ಉದ್ಯಮಿ ವಿರುದ್ಧ ಎಲ್‌ಒಸಿ ಕೋರಿದ್ದ ಬ್ಯಾಂಕ್‌ ಮನವಿ ತಿರಸ್ಕರಿಸಿದ ಹೈಕೋರ್ಟ್‌

ಅರ್ಜಿದಾರರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವಂತೆ ವಲಸೆ ಬ್ಯುರೊವನ್ನು ಬ್ಯಾಂಕ್‌ ಕೋರಿದೆ. ಆದರೆ, ಯಾವ ಕಾರಣಕ್ಕಾಗಿ ಎಲ್‌ಓಸಿ ಜಾರಿ ಕೋರಲಾಗಿದೆ ಎಂಬುದನ್ನು ಅನುಮಾನಾಸ್ಪದವಾಗಿ ಕೋರಿಕೆಯಲ್ಲಿ ಮುಚ್ಚಿಡಲಾಗಿದೆ ಎಂದು ವಿವರಿಸಲಾಗಿದೆ.
Justice M Nagaprasanna and Karnataka HC
Justice M Nagaprasanna and Karnataka HC

ಕಂಪೆನಿಯು ಸಾಲ ಮರುಪಾವತಿ ಮಾಡದ್ದಕ್ಕೆ ಸಂಬಂಧಿಸಿದಂತೆ ಅದರ ನಿರ್ದೇಶಕರೊಬ್ಬರ ವಿರುದ್ಧ ವಲಸೆ ಬ್ಯುರೊ ಹೊರಡಿಸಿದ್ದ ಲುಕ್‌ಔಟ್‌ (ಎಲ್‌ಒಸಿ) ನೋಟಿಸ್‌ ಅನ್ನು ಪರಿಗಣಿಸದ ಕರ್ನಾಟಕ ಹೈಕೋರ್ಟ್‌ ಈಚೆಗೆ ಅವರಿಗೆ ಯುಎಇ ಮತ್ತು ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳಲು ಅನುಮತಿಸಿದೆ.

2022ರ ಮಾರ್ಚ್‌ 7ರಂದು ಬ್ಯಾಂಕ್‌ ಆಫ್‌ ಬರೋಡಾ ಪರವಾಗಿ ವಲಸೆ ಬ್ಯುರೊ ಜಾರಿ ಮಾಡಿದ್ದ ಲುಕ್‌ಔಟ್‌ ಸುತ್ತೋಲೆಯನ್ನು ಪ್ರಶ್ನಿಸಿ ಉದ್ಯಮಿ ಹಿಮಾಯತ್‌ ಅಲಿ ಖಾನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ತೀಚೆಗೆ ಇತ್ಯರ್ಥಪಡಿಸಿದೆ.

“ಸೌದಿ ಅರೇಬಿಯಾ ಮತ್ತು ಯುಎಇ ಪ್ರವಾಸ ಮುಗಿಸಿ, ದೇಶಕ್ಕೆ ಮರಳುತ್ತೇನೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುವುದಕ್ಕೆ ಒಳಪಟ್ಟು ಅರ್ಜಿದಾರರ ಪ್ರವಾಸಕ್ಕೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಅರ್ಜಿದಾರರು ಮತ್ತು ಇತರೆ ಕೆಲವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವಂತೆ ವಲಸೆ ಬ್ಯುರೊವನ್ನು ಬ್ಯಾಂಕ್‌ ಕೋರಿದೆ. ಆದರೆ, ಯಾವ ಕಾರಣಕ್ಕಾಗಿ ಎಲ್‌ಓಸಿ ಜಾರಿ ಮಾಡುವಂತೆ ಕೋರಲಾಗಿದೆ ಎಂಬುದನ್ನು ಅನುಮಾನಾಸ್ಪದವಾಗಿ ಕೋರಿಕೆಯಲ್ಲಿ ಮುಚ್ಚಿಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಯಾವುದೇ ಅಪರಾಧದಲ್ಲಿ ಆರೋಪಿಯಲ್ಲ. ಯಾವುದೇ ಸಾಲ ಕೋರಿಕೆಯಲ್ಲಿನ ಸ್ಥಳದಲ್ಲಿ ಸಹಿ ಮಾಡುವ ನಿರ್ದೇಶಕ ಅವರಾಗಿಲ್ಲ. “ತಾನು ಕಾರ್ಯೇತರ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಲು ಸಾಕಾಗುವಷ್ಟು ದಾಖಲೆಗಳನ್ನು ಅರ್ಜಿದಾರರು ಮುಂದಿಟ್ಟಿದ್ದಾರೆ. ಯಾವುದೇ ತೆರನಾದ ಸಾಲದ ಮೊತ್ತಕ್ಕೆ ಖಾತರಿದಾರರು ಎಂದು ಅರ್ಜಿದಾರರನ್ನು ತೋರಿಸಲಾಗಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಅರ್ಜಿದಾರರ ಪಾತ್ರ ಲ್ಲ ಎಂದಾದರೆ ಎಲ್‌ಓಸಿ ಜಾರಿಯನ್ನು ಸಮರ್ಥಿಸಲಾಗದು” ಎಂದು ಆದೇಶದಲ್ಲಿ ಹೇಳಿದೆ.

