![[ಗಾಂಜಾ ಸಾಗಣೆ] ಆರೋಪ ಪಟ್ಟಿ ಜೊತೆಗೆ ಎಫ್‌ಎಸ್‌ಎಲ್ ವರದಿ ಸಲ್ಲಿಸಿಲ್ಲ ಎಂದು ಜಾಮೀನು ನೀಡಲಾಗದು: ಹೈಕೋರ್ಟ್](https://gumlet.assettype.com/barandbench-kannada%2F2021-12%2F6c1d23e4-dc95-4f7a-bac4-aa573ac7ebd6%2FWhatsApp_Image_2021_12_24_at_4_53_01_PM.jpeg?rect=0%2C0%2C1280%2C720&auto=format%2Ccompress&fit=max)
ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ (ಸಯ್ಯದ್ ಮೊಹಮ್ಮದ್ ವರ್ಸಸ್ ಕರ್ನಾಟಕ ಸರ್ಕಾರ).
ಗಾಂಜಾ ಕಳ್ಳ ಸಾಗಣೆ ಪ್ರಕರಣದ ಆರೋಪಿ ಸಯ್ಯದ್ ಮೊಹಮ್ಮದ್ ಅಲಿಯಾಸ್ ನಾಸಿಮ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಎಫ್‌ಎಸ್‌ಎಲ್ ವರದಿಯ ಅನುಪಸ್ಥಿತಿಯಿದ್ದ ಮಾತ್ರಕ್ಕೆ ದೋಷಾರೋಪ ಪಟ್ಟಿ ಅಪೂರ್ಣ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಸಿಲ್ಲ ಎಂಬ ಮಾತ್ರಕ್ಕೆ ಆರೋಪ ಪಟ್ಟಿ ದೋಷಪೂರಿತವಾಗುವುದಿಲ್ಲ. ಎಫ್‌ಎಸ್‌ಎಲ್ ವರದಿಯ ಅನುಪಸ್ಥಿತಿಯಲ್ಲಿ ಸಲ್ಲಿಸಿದ ಆರೋಪ ಪಟ್ಟಿಯನ್ನು ಅಪೂರ್ಣ ಎಂದು ಪರಿಗಣಿಸಿ, ಆರೋಪಿ ಜಾಮೀನು ಪಡೆಯುವ ಹಕ್ಕು ಹೊಂದಿರುತ್ತಾನೆ ಎಂದು ಹೇಳಲಾಗದು. ಸಿಆರ್‌ಪಿಸಿ ಸೆಕ್ಷನ್ 173(8)ರಲ್ಲಿ ಪ್ರಕರಣದ ಹೆಚ್ಚಿನ ತನಿಖೆಗೆ ಅವಕಾಶವಿದೆ. ಪೊಲೀಸರಿಗೆ ಅವಕಾಶ ಕಲ್ಪಿಸಿದರೆ, ನ್ಯಾಯಾಲಯಕ್ಕೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಾಮೀನು ಅರ್ಜಿ ವಜಾಗೊಳಿಸಿದೆ.
ಆರೋಪಿಯ ಪರ ವಕೀಲ ಹಸ್ಮತ್ ಪಾಷಾ ಅವರು “ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ದೋಷಪೂರಿತವಾಗಿದೆ. ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ವಸ್ತುವಿನ ಮಾದರಿಯನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಬರಬೇಕಿದೆ. ಎಫ್‌ಎಸ್‌ಎಲ್ ವರದಿಯ ಅನುಪಸ್ಥಿತಿಯಲ್ಲಿ, ವಶ ಪಡಿಸಿಕೊಂಡಿರುವ ವಸ್ತು ಯಾವುದು ಎಂದು ನಿಖರವಾಗಿ ಪತ್ತೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್ 167(2)ರ ಅಡಿಯಲ್ಲಿ ಆರೋಪಿಗೆ ಡಿಫಾಲ್ಟ್ ಜಾಮೀನು ಸಿಗುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸರು ತರಾತುರಿಯಲ್ಲಿ ಅಪೂರ್ಣವಾದ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದು ಸಿಆರ್‌ಪಿಸಿ ಸೆಕ್ಷನ್ 173(2)ರ ಉಲ್ಲಂಘನೆಯಾಗಿದೆ. ಆದ್ದರಿಂದ, ತಕ್ಷಣವೇ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ” ಎಂದು ವಾದಿಸಿದ್ದರು.
ಸರ್ಕಾರದ ಪರ ವಕೀಲೆ ಕೆ ಪಿ ಯಶೋಧಾ ಅವರು “ಎಫ್‌ಎಸ್‌ಎಲ್ ವರದಿ ಸಲ್ಲಿಸಿಲ್ಲ ಎಂದ ಮಾತ್ರಕ್ಕೆ ತನಿಖಾ ವರದಿ ದೋಷಾಪೂರಿತವಾಗಿದೆ ಎನ್ನಲಾಗದು. ವಿಚಾರಣೆ ಪ್ರಗತಿಯಲ್ಲಿರುವಾಗಲೇ ಎಫ್‌ಎಸ್‌ಎಲ್ ವರದಿಯನ್ನು ಮುಂದೆಯೂ ಸಲ್ಲಿಸಬಹುದು. ಆರೋಪಿಯಿಂದ ವಶ ಪಡಿಸಿಕೊಂಡಿರುವ ವಸ್ತು ಗಾಂಜಾ ಆಗಿರುವುದರಿಂದ, ರಚನೆ ಮತ್ತು ವಾಸನೆಯಿಂದ ಅದನ್ನು ಸುಲಭವಾಗಿ ಗುರುತಿಸಬಹುದು. ಎಫ್‌ಎಸ್‌ಎಲ್ ವರದಿ ಕೇವಲ ಔಪಚಾರಿಕತೆಯಾಗಿರುತ್ತದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು” ಎಂದಿದ್ದರು.
ಪ್ರಕರಣದ ಹಿನ್ನೆಲೆ: 2021ರ ಮೇ 25ರಂದು ಮೂಡಬಿದರೆ ಬಳಿ ಕಾರ್‌ನಲ್ಲಿ 60.60 ಕೆಜಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಎನ್‌ಡಿಪಿಎಸ್ ಕಾಯಿದೆ ಸೆಕ್ಷನ್ 8(ಸಿ), 20(2)(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ, ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.