‌ಐಯುನಲ್ಲಿ ಕನ್ನಡಿಗರಿಗೆ ಜಾರಿಯಾಗದ ಸ್ಥಳೀಯ ಮೀಸಲಾತಿ ನೀತಿ: ಅಸಮಾಧಾನ ಹೊರಹಾಕಿದ ಕಾನೂನು ಸಚಿವರು

ಶಾಸನಭೆಯಲ್ಲಿ ಅವಿರೋಧವಾಗಿ ಕಾಯಿದೆಯನ್ನು ಜಾರಿಗೊಳಿಸಲಾಗಿದ್ದು, ಈ ಕಾಯಿದೆಯ ನಿಬಂಧನೆಯನ್ನು ಜಾರಿಗೊಳಿಸದಿರುವುದಕ್ಕೆ ಕಾನೂನು ಸಚಿವನಾಗಿ ತನಗೆ ತೀವ್ರ ಬೇಸರವಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
Bengaluru’s NLSIU and Law minister J C Madhuswamy
Bengaluru’s NLSIU and Law minister J C Madhuswamy

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕಳೆದ ಎರಡು ವರ್ಷಗಳಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ನೀತಿಯನ್ನು ಜಾರಿಗೊಳಿಸಿಲ್ಲ ಎಂಬ ವಿಚಾರವನ್ನು ತನ್ನ ಗಮನಕ್ಕೆ ತರಲಾಗಿದೆ ಎಂದು ಈಚೆಗೆ ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಕುಲಪತಿಗೆ ಪತ್ರ ಬರೆದಿರುವ ಕಾನೂನು, ಸಂಸದೀಯ, ಶಾಸನ ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಎನ್‌ಎಲ್‌ಎಸ್‌ಐಯುನಲ್ಲಿ ಕಲಿಯಲು ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಆದರೆ, ಎನ್‌ಎಲ್‌ಎಸ್‌ಐಯು ತಿದ್ದುಪಡಿ ಕಾಯಿದೆ 2020ರ ಸೆಕ್ಷನ್‌ 4ರಲ್ಲಿ ಸ್ಥಳೀಯ ಮೀಸಲಾತಿ ನೀತಿಯ ಕುರಿತು ಉಲ್ಲೇಖಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಎನ್‌ಎಲ್‌ಎಸ್‌ಐಯುನಲ್ಲಿ ಕನ್ನಡಿಗರಿಗೆ ಶೇ. 25ರಷ್ಟು ಮೀಸಲಾತಿ ನೀಡುವುದಕ್ಕೆ ಬದಲಾಗಿ ಮೀಸಲಾತಿಯನ್ನು ವರ್ಗೀಕರಿಸಿ, ಅಖಿಲ ಭಾರತ ರ‍್ಯಾಂಕ್‌ ಅಡಿ ಆಯ್ಕೆಯಾದವನ್ನು ಒಳಗೊಂಡು ಶೇ. 25ರಷ್ಟು ಮೀಸಲಾತಿ ಕಲ್ಪಿಸಲಾಗಿದೆ; ಸಾಮಾನ್ಯ ವಿಭಾಗದಲ್ಲಿ ಬರಬೇಕಾದ ಅರ್ಹ ವಿದ್ಯಾರ್ಥಿಗಳನ್ನು ಎನ್‌ಎಲ್‌ಎಸ್‌ಐಯು ಸ್ಥಳೀಯ ಮೀಸಲು ವಿದ್ಯಾರ್ಥಿಗಳ ವಿಭಾಗಕ್ಕೆ ಸೇರಿಸಲಾಗಿದೆ. ಇದು ಮೀಸಲಾತಿ ಮತ್ತು ಕಾಯಿದೆಯ ಆಶಯಕ್ಕೆ ವಿರುದ್ಧ ನಿಲುವು ಎಂದು ಸಚಿವರು ಆಕ್ಷೇಪಿಸಿದ್ದಾರೆ.

ಅಖಿಲ ಭಾರತ ರ‍್ಯಾಂಕ್‌ ಆಧಾರದಲ್ಲಿ ಸಾಮಾನ್ಯ ಕೋಟಾದಡಿ ಆಯ್ಕೆಯಾಗದವರಿಗೆ ಮೀಸಲಾತಿ ನೀತಿ ಜಾರಿಗೊಳಿಸಲಾಗಿದೆ. ಹತ್ತು ವರ್ಷಗಳ ಕಾಲ ಕರ್ನಾಟಕದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿರುವ ಸ್ಥಳೀಯ ಮೀಸಲಾತಿ ವಿಭಾಗದಲ್ಲಿ ಸಾಮಾನ್ಯ ಕೋಟಾದ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಗದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಶಾಸನಭೆಯಲ್ಲಿ ಅವಿರೋಧವಾಗಿ ಕಾಯಿದೆಯನ್ನು ಜಾರಿಗೊಳಿಸಲಾಗಿದ್ದು, ಈ ಕಾಯಿದೆಯ ನಿಬಂಧನೆಯನ್ನು ಜಾರಿಗೊಳಿಸದಿರುವುದಕ್ಕೆ ಕಾನೂನು ಸಚಿವನಾಗಿ ತನಗೆ ತೀವ್ರ ಬೇಸರವಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

2023-24ನೇ ಸಾಲಿನ ಶೈಕ್ಷಣಿಕ ನೋಂದಣಿ ಈಗಾಗಲೇ ಆರಂಭವಾಗಿದ್ದು, ಅಖಿಲ ಭಾರತ ರ‍್ಯಾಂಕ್‌ ಮೂಲಕ ಅರ್ಹತೆ ಪಡೆದಿರುವ ಕನ್ನಡಿಗರನ್ನು ಶೇ. 25ರಷ್ಟು ಸ್ಥಳೀಯ ಮೀಸಲಾತಿಯಿಂದ ಹೊರಗಿಟ್ಟು, ಉಳಿದ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com