ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನೌಕರನಿಗೆ ಸಂಬಂಧಿಸಿದ ಪರಿಹಾರ ವಿತರಣೆ ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯ ಅನುಸರಿಸಿದ್ದ ಮಾನದಂಡವನ್ನು ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯ ತಗಾದೆಗೂ ಅನ್ವಯಿಸುವ ಮೂಲಕ ಟೆಕ್ಕಿಯೊಬ್ಬರಿಗೆ ₹ 10 ಲಕ್ಷ ಪರಿಹಾರ ನೀಡಿ ಕೆಲಸದಿಂದ ಬಿಡುಗಡೆಗೊಳಿಸುವಂತೆ ಅರ್ಜಿದಾರ ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ (ವಿಎಂ ವೇರ್ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವರ್ಸಸ್ ಆಶೀಷ್ ಕುಮಾರ್ ನಾಥ್).
ವಿಎಂ ವೇರ್ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ ಎಸ್ ಮುದಗಲ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
“ಆದೇಶದ ಪ್ರತಿ ಸಿಕ್ಕ 30 ದಿನಗಳಲ್ಲಿ ಟೆಕ್ಕಿಗೆ ₹ 10 ಲಕ್ಷ ಪರಿಹಾರ ನೀಡಿ ಕಂಪೆನಿಯ ಕೆಲಸದಿಂದ ಬಿಡುಗಡೆಗೊಳಿಸಬೇಕು. ಸಕಾಲದಲ್ಲಿ ಹಣ ಪಾವತಿಸದಿದ್ದಲ್ಲಿ ವಾರ್ಷಿಕ ಶೇ. 10ರ ಬಡ್ಡಿ ಪಾವತಿಸಬೇಕು” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
“ಕಂಪೆನಿ ಮತ್ತು ಸಾಫ್ಟ್‌ವೇರ್ ಉದ್ಯೋಗಿಯ ನಡುವೆ ಉತ್ತಮ ಬಾಂಧವ್ಯ ಉಳಿದಿಲ್ಲ. ಹೀಗಾಗಿ, ಅವರನ್ನು ಕೆಲಸದಿಂದ ಬಿಡುಗಡೆ ಮಾಡುವುದು ಸೂಕ್ತ. ಕಾರ್ಮಿಕ ನ್ಯಾಯಾಲಯ ಈ ಪ್ರಕರಣವನ್ನು ತೀರ್ಮಾನ ಮಾಡಲು ಐದು ವರ್ಷ ತೆಗೆದುಕೊಂಡಿದೆ. ಪುನಾ ಈ ಪ್ರಕರಣವನ್ನು ಅಲ್ಲಿಗೆ ಮರಳಿಸಿದರೆ ಮತ್ತೆ ಐದು ವರ್ಷ ವಿಚಾರಣೆ ನಡೆಸಿದರೂ ಆಶ್ಚರ್ಯವಿಲ್ಲ. ಆದ್ದರಿಂದ, ಇದನ್ನು ಇಲ್ಲೇ ಪರಿಹರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಸಾಫ್ಟ್‌ವೇರ್ ಉದ್ಯೋಗಿಯಾದ ಆಶೀಷ್ ಕುಮಾರ್ ನಾಥ್ ಅವರು ವಿ ಎಂ ಸಾಫ್ಟ್‌ವೇರ್ ಕಂಪೆನಿಯಲ್ಲಿ ಹತ್ತು ತಿಂಗಳು ಕಾರ್ಯ ನಿರ್ವಹಿಸಿದ್ದರು. ಕಂಪೆನಿಯ ಮುಖ್ಯ ಕಚೇರಿ ಅಮೆರಿಕದಲ್ಲಿದ್ದು, ಬೆಂಗಳೂರಿನಲ್ಲಿ ಶಾಖೆ ಹೊಂದಿದೆ. ಆಶೀಷ್‌ಗೆ ಅಮೆರಿಕದಲ್ಲಿ ಉಳಿದು ಕೆಲಸ ಮಾಡುವ ಇಚ್ಛೆ ಇತ್ತು. ಇದನ್ನು ಮೌಖಿಕವಾಗಿ ವ್ಯಕ್ತಪಡಿಸಿದರೂ ಕಂಪೆನಿ ಆ ಕೋರಿಕೆಯನ್ನು ಮಾನ್ಯ ಮಾಡಿರಲಿಲ್ಲ. ಇದೇ ನೆಪದಲ್ಲಿ ಅಶೀಶ್ ಕಂಪನಿಯ ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ವಿಭಾಗದವರ ಜೊತೆ ಆಗಾಗ್ಗೆ ವಾಗ್ವಾದ ನಡೆಸಿದ್ದರು.
ಈ ಮಧ್ಯೆ, ಕಂಪೆನಿಯು ಆಶೀಷ್‌ಗೆ ಕೆಲದಿನಗಳ ಕಾಲ ವೃತ್ತಿ ಸಂಬಂಧಿತ ತರಬೇತಿ ಶಿಬಿರವೊಂದಕ್ಕೆ ತೆರಳುವಂತೆ ಸೂಚಿಸಿತ್ತು. ಕಂಪೆನಿ ಕೆಲಸದಿಂದ ತೆಗೆದು ಹಾಕುವ ಸಲುವಾಗಿಯೇ ಶಿಬಿರಕ್ಕೆ ತೆರಳಲು ಸೂಚಿಸುತ್ತಿದೆ ಎಂದು ಭಾವಿಸಿದ್ದ ಆಶೀಷ್ ಕಚೇರಿಗೆ ಗೈರಾಗಿದ್ದರು. ಇದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ್ದ ಕಂಪೆನಿಯು ಅವರನ್ನು ಕೆಲಸದಿಂದ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅಶೀಷ್ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಪ್ರಕರಣವನ್ನು ಐದು ವರ್ಷಗಳ ವಿಚಾರಣೆ ನಡೆಸಿದ್ದ ಬೆಂಗಳೂರಿನ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 2021ರ ಫೆಬ್ರುವರಿ 26ರಂದು ಆಶೀಷ್ ಅವರನ್ನು ಪುನಾ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಎಲ್ಲ ಹಿಂಬಾಕಿ ನೀಡಬೇಕು ಎಂದು ಕಂಪೆನಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಂಪೆನಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಪರಿಹಾರ ನೀಡಲು ಆದೇಶಿಸಿದೆ.