ದೃಢವಾದ ಸಾಕ್ಷ್ಯಾಧಾರ, ಪುರಾವೆ ಇಲ್ಲದೆ ಜಾರಿ ನಿರ್ದೇಶನಾಲಯಕ್ಕೆ ರಾಜಕೀಯ ನಂಟಿದೆ ಎಂದು ತಾನು ಆರೋಪಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ [ಸಂಜಯ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ದೆಹಲಿಯ ಅಬಕಾರಿ ನೀತಿ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ, ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುವ ಇ ಡಿ ನಿರ್ದಿಷ್ಟ ರಾಜಕೀಯ ಪಕ್ಷದ ನಿಯಂತ್ರಣದಲ್ಲಿದೆ ಎಂಬ ಆರೋಪದ ಚರ್ಚೆಯ ಭಾಗ ತಾನಾಗುವುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದ್ದಾರೆ.
ಇ ಡಿ ದೇಶದ ಪ್ರಮುಖ ತನಿಖಾ ಸಂಸ್ಥೆಯಾದರೂ ಅದು ಜಾದೂಗಾರರಂತೆ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಲಾಗದು. ಸತ್ಯಾಂಶ ಕಂಡುಹಿಡಿಯಲು ಅದಕ್ಕೆ ನ್ಯಾಯಯುತ ಹಾಗು ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಪೀಠ ತಿಳಿಸಿದೆ.
ಇ ಡಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಕೆಲವು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ದೆಹಲಿ ಅಬಕಾರಿ ನೀತಿ (ಈಗ ರದ್ದಾಗಿರುವ) ರೂಪಿಸಿ ಜಾರಿಗೊಳಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಂಗ್ ವಿರುದ್ಧ ಆರೋಪ ಮಾಡಲಾಗಿತ್ತು.
ಸಿಂಗ್ ಅವರ ಬಂಧನದಿಂದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಪಕ್ಷದ ಮೂವರು ನಾಯಕರ ಬಂಧನವಾದಂತಾಗಿದೆ. ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ.