ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಾವತಿಗೆ ಮೀನಮೇಷ: ಕೇಂದ್ರ ಗೃಹ ಇಲಾಖೆ, ಕೆನರಾ ಬ್ಯಾಂಕ್‌ಗೆ ₹1 ಲಕ್ಷ ದಂಡ

ಲೈಫ್‌ ಸರ್ಟಿಫಿಕೇಟ್ ಸಲ್ಲಿಸಿದ ಬಳಿಕ ಮತ್ತೆ ಪಿಂಚಣಿ ಬಿಡುಗಡೆಗೊಳಿಸಲಾಗಿತ್ತಾದರೂ 2017ರ ನ. 1ರಿಂದ 2018ರ ಡಿ. 24ರವರೆಗೆ ತಡೆ ಹಿಡಿದಿದ್ದ ಪಿಂಚಣಿಯ ಬಾಕಿ ಪಾವತಿಸಿರಲಿಲ್ಲ. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Justice M Nagaprasanna and Karnataka HC
Justice M Nagaprasanna and Karnataka HC

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಬರಬೇಕಿದ್ದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯ ಬಾಕಿ ಪಾವತಿಸದೆ ಇಳಿವಯಸ್ಸಿನಲ್ಲಿ ಅವರನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದ ಕೇಂದ್ರ ಗೃಹ ಸಚಿವಾಲಯ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆನರಾ ಬ್ಯಾಂಕ್‌ಗೆ ಈಚೆಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಬರಬೇಕಿದ್ದ 3,71,280 ರೂಪಾಯಿ ಬಾಕಿಯನ್ನು ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.

ಜೀವಿತ ಪ್ರಮಾಣಪತ್ರ (ಲೈಫ್‌ ಸರ್ಟಿಫಿಕೇಟ್) ಸಲ್ಲಿಸದ ಕಾರಣಕ್ಕೆ 2017-2018ನೇ ಸಾಲಿನಲ್ಲಿ ತಡೆಹಿಡಿದಿದ್ದ ಪಿಂಚಣಿಯ ಬಾಕಿ ಪಾವತಿಸದ ಬ್ಯಾಂಕ್‌ನ ಕ್ರಮ ಪ್ರಶ್ನಿಸಿ ಮಲ್ಲೇಶ್ವರದ ನಿವಾಸಿ, 101 ವರ್ಷದ ಎಚ್ ನಾಗಭೂಷಣ್ ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ದಂಡದ ಮೊತ್ತವನ್ನು ಎರಡು ವಾರದೊಳಗೆ ಅರ್ಜಿದಾರರಿಗೆ ಪಾವತಿಸಬೇಕು. ತಪ್ಪಿದರೆ, ವಾರ್ಷಿಕ ಶೇ.18 ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪಿಂಚಣಿ ಎನ್ನುವುದು ಉಪಕಾರವಲ್ಲ: ಪಿಂಚಣಿ ಎನ್ನುವುದು ಯಾರಿಗೋ ಮಾಡುವ ಉಪಕಾರವಲ್ಲ. ಅದು ಪಿಂಚಣಿದಾರರಿಗೆ ಸಾಮಾಜಿಕ-ಆರ್ಥಿಕ ನ್ಯಾಯದ ಅಡಿಯಲ್ಲಿ ಭದ್ರತೆಯನ್ನು ನೀಡುತ್ತದೆ. ಜೀವನದ ಅಂತಿಮ ಹಂತದಲ್ಲಿ ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗದಂತೆ ಸಹಕಾರಿಯಾಗಲಿದೆ. ಆದರೆ, ವಯಸ್ಸಾದ ವ್ಯಕ್ತಿಯೊಬ್ಬರಿಗೆ ಜೀವನ ಪ್ರಮಾಣಪತ್ರ ಸಲ್ಲಿಸಲಾಗಿಲ್ಲ ಎಂಬ ಕಾರಣ ನೀಡಿ ಪಿಂಚಣಿ ತಡೆಹಿಡಿಯಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪಿಂಚಣಿ ಹಕ್ಕು ಕಸಿದುಕೊಳ್ಳಲು ಅವಕಾಶ ನೀಡಬಾರದು. ಆದ್ದರಿಂದ, ಅರ್ಜಿದಾರರಿಗೆ ಬರಬೇಕಿರುವ ಪಿಂಚಣಿಯ ಬಾಕಿ ಮೊತ್ತ ಪಾವತಿಸುವ ಜತೆಗೆ, 101 ವರ್ಷದ ಇಳಿವಯಸ್ಸಿನಲ್ಲಿ ಅವರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿರುವುದರಿಂದ ಒಂದು ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸ್ವಾತಂತ್ರ್ಯ ಹೋರಾಟಗಾರರಾಗಿರುವ ಅರ್ಜಿದಾರರು 1974ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ವಾತಂತ್ರ್ಯ ಸೈನಿಕ ಸಮ್ಮಾನ್ ಗೌರವಧನ ಪಡೆದುಕೊಳ್ಳುತ್ತಿದ್ದರು. ಇದಕ್ಕಾಗಿ ಮಲ್ಲೇಶ್ವರದ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಖಾತೆ ಹೊಂದಿದ್ದರು. ಈ ನಡುವೆ 2017ರ ನವೆಂಬರ್‌ 1ರಿಂದ ಪಿಂಚಣಿ ಸ್ಥಗಿತಗೊಂಡಿತ್ತು. ಈ ಕುರಿತು ವಿಚಾರಿಸಿದಾಗ, 2017-18ರ ಅವಧಿಯ ಜೀವಿತ ಪ್ರಮಾಣಪತ್ರ ಸಲ್ಲಿಸದ ಕಾರಣಕ್ಕೆ ಪಿಂಚಣಿ ಸ್ಥಗಿತಗೊಂಡಿರುವುದು ತಿಳಿದುಬಂದಿತ್ತು. ಲೈಫ್‌ ಸರ್ಟಿಫಿಕೇಟ್ ಸಲ್ಲಿಸಿದ ಬಳಿಕ ಮತ್ತೆ ಪಿಂಚಣಿ ಬಿಡುಗಡೆಗೊಳಿಸಲಾಗಿತ್ತಾದರೂ 2017ರ ನವೆಂಬರ್‌ 1ರಿಂದ 2018ರ ಡಿಸೆಂಬರ್‌ 24ರವರೆಗೆ ತಡೆ ಹಿಡಿದಿದ್ದ ಪಿಂಚಣಿಯ ಬಾಕಿ ಪಾವತಿಸಿರಲಿಲ್ಲ. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com