

ಉದ್ದೇಶಿತ ಬೆಂಗಳೂರು ಅವಳಿ ಸುರಂಗ ರಸ್ತೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಕುರಿತು ಎಲ್ಲ ಸಂಭಾವ್ಯ ಗುತ್ತಿಗೆದಾರರಿಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್, ಯೋಜನೆಗೆ ಸಂಬಂಧಿಸಿದಂತೆ ನೀಡಲಾಗುವ ಯಾವುದೇ ಗುತ್ತಿಗೆಯು ಅರ್ಜಿ ಕುರಿತ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಜೋಡಿ ಸುರಂಗ ಮಾರ್ಗದ ಟೆಂಡರ್ ಪ್ರಶ್ನಿಸಿ ಕಲಾವಿದ ಪ್ರಕಾಶ್ ಬೆಳವಾಡಿ, ಇಂದಿರಾನಗರದ ಆದಿಕೇಶವುಲು ರವೀಂದ್ರ ಮತ್ತಿತರರು ಹಾಗೂ ಸಿಟಿಜನ್ ಆ್ಯಕ್ಷನ್ ಫೋರಂ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗಿಯ ಪೀಠ ವಿಚಾರಣೆ ನಡೆಸಿತು.
“ಸರ್ಕಾರದ ನೀತಿ ನಿರ್ಧಾರದ ವಿವೇಚನೆಯನ್ನು ನ್ಯಾಯಾಲಯ ಪರಿಶೀಲಿಸುವುದಿಲ್ಲ. ಬದಲಿಗೆ ಆ ನಿರ್ಧಾರವನ್ನು ಕಾನೂನಿನ ಪ್ರಕಾರ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಮಾತ್ರ ಪರಿಶೀಲಿಸಲಾಗುವುದು. ಬೆಂಗಳೂರಿನಲ್ಲಿ ಭಾರಿ ವಾಹನ ದಟ್ಟಣೆ ಇದ್ದು, ಅದಕ್ಕೆ ಈ ಯೋಜನೆ ಪರಿಹಾರ ಎಂದು ಸರ್ಕಾರ ಹೇಳುತ್ತದೆ. ಆದರೆ, ವಾಹನ ದಟ್ಟಣೆ ಸಮಸ್ಯೆಗೆ ಸುರಂಗ ಮಾರ್ಗವೇ ಸರಿಯಾದ ಪರಿಹಾರವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ಸರ್ಕಾರದ ಅಭಿಪ್ರಾಯಗಳಿಗೆ ನಮ್ಮ ಅಭಿಪ್ರಾಯಗಳನ್ನು ಬದಲಿಯಾಗಿ ಹೇರುತ್ತಿಲ್ಲ. ಆದರೆ, ಆ ನಿರ್ಧಾರಗಳು ಕಾನೂನುಬದ್ಧವಾಗಿರಬೇಕು” ಎಂದು ಪೀಠ ಹೇಳಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಈ ಯೋಜನೆಯನ್ನು ಬೆಂಗಳೂರಿನ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಮತ್ತು ನಗರ ಸಾರಿಗೆ ಯೋಜನೆಗೆ ಸಂಬಂಧಿಸಿದ ಶಾಸನಬದ್ಧ ಚೌಕಟ್ಟಿಗೆ ವಿರುದ್ಧವಾಗಿ ಜಾರಿಗೊಳಿಸಲಾಗುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು.
ಮತ್ತೊಬ್ಬ ಅರ್ಜಿದಾರ ಪ್ರಕಾಶ್ ಬೆಳವಾಡಿ ಪರ ಹಾಜರಾದ ಸಂಸದ ಹಾಗೂ ವಕೀಲ ತೇಜಸ್ವಿ ಸೂರ್ಯ ಅವರು “ನಾವು ಸರ್ಕಾರದ ನೀತಿ ಆಯ್ಕೆಯನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ ಆ ನಿರ್ಧಾರ ಕೈಗೊಂಡಿರುವ ವಿಧಾನವನ್ನು ಪ್ರಶ್ನಿಸುತ್ತಿದ್ದೇವೆ. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ನಡೆಸದಿರುವುದು ಹಾಗೂ ಯೋಜನೆಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿನ ಕಾರ್ಯವಿಧಾನದ ಲೋಪದೋಷಗಳು ಸೇರಿದಂತೆ ಈ ಯೋಜನೆಯು ಹಲವು ದೋಷಗಳಿಂದ ಕೂಡಿದೆ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ “ನ್ಯಾಯಾಲಯದ ಮುಂದೆ ಇರುವ ವಿಷಯವೂ ಇದೇ ಆಗಿದೆ. ಯೋಜನೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಸರ್ಕಾರದ ಪ್ರಕ್ರಿಯೆಯು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದಷ್ಟೇ ನ್ಯಾಯಾಲಯ ಪರಿಶೀಲಿಸಲಿದೆ ಎಂದು ಹೇಳಿತಲ್ಲದೆ, ಹಾಲಿ ಅರ್ಜಿಗಳ ವಿಚಾರಣೆ ಬಾಕಿ ಇರುವಾಗ ಯಾವುದೇ ಮುಂದಿನ ಹಕ್ಕುಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಲು, ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇರುವ ವಿಷಯವನ್ನು ಮೂರನೇ ವ್ಯಕ್ತಿಗಳಿಗೆ/ಗುತ್ತಿಗೆದಾರರಿಗೆ ತಿಳಿಸಬೇಕು. ಇನ್ನು ಮುಂದೆ ನೀಡಲಾಗುವ ಯಾವುದೇ ಗುತ್ತಿಗೆಯೂ ಈ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ” ಎಂದು ಆದೇಶಿಸಿ, ಅರ್ಜಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು.