ಮುಂಬೈಗೆ ಅನತಿ ದೂರದಲ್ಲಿರುವ ಥಾಣೆಯ ಬದಲಾಪುರ್ ಶಿಶುವಿಹಾರಕ್ಕೆ ತೆರಳಿದ್ದ ಇಬ್ಬರು ಎಳೆಯ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಅಕ್ಷಯ್ ಶಿಂಧೆ ಎಂಬಾತನನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಎನ್‌ಕೌಂಟರ್ ಕುರಿತಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಕೋರಿ ಶಿಂಧೆ ಅವರ ತಂದೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಶಿಂಧೆ ಪೊಲೀಸರ ಬಳಿಯಿದ್ದ ಆಯುಧ ಕಸಿದುಕೊಂಡಿದ್ದರಿಂದ ಆತನ ಮೇಲೆ ಗುಂಡು ಹಾರಿಸುವಂತಾಯಿತು ಎಂಬ ಪೊಲೀಸರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಬಂದೂಕನ್ನೂ ರಕ್ಷಿಸಿಕೊಳ್ಳಲಾಗದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಅಂತಹ ಸಂದರ್ಭದಲ್ಲಿ ಆರೋಪಿಯ ಮೊಣಕಾಲಿನ ಕೆಳಗೆ ಗುಂಡು ಹಾರಿಸಬೇಕಿತ್ತು ಎನ್ನುವ ನಿಯಮವನ್ನು ಅದು ನೆನಪಿಸಿತು.
ಗುಂಡು ಹಾರಿಸಲು ತರಬೇತಿ ಪಡೆದ ಪೊಲೀಸರು ಆರೋಪಿಗಳನ್ನು ಹತ್ತಿಕ್ಕಲಾಗಲಿಲ್ಲ ಎಂಬುದನ್ನು ಹೇಗೆ ನಂಬಲು ಸಾಧ್ಯ? ಪೊಲೀಸರು ಶಿಂಧೆಯನ್ನು ಹತ್ತಿಕ್ಕಬಹುದಿತ್ತು. ಈ ಕಾರಣಕ್ಕೆ ಎನ್‌ಕೌಂಟರ್ ಪೊಲೀಸರ ಹೇಳಿಕೆ ಅನುಮಾನಾಸ್ಪದವಾಗಿ ತೋರುತ್ತಿದೆ ಎಂದು ಅದು ಹೇಳಿತು.
"ಇದನ್ನು ಎನ್‌ಕೌಂಟರ್ ಎಂದು ಕರೆಯಲಾಗುವುದಿಲ್ಲ. ಇದು ಎನ್‌ಕೌಂಟರ್ ಅಲ್ಲ," ಎಂದು ನ್ಯಾಯಾಲಯ ನುಡಿಯಿತು. ಶಿಂಧೆ ಈ ಹಿಂದೆ ಬಂದೂಕು ಬಳಸಿದ್ದನೇ ಎಂಬುದನ್ನು ಪೊಲೀಸರು ಖಚಿತಪಡಿಸಬೇಕು ಎಂದಿತು.
ಶಿಂಧೆ ಈ ಹಿಂದೆ ಬಂದೂಕು ಬಳಸಿದ್ದರೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಳ್ಳಬೇಕು. ಪ್ರಕರಣದ ತನಿಖೆ ನಿಸ್ಪಕ್ಷಪಾತವಾಗಿರಬೇಕು. ಶಿಂಧೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು ಎಂದ ಅದು ತನಿಖೆಯನ್ನು ಸಿಐಡಿಗೆ ವಹಿಸಲು ವಿಳಂಬ ಮಾಡಿದ ಕುರಿತಂತೆಯೂ ಅಸಮಾಧಾನ ವ್ಯಕ್ತಪಡಿಸಿತು.
ಸೆಪ್ಟೆಂಬರ್ 23 ಮತ್ತು 24 ರಂದು ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಶಿಂಧೆ ನಡುವಣ ನಡೆದಿರುವ ಸಂಭಾಷಣೆಯ ಕರೆ ವಿವರಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಪೊಲೀಸರು ಈ ಪ್ರಕರಣದಲ್ಲಿದ್ದರೂ ನಿಸ್ಪಕ್ಷಪಾತ ತನಿಖೆ ನಡೆಯಬೇಕು ಎಂದ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.