“ಒಂದೊಮ್ಮೆ ಅರ್ಜಿದಾರರು ಕಂಪೆನಿಯ ನಿರ್ದೇಶಕರು ಎಂದುಕೊಂಡರೂ ಸಾಲ ಮರುಪಾವತಿ ಮಾಡಿಲ್ಲ ಎಂಬ ಆಧಾರದ ಮೇಲೆ ಪ್ರಜೆಯ ಪ್ರವಾಸಕ್ಕೆ ಬ್ಯಾಂಕ್‌ ತಡೆಯೊಡ್ಡಲಾಗದು. ಎಲ್‌ಓಸಿ ಜಾರಿಯು ಗಂಭೀರ ಪರಿಣಾಮಗಳನ್ನು ಸೃಷ್ಟಿಸುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಸಾಲ ವಸೂಲಿ ಪ್ರಕ್ರಿಯೆಯು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯ ಮಂಡಳಿಯಲ್ಲಿ ಬಾಕಿ ಇದ್ದು, ಅದರಲ್ಲಿ ಅರ್ಜಿದಾರರು ಪಕ್ಷಕಾರರಲ್ಲ. ಅರ್ಜಿದಾರರು ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದ್ದರಿಂದ, ನಿರ್ದೇಶನ ನೀಡುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಈ ನೆಲೆಯಲ್ಲಿ ಉದ್ಯಮದ ಉದ್ದೇಶಕ್ಕಾಗಿ ಸೌದಿ ಅರೇಬಿಯಾ, ಯುಎಇಗೆ ತೆರಳಲು ನ್ಯಾಯಾಲಯವು ಅನುಮತಿಸಿದೆ.

ಪ್ರಕರಣದ ಹಿನ್ನೆಲೆ: ಖಾನ್‌ 35 ವರ್ಷಗಳಿಂದ ಮರದ ಉದ್ಯಮದಲ್ಲಿ ತೊಡಗಿದ್ದು, ಅಸೋಸಿಯೇಟ್‌ ಡೆಕರ್‌ ಲಿಮಿಟೆಡ್‌ ಸಂಸ್ಥೆಯನ್ನು ಕಂಪೆನಿಯ ಕಾಯಿದೆ ಅಡಿ 2007ರಲ್ಲಿ ನೋಂದಾಯಿಸಲಾಗಿದೆ.

199 ಕೋಟಿ ರೂಪಾಯಿ ಆಸ್ತಿಯನ್ನು ಅಡವಿಟ್ಟು ಕಂಪೆನಿಯು ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಸಾಲ ಪಡೆದಿತ್ತು. ಆ ಸಂದರ್ಭದಲ್ಲಿ ಅರ್ಜಿದಾರರು ಕಂಪೆನಿಯ ನಿರ್ದೇಶಕರಾಗಿದ್ದರೂ ಸಾಲಕ್ಕೆ ಖಾತರಿದಾರರಾಗಿರಲಿಲ್ಲ. ಖಾನ್‌ ಅವರು ಕಂಪೆನಿಯ ಕಾರ್ಯೇತರ ನಿರ್ದೇಶಕರಾಗಿದ್ದು, ಸಾಲಕ್ಕೆ ಅವರು ಖಾತರಿ ನೀಡಿರಲಿಲ್ಲ. ಸಾಲ ಮರುಪಾವತಿಯಾಗದಿದ್ದಾಗ ಬ್ಯಾಂಕ್‌ಗಳ ಒಕ್ಕೂಟವು ಅರ್ಜಿದಾರರ ವಿರುದ್ಧವೂ ಹಲವು ಪ್ರಕ್ರಿಯೆಗಳನ್ನು ಆರಂಭಿಸಿತ್ತು. ಇದರ ಭಾಗವಾಗಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com