ಕಳೆದ ಐದು ವರ್ಷಗಳಲ್ಲಿ ಒಬ್ಬೇ ಒಬ್ಬರು ಜಿಲ್ಲಾ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿಯಾಗಿಲ್ಲ ಎಂದು ಗುರುವಾರ ಕೇಂದ್ರ ಕಾನೂನು ಸಚಿವಾಲಯವು ಸಂಸತ್‌ಗೆ ತಿಳಿಸಿದೆ.
ಕಾಂಗ್ರೆಸ್ ಶಾಸಕ ಅಮೀ ಯಾಜ್ನಿಕ್ ಅವರ ಪ್ರಶ್ನೆಗೆ ಪ್ರತಿಕ್ರಿಯೆ ಮೂಲಕ ಉತ್ತರಿಸಲಾಗಿದೆ. ಆದರೆ, ಹೈಕೋರ್ಟ್‌ಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಹೈಕೋರ್ಟ್‌ಗೆ ನೇಮಕವಾಗಿರುವ 495 ನ್ಯಾಯಮೂರ್ತಿಗಳ ಪೈಕಿ 256 ಮಂದಿ ಜಿಲ್ಲಾ ನ್ಯಾಯಾಲಯದಿಂದ ಪದೋನ್ನತಿ ಪಡೆದಿದ್ದಾರೆ.
ಅಲಾಹಾಬಾದ್ ಹೈಕೋರ್ಟ್, ಬಾಂಬೆ ಹೈಕೋರ್ಟ್ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳು ಕ್ರಮವಾಗಿ 24, 22 ಮತ್ತು 22 ನ್ಯಾಯಮೂರ್ತಿಗಳನ್ನು ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಪದೋನ್ನತಿ ನೀಡಿವೆ. ತೆಲಂಗಾಣ, ರಾಜಸ್ಥಾನ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಕ್ರಮವಾಗಿ 18, 18 ಮತ್ತು 17 ನ್ಯಾಯಾಧೀಶರನ್ನು ಹೈಕೋರ್ಟ್‌ಗೆ ಪದೋನ್ನತಿ ನೀಡಿವೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಬಡ್ತಿ ಪಡೆದಿರುವ ನ್ಯಾಯಾಧೀಶರ ಸಂಖ್ಯೆ 15 ಆಗಿದೆ.
ವಕೀಲರ ಪರಿಷತ್ ಮತ್ತು ನ್ಯಾಯಾಂಗ ಸೇವೆಯಿಂದ ಕಳೆದ ಐದು ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿರುವವ ವಿವರ ಇಂತಿದೆ:
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಬೆಲಾ ಎಂ ತ್ರಿವೇದಿ ಅವರು 1995ರಲ್ಲಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು. ಆನಂತರ ಅವರು 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯುವುದಕ್ಕೂ ಮುನ್ನ ಗುಜರಾತ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿದ್ದರು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಜೊತೆ ಸಮಾಲೋಚನೆ ನಡೆಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆಯೇ ಎಂದು ಯಾಜ್ನಿಕ್ ಪ್ರಶ್ನಿಸಿದ್ದರು. ಇದಕ್ಕೆ ಕಾನೂನು ಸಚಿವಾಲಯವು ಸಾಂವಿಧಾನಿಕ ನಿಬಂಧನೆಗಳ ಅನ್ವಯ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ನಡೆಯುತ್ತಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಜಾರಿ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಉತ್ತರಿಸಿದೆ.